ಪರಿಸರ ಸಂರಕ್ಷಣೆ ಕೇವಲ ಸರ್ಕಾರದ ಹೊಣೆಯಲ್ಲ. ಪ್ರತಿಯೊಬ್ಬ ವ್ಯಕ್ತಿಯೂ ಪರಿಸರ ಸಂರಕ್ಷಿಸಲು ಶ್ರಮವಹಿಸಬೇಕು ಎಂದು ಹಿರಿಯ ಸಾಹಿತಿಗಳಾದ ಡಾ.ಭೇರ್ಯ ರಾಮಕುಮಾರ್ ನುಡಿದರು.
ಕೆ.ಆರ್.ನಗರ ಟೌನ್ ಆಂಜನೇಯ ಬ್ಲಾಕ್ ನಲ್ಲಿರುವ ಸರ್ಕಾರಿ ಪ್ರೌಢಶಾಲೆಯಲ್ಲಿ ಭಗತ್ಸಿಂಗ್ ಯೂತ್ ಫೌಂಡೇಶನ್ ಸಂಸ್ಥೆಯ ವತಿಯಿಂದ ಏರ್ಪಡಿಸಲಾಗಿದ್ದ ಪರಿಸರ ದಿನಾಚರಣೆ ಹಾಗೂ ಸಂಸ್ಥೆಯ ಪದಾಧಿಕಾರಿ ರವಿ ಅವರ ಜನ್ಮದಿನದ ಅಂಗವಾಗಿ ನಡೆದ ಸಸಿ ನೆಡುವ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ಪರಿಸರ ಎಂಬುದು ಗಾಳಿ ತಯಾರು ಮಾಡುವ ಒಂದು ಕಾರ್ಖಾನೆ. ಈ ಕಾರ್ಖಾನೆ ನಾಶವಾದರೆ ಮಾನವ ಜೀವಿಗಳ ಅಂತ್ಯವಾಗುತ್ತದೆ. ಕಲುಷಿತ ಪರಿಸರದಿಂದ ಹೃದಯಾಘಾತ, ಶ್ವಾಸನಾಳದ ಕ್ಯಾನ್ಸರ್ ಮೊದಲಾದ ರೋಗಗಳು ಉಂಟಾಗುತ್ತವೆ. ಆದ್ದರಿಂದ ಪರಿಸರ ಸಂರಕ್ಷಣೆ ಇಂದಿನ ತುರ್ತು ಅಗತ್ಯವಾಗಿದೆ ಎಂದು ಕಿವಿಮಾತು ನುಡಿದರು.
ಪ್ರತಿಯೊಬ್ಬರೂ ತಮ್ಮ ಜನ್ಮದಿನದಂದು, ತಮ್ಮ ತಂದೆ-ತಾಯಿಗಳ ಜನ್ಮದಿನದಂದು, ವಿವಾಹ ವಾರ್ಷಿಕೋತ್ಸವದಂದು, ತಮ್ಮ ಹಿರಿಯರ ಸ್ಮರಣೆಯಲ್ಲಿ ಪ್ರತಿ ವರ್ಷವೂ ಒಂದೊಂದು ಸಸಿಯನ್ನು ನೆಡಬೇಕು.ಆ ಮೂಲಕ ಉತ್ತಮ ಪರಿಸರವನ್ನು ಮುಂದಿನ ಪೀಳಿಗೆಗೆ ನೀಡಬೇಕು ಎಂದು ಭೇರ್ಯ ರಾಮಕುಮಾರ್ ಕರೆ ನೀಡಿದರು.
ತಮ್ಮ ಜನ್ಮದಿನದ ಅಂಗವಾಗಿ ಶಾಲೆಗೆ ಸಸಿಗಳನ್ನು ದಾನವಾಗಿ ನೀಡಿದ ರವಿ ಅವರ ಕಾರ್ಯ ಶ್ಲಾಘನೀಯ ಎಂದವರು ನುಡಿದರು.
ಭಗತ್ ಸಿಂಗ್ ಯೂತ್ ಫೌಂಡೇಶನ್ ಕಾರ್ಯದರ್ಶಿ ರಕ್ಷಿತ್, ರವಿ,ಶಾಲೆಯ ಮುಖ್ಯ ಶಿಕ್ಷಕರಾದ ಶ್ರೀಮತಿ ಲತಾ,ಶಿಕ್ಷಕರಾದ ಉದಯಕುಮಾರ್ ಮೊದಲಾದವರು ಉಪಸ್ಥಿತರಿದ್ದರು.