ಭಗವಂತನಿಗೆ ಅರ್ಪಿಸಿ ಮಾಡುವ ಸೇವೆ ಅತ್ಯಂತ ಶ್ರೇಷ್ಠ ವಾದದ್ದು !
ಮುಲ್ಲೈಕ್ಕೊಡು ಎಂದು ತಮಿಳುನಾಡಿನ ಒಂದು ಪುಟ್ಟ ಗ್ರಾಮ. ಅಲ್ಲಿ ಶ್ರೀಕೃಷ್ಣ ನ ಒಂದು ಸುಂದರವಾದ ದೇವಾಲಯ. ಅರ್ಚಕರೂ ಅವರಿಗೆ ಸಹಾಯಕನಾಗಿದ್ದ ತುಳಸಿ ಎಂಬ ಯುವಕನೂ ದಿನವೂ ಬೆಳಿಗ್ಗೆ ನಾಲ್ಕು ಗಂಟೆಗೇ ಎದ್ದು ಶುಚಿಯಾಗಿ ದೇವಸ್ಥಾನಕ್ಕೆ ಬರುತ್ತಿದ್ದರು. ದೇವಾಲಯದ ಪಕ್ಕದಲ್ಲೇ ಒಂದು ಹೂದೋಟ. ತೋಟದಿಂದ ಹೂಗಳನ್ನು ತಂದು ದೇವರೀಗೆ ಮಾಲೆಯಾಗಿ ಕಟ್ಟಿಕೊಡುವ ಕೆಲಸ ತುಳಸಿಯದು. ಅವನೋ ಪರಮ ಕೃಷ್ಣ ಭಕ್ತ. ಸದಾ ಕೃಷ್ಣಧ್ಯಾನ ನಿರತ.
ತೋಟದಲ್ಲಿ ಹೂಗಳನ್ನು ಕೀಳುವಾಗಲೂ ಅವನಿಗೆ ಕೃಷ್ಣನದೇ ನೆನಪು. ಕೃಷ್ಣಾರ್ಪಣಂ ಎಂದು ಮನದಲ್ಲಿ ಹೇಳಿಕೊಂಡೇ ಹೂಗಳನ್ನು ಕಿತ್ತು ಪೋಣಿಸಿ ಹಾರ ಮಾಡುವನು ಈ ಭಕ್ತ. ಹತ್ತು ಹದಿನೈದು ಮಾಲೆಗಳನ್ನು ಸಿದ್ಧ ಪಡಿಸಿದ ಮೇಲೆ ಕೃಷ್ಣನಿಗೆ ಅವನ್ನು ತಾನೇ ಮುಡಿಸಿದಂತೆ ಭಾವಿಸಿಕೊಂಡು ಅದೇ ನೆನಪಿನಲ್ಲೇ ಅರ್ಚಕರ ಬಳಿಗೆ ಅವನ್ನು ತಲುಪಿಸಿಬಿಡುವನು.
ಇತ್ತ ಅರ್ಚಕರು ಅವನಿತ್ತ ಮಾಲೆಗಳನ್ನು ಶ್ರೀ ಕೃಷ್ಣನ ಮಂಗಳ ಮೂರ್ತಿಗೆ ಮುಡಿಸಿ ಅಲಂಕಾರ ಮಾಡಲು ಹೋದರೆ, ಅದಾಗಲೇ ದೇವರು ಒಂದು ಹೊಸ ಮಾಲೆಯನ್ನು ಧರಿಸಿ ಹುರುಪಿನೊಂದಿಗೆ ಇವರನ್ನು ಎದುರುಗೊಳ್ಳಲು ಸಿದ್ಧನಾಗಿರುತ್ತಿದ್ದ. ಹಳೆಯ ನಿರ್ಮಾಲ್ಯವನ್ನು ತೆಗೆದು ಹೊಸ ಮಾಲೆಯನ್ನು ದೇವರಿಗೆ ಹಾಕಿ ಅಲಂಕಾರ ಮಾಡಬೇಕೆಂದಿದ್ದ ಅರ್ಚಕರಿಗೆ ಒಂದು ಕಡೆ ನಿರಾಸೆ. ಇನ್ನೊಂದೆಡೆ ಅಚ್ಚರಿ. ಇದು ಹೇಗೆ ಸಾಧ್ಯ ? ಎಂದು ಯೋಚಿಸಿದ ಅವರು ಇದು ತುಳಸಿಯದೇ ಕುಚೇಷ್ಟೆ ಎಂದು ಸಂದೇಹಿಸಿ,ಅವನು ತಾನೇ ಕೈಯಿಂದ ದೇವರಿಗೆ ಹೂ ಮುಡಿಸಿದನಲ್ಲಾ ಎಂದು ಖೇದ ಪಟ್ಟರು. ತತ್ಕ್ಷಣವೇ ಅವನನ್ನು ಕರೆದು , “ತುಳಸಿ! ಇದು ಬಹಳ ಅಧಿಕ ಪ್ರಸಂಗ! ನೀನು ಮಾಲೆಯನ್ನು ಹೆಣೆದು ಕೊಡಬೇಕೇ ವಿನಃ ನೀನೇ ದೇವರಿಗೆ ಮುಡಿಸಬಾರದು ” ಎಂದರು. ಅವನೋ, “ಸ್ವಾಮಿ, ನಾನು ಖಂಡಿತ ದೇವರಿಗೆ ಮುಡಿಸಿಲ್ಲ. ಕಟ್ಟಿದ 15 ಮಾಲೆಗಳನ್ನೂ ನಿಮ್ಮ ಬಳಿಯೇ ಕೊಟ್ಟಿದ್ದೇನೆ “ಎಂದ.
“ನಾಳೆಯಿಂದ ನೀನು ಮಾಲೆ ಕಟ್ಟಬೇಡ. ಇನ್ನು ಮೇಲೆ ಹಂಡೆಗಳಿಗೆ ನೀರು ತುಂಬುವ ಕೆಲಸ ಮಾಡು ಸಾಕು ” ಎಂದು ಕಟ್ಟಪ್ಪಣೆ ಮಾಡಿದರು ಅರ್ಚಕರು.
ಇದು ಭಗವಂತನ ಹೊಸ ಆಜ್ಞೆ ಎಂದು ಭಾವಿಸಿದ ತುಳಸಿ ಮರುದಿನದಿಂದ ನೀರು ತುಂಬಲಾರಂಭಿಸಿದ. ನೀರೆತ್ತುವಾಗಲೂ ಹಂಡೆಗಳಿಗೆ ತುಂಬುವಾಗಲೂ ಕೃಷ್ಣಾರ್ಪಣ ಎಂದೇ ನೆನೆಯುತ್ತಿದ್ದ. ಅವನ ಮನವೂ ತುಂಬುತ್ತಿತ್ತು. ಅರ್ಚಕರು ಎಂದಿನಂತೆ ಗರ್ಭಗುಡಿಗೆ ಪ್ರವೇಶಿಸಿ ಶ್ರೀಕೃಷ್ಣನಿಗೆ ಅಭಿಷೇಕ ಮಾಡಲು ಹೋಗುತ್ತಾರೆ. ಅರೇ! ಆಗ ತಾನೇ ಶುದ್ಧ ಜಲದಿಂದ ಮಿಂದಂತೆ ಕೃಷ್ಣ ಶುಭ್ರನಾಗಿ ಮಿಂಚುತ್ತಿದ್ದ. ಗರ್ಭಗುಡಿಯಲ್ಲೆಲ್ಲ ನೀರು. ಮೈಯಿಂದ ನೀರು ತೊಟ್ಟಿಕ್ಕುತ್ತಿದ್ದ ಕೃಷ್ಣ ಅರ್ಚಕರನ್ನು ಕಂಡು ಮುಸಿನಗುತ್ತಿದ್ದ.
ಮತ್ತೆ ಅರ್ಚಕರಿಗೆ ಕಡುಕೋಪ! ತುಳಸಿಯನ್ನು ಕರೆದು “ಏನೋ , ದೇವರಿಗೆ ಅಭಿಷೇಕ ಮಾಡುವಷ್ಟು ಧೈರ್ಯ ಬಂತೇ ನಿನಗೆ! ನಿನ್ನಿಂದ ನನಗೆ ಉಪಕಾರಕ್ಕೆ ಬದಲಾಗಿ ತೊಂದರೆಯೇ ಹೆಚ್ಚಾಯ್ತು” ಎಂದೆಲ್ಲಾ ಬೈಯಲಾರಂಭಿಸಿದರು. ತುಳಸಿಗೋ ಕಣ್ಣುಗಳಿಂದ ಧಾರಾಕಾರವಾಗಿ ನೀರು ಸುರಿಯಲಾರಂಭಿಸಿತು. “ಸ್ವಾಮಿ, ನಾನು ಹಂಡೆಗಳಲ್ಲಿ ನೀರು ತುಂಬಿದೆ ಅಷ್ಟೇ! ಅಯ್ಯೋ! ಕೃಷ್ಣನಿಗೆ ಅಭಿಷೇಕ ಮಾಡುವುದು ಹೇಗೆಂದೇ ನನಗೆ ತಿಳಿಯದು” ಎಂದ!ಸರಿ.
ಮಾರನೆಯ ದಿನವೇ ಅರ್ಚಕರು ಅವನನ್ನು ದೇವರಿಗೆ ನೈವೇದ್ಯ ತಯಾರಿಸುವ ಪಾಕಶಾಲೆಗೆ ವರ್ಗಾಯಿಸಿದರು. ಅಡುಗೆ ಭಟ್ಟರಿಗೆ ಅವನು ಸಹಾಯಕನಾದ. ಇಲ್ಲಿಯೂ, ತರಕಾರಿ ಹೆಚ್ಚುವಾಗಲೂ ಇತರ ಕೆಲಸಗಳನ್ನು ಮಾಡುವಾಗಲೂ ಕೃಷ್ಣಾರ್ಪಣ ಎನ್ನುತ್ತಲೇ ತನ್ನ ಕೈಂಕರ್ಯವನ್ನೇ ಕೃಷ್ಣನಿಗೆ ಸಮರ್ಪಿಸುತ್ತಿದ್ದ. ಅರ್ಚಕರು ಈ ಬಾರಿ ಬಹಳ ಜಾಗರೂಕರಾಗಿ, ಗರ್ಭಗೃಹದ ಬಾಗಿಲಿಗೆ ಬೀಗ ಜಡಿದು ಕೀಲಿಕೈಯನ್ನು ತನ್ನೊಡನೆ ತೆಗೆದುಕೊಂಡು ಹೋಗಿಬಿಟ್ಟರು.
ಮರುದಿನ ಯಥಾಪ್ರಕಾರ ಬೀಗ ತೆರೆದವರು ಕೃಷ್ಣನನ್ನು ನೋಡುತ್ತಾ ಬೆಪ್ಪಾಗಿ ನಿಂತರು! ಕೃಷ್ಣನ ಬಾಯಲ್ಲಿ ಘಮಘಮಿಸುವ ಸಕ್ಕರೆ ಪೊಂಗಲ್ ಇಣುಕುತ್ತಿತ್ತು. ಅತ್ತ ಅಡುಗೆಮನೆಯಲ್ಲಿ ಸಕ್ಕರೆ ಪೊಂಗಲ್ ಆಗ ತಾನೇ ಸಿದ್ಧವಾಗುತ್ತಿತ್ತು. “ಅಷ್ಟರಲ್ಲೇ ಅದು ಇಲ್ಲಿಗೆ ಹೇಗೆ ಬಂತು. ನಾನೂ ಬೀಗ ಹಾಕಿ ತಾನೇ ಮನೆಗೆ ಹೋಗಿದ್ದು? ಇಲಿಯೋ ಬೆಕ್ಕೋ ಯಾವುದಾದರೂ ಒಂದು ವೇಳೆ ತಂದಿರಬಹುದೇನೋ !! ಎಂದೆಲ್ಲಾ ಅರ್ಚಕರಿಗೆ ಯೋಚನೆ. ಈ ತುಳಸಿಯೊಬ್ಬ! ಅವನಿಗೆ ಯಾವ ಕೆಲಸ ಕೊಟ್ಟರೂ ಅದು ಹೇಗೋ ನನಗಿಂತ ಮುಂಚೆಯೇ ಕೃಷ್ಣನಿಗೆ ಸೇರಿಬಿಡುವುದಲ್ಲಾ !! ಅವನೇನು ಮಂತ್ರವಾದಿಯೋ ಎಂದು ಗಾಬರಿಗೊಂಡರು.
ಸರಿ! ಅಂದು ಅವನನ್ನೇನೂ ಬೈಯದೇ “ತುಳಸಿ! ನಾಳೆಯಿಂದ ನೀನು ದೇವಸ್ಥಾನದ ಹೊರಗೆ ಕುಳಿತು ಭಕ್ತಾದಿಗಳ ಚಪ್ಪಲಿ ಕಾಯುವ ಕೆಲಸ ಮಾಡು. ನೀನು ಅದಕ್ಕೇ ಲಾಯಕ್ಕು” ಎಂದರು! ಅವರ ಮನಸ್ಸಿನಲ್ಲಿ ಒಂದು ಯೋಚನೆ. ” ಹೂವು, ನೀರು,ಪ್ರಸಾದ ಎಲ್ಲವೂ ಉತ್ತಮ ದ್ರವ್ಯಗಳು.ಅದು ಹೇಗೋ ದೇವರ ಬಳಿ ಬಂದು ಸೇರಿಬಿಟ್ಟವು. ಈಗ ಇವನು ಕಾಯುತ್ತಿರುವುದು ಚಪ್ಪಲಿ ತಾನೇ! ನೋಡೋಣ ” ಎಂದು.
ಇದೂ ಭಗವಂತನ ಆಜ್ಞೆ ಎಂದು ತಲೆಬಾಗಿದ ತುಳಸಿ ಅಂದಿನಿಂದ ಮುಖ್ಯದ್ವಾರದ ಬಳಿ ನಿಂತು ಭಕ್ತರ ಪಾದರಕ್ಷೆಗಳನ್ನು ಕಾಯತೊಡಗಿದ. ಬಾಯಲ್ಲಿ ಮಾತ್ರ ಅದೇ ಮಂತ್ರ! ಕೃಷ್ಣಾರ್ಪಣಂ!!! ಅರ್ಚಕರು ಎಂದಿನಂತೆ ಬೀಗಹಾಕಿ ಹೊರಟರು.
ಮರುದಿನ ಬೆಳಿಗ್ಗೆ ಗರ್ಭಗೃಹದ ಬಾಗಿಲನ್ನು ತೆರೆದ ಅರ್ಚಕರು ಕಂಡ ದೃಶ್ಯ??
ದಂಗಾಗಿ ನಡುಗಿಬಿಟ್ಟರು ಅವರು. ಕೃಷ್ಣನ ಪಾದದ ಬಳಿ ಒಂದು ಜೊತೆ ಪಾದರಕ್ಷೆ ! ಅದೂ ಪಾದಕಮಲದಲ್ಲಿ, ಪಾದುಕೆಯಿರಬೇಕಾದ ಪೀಠದಲ್ಲಿ ಸಾಧಾರಣವಾದ ಚರ್ಮದ ಚಪ್ಪಲಿ. ಹೇ ಕೃಷ್ಣ! ಅಪಚಾರವಾಯಿತಲ್ಲ ! ಇದು ಇಲ್ಲಿಗೆ ಹೇಗೆ ಬಂತು ! ಎಂಥವನಿಗೂ ಗರ್ಭಗುಡಿಯ ಬೀಗ ಮುರಿದು ಹೀಗೆ ಸಾಧಾರಣ ಚಪ್ಪಲಿಯನ್ನು ದೇವರ ಪಾದದ ಬಳಿ ಇಡಲು ಹೇಗೆ ಮನಸ್ಸು ಬಂದೀತು ಎಂದೆಲ್ಲ ಹಲುಬಿದರು. ಭಯದಿಂದ ಗಾಬರಿಯಿಂದ ಬೆವೆತು ನೀರಾದರು. ಆಗ!!! ಎಲ್ಲಿಂದಲೋ ಒಂದು ವಾಣಿ ಕೇಳಿಸಿತು.
“ಅರ್ಚಕರೇ ಹೆದರಬೇಡಿ. ನಾನಿದ್ದೇನೆ. ಆ ನನ್ನ ಭಕ್ತ ತುಳಸಿಗೆ ನೀವು ಏನು ಕೆಲಸ ಕೊಟ್ಟರೂ ಅವನು ಕೃಷ್ಣಾರ್ಪಣ ಎಂದು ನನಗೆ ಕಾಣಿಕೆ ಸಲ್ಲಿಸಿಬಿಡುತ್ತಾನೆ. ಹೀಗೆ ಅವನು ಅರ್ಪಿಸುವ ಎಲ್ಲವನ್ನೂ ನಾನು ಮನಸಾರೆ ಸ್ವೀಕರಿಸುತ್ತೇನೆ. ಮನಸ್ಸೆಲ್ಲೋ ಬೇರೆಡೆ ಇದ್ದು ಮಾಡುವ ಪೂಜೆಗಿಂತ ಎಲ್ಲವೂ ಕೃಷ್ಣನಿಗೇ ಅರ್ಪಣೆ ಎನ್ನುವವನ ಪ್ರೀತಿಯನ್ನೇ ನಾನು ಸ್ವೀಕರಿಸುತ್ತೇನೆ. ತುಳಸೀ ಒಬ್ಬ *ಯೋಗಿ* ಆವನ ಭಕ್ತಿ ನನಗೆ ಬಹಳ ಪ್ರಿಯ ”
ಕೃಷ್ಣಪರಮಾತ್ಮನ ಆ ವಾಣಿಯನ್ನು ಕೇಳಿ ಅರ್ಚಕರು ದೇವಾಲಯದ ಹೊರಗೋಡಿದರು. ತುಳಸಿಯ ಪಾದಗಳಿಗೆ ಸಾಷ್ಟಾಂಗ ಪ್ರಣಾಮ ಮಾಡಿದರು.
ಸಂಗ್ರಹ:
ಮಯಿ ಸರ್ವಾಣಿ ಕರ್ಮಾಣಿ ಸಂನ್ಯಸ್ಯ ಅಧ್ಯಾತ್ಮ ಚೇತಸಾ,
ನಿರಾಶೀರ್ನಿರ್ಮಮೋ ಭೂತ್ವಾ ಯುಧ್ಯಸ್ವ ವಿಗತ ಜ್ವರಃ.. ಗೀತೆ 3 , 30.
ನಿನ್ನ ಮನವನ್ನು ಸದಾ ನನ್ನಲ್ಲೇ ನೆಟ್ಟು ಆಸೆ ಆಹಂಕಾರಗಳನ್ನು ಬಿಟ್ಟು, ಎಲ್ಲ ಕೆಲಸಗಳನ್ನೂ ನನಗೋಸ್ಕರವೇ ಮಾಡು…
ಭಗವದ್ಭಕ್ತರೇ! ನಾವು ಅಂಗಡಿಗಳಲ್ಲಿ ಹಣ್ಣು ಕೊಂಡು ಅಲ್ಲೇ ಕಚ್ಚಿ ತಿಂದು ಬಿಡುತ್ತೇವೆ. ಹೆಂಗಸರು ಹೂವಿನಂಗಡಿಗಳಲ್ಲಿ ಹೂವನ್ನು ಕೊಂಡು ತತ್ಕ್ಷಣವೇ ಮುಡಿದೂ ಬಿಡುತ್ತಾರೆ. ಈ ಹಣ್ಣನ್ನಾಗಲೀ ಹೂವನ್ನಾಗಲೀ ದೇವರಿಗೆ ಅರ್ಪಿಸಲು ಮಂದಿರಕ್ಕೇ ಹೋಗಬೇಕೆಂದಿಲ್ಲ. ಕೊಂಡ ಕ್ಷಣದಲ್ಲೇ ಮನದಲ್ಲಿ ಭಗವಂತನನ್ನು ನೆನೆದು, “ಇದು ನಿನ್ನ ದಯೆಯಿಂದ ನನಗೆ ದೊರಕಿತು. ನಾನು ನಿನಗೆ ಕೃತಜ್ಞ! ಇದು ನಿನಗೇ ಸೇರಿದ್ದು .ಕೃಷ್ಣಾರ್ಪಣಂ. “ಎಂದೊಮ್ಮೆ ನೆನೆದರೆ ಸಾಕು. ಅದು ಅವನಿಗೆ ಖಂಡಿತ ಹೋಗಿ ಸೇರುತ್ತದೆ.
ಏನನ್ನೂ ಕೇಳದ ಕುಚೇಲನಿಗೆ ಎಲ್ಲವನ್ನೂ ಕೊಟ್ಟವನು ಆ ಕೃಷ್ಣನಲ್ಲವೇ? ನಮಗೆ ಬೇಕಾದ್ದನ್ನೆಲ್ಲ ಅವನೇ ಕೊಡುತ್ತಾನೆ ಎಂಬ ನಂಬಿಕೆಯೊಂದಿಗೆ ಇಂದಿನಿಂದ ಅವನನ್ನೇ ಧ್ಯಾನಿಸುವ!!!
ಶ್ರೀ ಕೃಷ್ಣಾರ್ಪಣಮಸ್ತು.