ಮೂಡಲಗಿ: ಕರ್ನಾಟಕ ರಾಜ್ಯದಲ್ಲಿ 230 ದೊಡ್ಡ ಅಣೆಕಟ್ಟುಗಳ ಕಟ್ಟಡ ಕಾಮಗಾರಿ ಪೂರ್ಣಗೊಂಡಿದ್ದು, ಉಳಿದ 2 ದೊಡ್ಡ ಅಣೆಕಟ್ಟುಗಳ ನಿರ್ಮಾಣದ ಕಾರ್ಯ ಪ್ರಗತಿಯಲ್ಲಿದೆ ಎಂದು ಕೇಂದ್ರ ಜಲಶಕ್ತಿ ಸಚಿವಾಲಯದ ರಾಜ್ಯ ಸಚಿವ ಬಿಶ್ವೇಶ್ವರ ತುಡು ಅವರು ರಾಜ್ಯಸಭೆಗೆ ಲಿಖಿತ ಉತ್ತರದಲ್ಲಿ ಈ ಮಾಹಿತಿಯನ್ನು ನೀಡಿದ್ದಾರೆ ಎಂದು ರಾಜ್ಯಸಭಾ ಸಂಸದ ಈರಣ್ಣ ಕಡಾಡಿ ಹೇಳಿದರು.
ಸಂಸತ್ತಿನ ಮುಂಗಾರು ಅಧಿವೇಶನದಲ್ಲಿ ಅಣೆಕಟ್ಟುಗಳ ಸುರಕ್ಷತೆಗೆ ಸರ್ಕಾರ ಕೈಗೊಂಡ ಕ್ರಮಗಳ ಕುರಿತು ಸಂಸದರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವರು ದೇಶದಲ್ಲಿ 5334 ದೊಡ್ಡ ಅಣೆಕಟ್ಟುಗಳ ಕಟ್ಟಡ ಕಾಮಗಾರಿ ಪೂರ್ಣಗೊಂಡಿದ್ದು ಮತ್ತು 411 ದೊಡ್ಡ ಅಣೆಕಟ್ಟುಗಳ ನಿರ್ಮಾಣದ ಕಾರ್ಯ ಪ್ರಗತಿಯಲ್ಲಿದೆ. ಅಣೆಕಟ್ಟು ಸುರಕ್ಷತಾ ಕಾಯಿದೆ 2021 ಕೇಂದ್ರ ಮತ್ತು ರಾಜ್ಯ ಮಟ್ಟದಲ್ಲಿ ಅಣೆಕಟ್ಟು ಸುರಕ್ಷತೆಗಾಗಿ ಸಶಕ್ತ ಸಾಂಸ್ಥಿಕ ಚೌಕಟ್ಟನ್ನು ಸ್ಥಾಪಿಸಲು ಅವಕಾಶವನ್ನು ಹೊಂದಿದೆ. ರಾಷ್ಟ್ರೀಯ ಮಟ್ಟದಲ್ಲಿ, ಕೇಂದ್ರ ಸರ್ಕಾರವು ಅಣೆಕಟ್ಟು ಸುರಕ್ಷತೆಯ ರಾಷ್ಟ್ರೀಯ ಸಮಿತಿಯನ್ನು ರಚಿಸಿದ್ದು, ಇದು ಅಣೆಕಟ್ಟು ವೈಫಲ್ಯ ಸಂಬಂಧಿತ ವಿಪತ್ತುಗಳನ್ನು ತಡೆಗಟ್ಟಲು ಮತ್ತು ಅಣೆಕಟ್ಟು ಸುರಕ್ಷತೆಯ ಮಾನದಂಡಗಳನ್ನು ನಿರ್ವಹಿಸಲು ಹಾಗೂ ಅಣೆಕಟ್ಟು ಸುರಕ್ಷತಾ ನೀತಿಗಳನ್ನು ಅಭಿವೃದ್ಧಿಪಡಿಸಲು ಮತ್ತು ಅಗತ್ಯ ನಿಯಮಗಳನ್ನು ಶಿಫಾರಸ್ಸು ಮಾಡುವ ಕಾರ್ಯಗಳನ್ನು ನಿರ್ವಹಿಸುತ್ತದೆ ಎಂದು ಸಚಿವರು ಉತ್ತರಿಸಿದ್ದಾರೆ ಎಂದು ಸಂಸದರು ಮಾಹಿತಿಯನ್ನು ಹಂಚಿಕೊಂಡರು.