ಮೂಡಲಗಿ – ನಗರದಲ್ಲಿ ಪ್ರಧಾನ ಮಂತ್ರಿ ಮೋದಿಯವರ ಸ್ವಚ್ಛ ಭಾರತ ಅಭಿಯಾನವೆಂಬುದು ಕಾಣೆಯಾಗಿದ್ದು ನಗರದ ಎಲ್ಲೆಡೆ ಕಸ, ಕಡ್ಡಿ, ತಿಪ್ಪೆಗಳು ಕಂಗೊಳಿಸುತ್ತಿವೆ.
ಇದರಿಂದ ನಗರದ ತುಂಬೆಲ್ಲ ಸೊಳ್ಳೆಗಳ ಕಾಟ ವಿಪರೀತವಾಗಿದ್ದು ಇದನ್ನೆಲ್ಲ ನಿರ್ಲಕ್ಷಿಸಿರುವ ಪುರಸಭೆ ನಾಗರಿಕರ ಆರೋಗ್ಯದ ಜೊತೆ ಚೆಲ್ಲಾಟವಾಡುತ್ತಿದೆ.
ದುರ್ಗಾನಗರದ ದುರ್ಗಮ್ಮ ದೇವಿಯ ಸ್ವಾಗತ ಕಮಾನಿನ ಅಕ್ಕಪಕ್ಕ ತಿಪ್ಪೆಗಳ ರಾಶಿ ಬಿದ್ದಿದ್ದು ದೇವಿಯ ಗುಡಿಗೆ ಭಕ್ತರನ್ನು ಗಬ್ಬುವಾಸನೆಯಿಂದ ಸ್ವಾಗತ ಮಾಡುತ್ತಿರುವಂತೆ ಕಾಣುತ್ತಿದೆ. ಆ ತಿಪ್ಪೆಯನ್ನು ಹಂದಿಗಳು ಕೆದರಿ ಮತ್ತಷ್ಟು ರಸ್ತೆಯಲ್ಲಿ ಹರಡುವಂತೆ ಮಾಡುತ್ತಿವೆ. ಈ ಅಧ್ವಾನ ಪುರಸಭೆಯ ಆರೋಗ್ಯಾಧಿಕಾರಿಯಾಗಲಿ, ಇಂಜಿನೀಯರಾಗಲಿ, ಮುಖ್ಯಾಧಿಕಾರಿಗಳ ಕಣ್ಣಿಗೆ ಬಿದ್ದಿದೆಯೋ ಇಲ್ಲವೋ ಗೊತ್ತಿಲ್ಲ ಆದರೆ ನಗರದ ಸೌಂದರ್ಯಕ್ಕಂತೂ ಒಂದು ಕಪ್ಪು ಚುಕ್ಕೆ ಇಟ್ಟಂತಿದೆ !
ಈಗಲೇ ಹೀಗೆ ಇದೆ. ಇಷ್ಟರಲ್ಲಿಯೇ ಮಳೆಗಾಲ ಆರಂಭವಾಗುತ್ತಿದ್ದು ಒಂದು ಭರ್ಜರಿ ಮಳೆ ಬಿದ್ದರೆ ಇಲ್ಲಿನ ತಿಪ್ಪೆಗಳಲ್ಲಿನ ರಾಶಿ ಕಸವೆಲ್ಲ ಮಳೆ ನೀರಿನೊಂದಿಗೆ ಹರಿದು ಬಡ ಜನರ ಮನೆಯೊಳಗೆ ಹೋಗಬಹುದಾಗಿದೆ. ಈ ಥರ ಹಿಂದೊಮ್ಮೆ ಭಾರೀ ಮಳೆಗೆ ಇಲ್ಲಿನ ಲಂಡ್ಯಾನ ಹಳ್ಳ ತುಂಬಿ ಹರಿದು ನೆಲಮಟ್ಟದ ಮನೆಯೊಳಗೆಲ್ಲ ಹರಿದು ಹೋಗಿ ಜನರ ಜೀವನವನ್ನೇ ಗಬ್ಬುಮಯವನ್ನಾಗಿ ಮಾಡಿತ್ತು ಆ ಥರ ಮತ್ತೊಮ್ಮೆ ಆಗದಂತೆ ಪುರಸಭೆ ಕಾರ್ಯಪ್ರವೃತ್ತವಾಗಬೇಕಾಗಿದೆ.
ಭಾರೀ ಮಳೆಗೆ ನಗರದಲ್ಲಿ ಯಾವುದೇ ಅಸ್ತವ್ಯಸ್ತವಾಗದಂತೆ ನಗರದ ಗಟಾರುಗಳನ್ನು ಸ್ವಚ್ಛ ಮಾಡುವ ಕಾರ್ಯ ಆರಂಭಿಸಬೇಕಾಗಿದೆ. ನಗರದಲ್ಲಿ ಎಲ್ಲಾ ಕಡೆ ಚರಂಡಿಗಳು ಬ್ಲಾಕ್ ಆಗಿವೆ. ಅವುಗಳನ್ನು ತೆರವುಗೊಳಿಸಬೇಕು. ಇಳಿಜಾರಿನಲ್ಲಿ ಇರುವ ಮನೆಗಳ ಸುರಕ್ಷತೆಗೆ ಕ್ರಮ ಕೈಗೊಳ್ಳಬೇಕು. ಸೊಳ್ಳೆಗಳ ಕಾಟ ಹೆಚ್ಚಾಗಿದ್ದು ಅದರ ಬಗ್ಗೆ ಕ್ರಮ ಕೈಗೊಳ್ಳಬೇಕು.
ಒಟ್ಟಿನಲ್ಲಿ ಸ್ವಚ್ಛ ಭಾರತ ಅಭಿಯಾನಕ್ಕೆ ಮೂಡಲಗಿ ಪುರಸಭೆ ಮತ್ತೊಮ್ಮೆ ಚಾಲನೆ ನೀಡಬೇಕೆಂಬುದು ನಗರದ ಪ್ರಜ್ಞಾವಂತ ಹಾಗೂ ಸಾಮಾನ್ಯ ಜನರ ಅಭಿಪ್ರಾಯವಾಗಿದೆ. ಇನ್ನಾದರೂ ಪುರಸಭೆ ಕಾರ್ಯಪೃವೃತ್ತವಾಗುತ್ತದೆಯೋ ಕಾದು ನೋಡಬೇಕು.
ಉಮೇಶ ಬೆಳಕೂಡ, ಮೂಡಲಗಿ