ಸಿಂದಗಿ: ಸ್ಪೂರ್ತಿದಾಯಕ ಮಾತುಗಳಿಂದ ಲಕ್ಷಾಂತರ ಸ್ಪರ್ಧಾತ್ಮಕ ಓದುಗರ ಕೀರ್ತಿ ಹೆಚ್ಚಿಸುವಲ್ಲಿ ಮಹತ್ತರ ಪಾತ್ರ ವಹಿಸಿದ್ದ ರಾಜ್ಯ ಖನಿಜ ನಿಗಮದ ವ್ಯವಸ್ಥಾಪಕ ನಿರ್ದೇಶಕ, ಐಎಎಸ್ ಅಧಿಕಾರಿ ಮಹಾಂತೇಶ ಬೀಳಗಿ ಮಂಗಳವಾರ ಜೇವರ್ಗಿ ಬೈಪಾಸ್ ಬಳಿ ನಡೆದ ಅಪಘಾತದಲ್ಲಿ ಸಾವನ್ನಪ್ಪಿರುವುದು ಅತ್ಯಂತ ನೋವಿನ ಸಂಗತಿ ಎಂದು ಆರಕ್ಷಕ ಮೌಲಾಲಿ ಆಲಗೂರ ಹೇಳಿದರು.
ನಬಿರೋಶನ್ ಪ್ರಕಾಶನ, ಬೋರಗಿ ವತಿಯಿಂದ ಮಹಾಂತೇಶ ಬೀಳಗಿ ಇವರ ಭಾವಪೂರ್ಣ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ನುಡಿ ನಮನ ಸಲ್ಲಿಸಿ ಮಾತನಾಡಿ, ಕಡು ಬಡತನ ಕುಟುಂಬದಲ್ಲಿ ಜನಿಸಿ, ಒಪ್ಪತ್ತಿನ ಊಟಕ್ಕೂ ಪರದಾಡಿ, ಏಕಾಗ್ರತೆ, ಶಿಸ್ತು, ಶ್ರದ್ಧೆ, ಸಹನೆಯಿಂದ ಓದಿ, ೨೦೦೬ನೇ ಸಾಲಿನ ಕೆಎಎಸ್ ಅಧಿಕಾರಿಯಾಗಿ ಸೇವೆ ಆರಂಭಿಸಿ, ೨೦೧೨ರಲ್ಲಿ ಐಎಎಸ್ ಗೆ ಮುಂಬಡ್ತಿ ಹೊಂದಿ ಸಮಾಜ ಹಾಗೂ ಯುವ ಜನಾಂಗಕ್ಕೆ ಮಾದರಿ ವ್ಯಕ್ತಿ ಎನಿಸಿದ್ದರು. ಡಾ.ಮಹಾಂತೇಶ ಬೀಳಗಿ ಇವರ ಆಶಾದಾಯಕ, ಪ್ರೇರಣಾತ್ಮಕ ನುಡಿಗಳು ಹಾಗೂ ಸಿದಾ, ಸಾದಾ, ಸರಳ ವ್ಯಕ್ತಿತ್ವ ಅದೆಷ್ಟೋ ಜನರಿಗೆ ಅನುಕರಣೀಯವಾಗಿತ್ತು. ಬಸವ ಅನುಯಾಯಿಯಾಗಿದ್ದ ಇವರು ಕರ್ತವ್ಯದಲ್ಲಿ ಪ್ರಾಮಾಣಿಕತೆ ಮತ್ತು ದಕ್ಷತೆಗೆ ಹೆಸರಾಗಿದ್ದರು. ಬೀಳಗಿ ರವರ ಜಲಾಲುದ್ದೀನ್, ಸೇವಾ ನಿಷ್ಠೆಯ ಗೆಜ್ಜೆ ಗುರುತುಗಳು ಜನರ ಮನಸ್ಸಿನಲ್ಲಿ ಸದಾ ಶಾಶ್ವತವಾಗಿ ಉಳಿಯುತ್ತವೆ. ಭಗವಂತ ಇವರ ಆತ್ಮಕ್ಕೆ ಶಾಂತಿ, ನೆಮ್ಮದಿ ಕರುಣಿಸಲಿ ಎಂದರು.
ಆರಕ್ಷಕರಾದ ತುಕಾರಾಮ, ಸಂಜು, ಜಲಾಲುದ್ದೀನ್, ಜಾವೀದ್ ಮಹಾಂತೇಶ ಬೀಳಗಿ ಅವರ ಪೋಟೋಗೆ ಪುಷ್ಪಾರ್ಚನೆ ಮಾಡಿ ಮಾತನಾಡಿ, ಬೀದರ್, ಉಡುಪಿ, ದಾವಣಗೆರೆ, ಬೆಂಗಳೂರು, ಧಾರವಾಡ ಸೇರಿದಂತೆ ನಾಡಿನ ಹಲವು ಭಾಗಗಳಲ್ಲಿ ಕಾಯಾ, ವಾಚಾ, ಮನಸಾ ಪೂರ್ವಕ ಸೇವೆಸಲ್ಲಿಸಿ ನೊಂದವರಿಗೆ ನ್ಯಾಯ ಒದಗಿಸುವಲ್ಲಿ ಹಗಲು ರಾತ್ರಿ ಶ್ರಮಿಸಿದ ಶ್ರೇಯಸ್ಸು ಇವರದ್ದು, ನುಡಿದಂತೆ ನಡೆದು ಜನಮನ್ನಣೆ ಗಳಿಸಿ ನಾಡಿಗೆ ಆದರ್ಶಪ್ರಾಯ ಅಧಿಕಾರಿ ಎಂಬ ಖ್ಯಾತ ಇವರದ್ದಾಗಿತ್ತು, ಇವರ ಅಕಾಲಿಕ ಈ ಅಗಲುವಿಕೆ ಲಕ್ಷಾಂತರ ಯುವ ಮನಸ್ಸುಗಳಿಗೆ ನೋವು ತರಿಸಿದೆ ಎಂದರು.
ಇದೇ ವೇಳೆ ಪುಟಾಣಿಗಳಾದ ಜುನೈರಾ ಆಲಗೂರ, ಜೋಹಾ ಭೈರಾಮಡಗಿ ಡಾ.ಮಹಾಂತೇಶ ಬೀಳಗಿ ಇವರ ಭಾವಚಿತ್ರಕ್ಕೆ ಭಕ್ತಿಯ ದೀಪವನ್ನು ಗೌರವ ಬೆಳಗಿ ನುಡಿ ನಮನ ಸಲ್ಲಿಸಿದರು.

