ಬಸವಣ್ಣನವರಿಗೆ ಚೈತನ್ಯ ತುಂಬಿದ ಮಹಾನ್ ಚೇತನ ಹಡಪದ ಅಪ್ಪಣ್ಣ – ಪೂಜ್ಯ ವಾಗ್ದೇವಿತಾಯಿ.
ರವಿವಾರ ದಿ. 9 ರಂದು ಬೆಳಗಾವಿ ನಗರದ ಫ. ಗು. ಹಳಕಟ್ಟಿ ಭವನದಲ್ಲಿ ಲಿಂಗಾಯತ ಸಂಘಟನೆ ವತಿಯಿಂದ ‘ಶರಣ ಹಡಪದ ಅಪ್ಪಣ್ಣನವರ ಜಯಂತಿ ಮತ್ತು ಗುರುವಂದನಾ ಕಾರ್ಯಕ್ರಮ’ ನಡೆಯಿತು.
ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದ ಬೆಳಗಾವಿಯ ಬಸವ ತತ್ವ ಅನುಭಾವ ಕೇಂದ್ರದ ಪೂಜ್ಯ ವಾಗ್ದೇವಿತಾಯಿಯವರು 12 ನೇ ಶತಮಾನದ ಅನೇಕ ಶರಣರು, ವಚನಕಾರರು ಹೆಸರಾಗಲಿಲ್ಲ ಕಾಯಕನಿಷ್ಠೆ ತೋರಿ ಅನೇಕರ ಹೆಸರುಗಳನ್ನು ಅಜರಾಮರ ಗೊಳಿಸಲು ಶ್ರಮಿಸಿದರು. ಅಂತಹ ಶರಣರಲ್ಲಿ ಹಡಪದ ಅಪ್ಪಣ್ಣನವರು ಒಬ್ಬರು. ಅವರು ಬಸವಣ್ಣನವರ ಆಪ್ತ ಕಾರ್ಯದರ್ಶಿಯಾಗಿ ಅವರಿಗೆ ಚೈತನ್ಯ ತುಂಬಿ ಮುನ್ನಡೆಯಲು ಹುರುಪು ನೀಡಿದರು. ಅವರಿಗೆ ಅಪ್ಪನಾಗಿ, ಅಣ್ಣನಾಗಿ ಸದಾಕಾಲ ನೆರಳಾಗಿ ನಿಂತರು. ಅವರು ಬರೆದ ಅನೇಕ ವಚನಗಳು ಮನುಷ್ಯನ ನಡಾವಳಿಗೆ ಸಂಬಂಧಿಸಿದವಾಗಿದ್ದವು. ಮನುಷ್ಯ ಹೇಗಿರಬೇಕು ಆತ ಮಾರ್ಗದರ್ಶಿ ಮತ್ತು ಸೂತ್ರಧಾರನಾಗಿ ಬದುಕು ಸಾಗಿಸಬೇಕು ಎಂದು ಕಿವಿಮಾತು ಹೇಳಿದರು.
ಅವರ ಯಾವುದೇ ವಚನಗಳು ನಾನು ಹೇಳಿದೆ ಎಂಬ ಅಹಂ ಒಳಗೊಂಡಿರಲಿಲ್ಲ. ಈ ರೀತಿ ಅವರ ವಚನಗಳು ಸದಾ ಚೈತನ್ಯದ ಚಿಲುಮೆ ತುಂಬುವ ನುಡಿಗಳಾಗಿವೆ ಎಂದರು.
ಅದೇ ರೀತಿ ಅನುಭಾವ ಕೇಂದ್ರದ ಪೂಜ್ಯ ಕುಮುದಿನಿ ತಾಯಿಯವರು ಅಪ್ಪಣ್ಣನವರ ವಚನಗಳನ್ನು ಶುಶ್ರಾವ್ಯವಾಗಿ ಹಾಡಿ ಅವುಗಳ ವಿಶ್ಲೇಷಣೆ ಮಾಡಿದರು. ನಂತರ ಗುರುಪೂರ್ಣಿಮೆ ನಿಮಿತ್ತ ಗುರುವಂದನಾ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮದಲ್ಲಿ ಸಂಘಟನೆಯ ಅಧ್ಯಕ್ಷರಾದ ಈರಣ್ಣ ದೇಯನ್ನವರ, ಪ್ರಭು ಪಾಟೀಲ, ಮಹಾಂತೇಶ ಅಂಟಿನ, ಶಿವಾ ಇಟಗಿ, ಶಿವಾನಂದ ತಲ್ಲೂರ,ಭರಮಪ್ಪ ಜೇವಣಿ, ಜ್ಯೋತಿ ಬದಾಮಿ, ಸುಶೀಲಾ ಗುರವ, ರಾಜಶ್ರೀ ಖನಗನ್ನಿ, ಸುವರ್ಣ ತಿಗಡಿ,ಗೀತಾ ತಿಗಡಿ, ನೇತ್ರಾ ರಾಮಾಪುರೆ,ದೀಪಾ ಪಾಟೀಲ, ಕೀರ್ತಿ, ಸೇರಿದಂತೆ ಹಲವಾರು ಶರಣರು ಭಾಗವಹಿಸಿದ್ದರು.
ಕಾರ್ಯಕ್ರಮದ ಆರಂಭದಲ್ಲಿ ಸಂಗಮೇಶ ಅರಳಿ ಸ್ವಾಗತಿಸಿದರು ಮಹಾದೇವಿ ಅರಳಿ ವಚನ ಪ್ರಾರ್ಥನೆ ಮಾಡಿದರು. ಕುಮಾರ ಪಾಟೀಲ ನಿರೂಪಿಸಿದರು ವಿ.ಕೆ ಪಾಟೀಲ ವಂದಿಸಿದರು. ವಚನ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮ ಸಂಪನ್ನಗೊಂಡಿತು