ಬೆಳಗಾವಿ – ಶಿಕ್ಷಣ ಕ್ಷೇತ್ರದಲ್ಲಿ ಅದ್ವಿತೀಯ ಸಾಧನೆ ಮಾಡಿದ ಬೆಳಗಾವಿಯವರೇ ಆದ ಡಾ.ಪ್ರಭಾಕರ ಕೋರೆ ಅವರಿಗೆ ಕೇಂದ್ರ ಸರ್ಕಾರ ಪದ್ಮಶ್ರೀ ಪುರಸ್ಕಾರಕ್ಕೆ ಆಯ್ಕೆ ಮಾಡಿರುವುದು ಅಭಿನಂದನೀಯವಾದುದು ಎಂದು ಶಾಸಕ ಮತ್ತು ಬೆಮುಲ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿಯವರು ಹರ್ಷ ವ್ಯಕ್ತಪಡಿಸಿದರು.
ಕೆಎಲ್ಇ ಸಂಸ್ಥೆಯ ಮೂಲಕ ಶೈಕ್ಷಣಿಕ ರಂಗದಲ್ಲಿ ಕೋರೆ ಅವರು ನೀಡಿರುವ ಕೊಡುಗೆ ಅವಿಸ್ಮರಣೀಯ ಮತ್ತು ಪ್ರಾತಃಸ್ಮರಣೀಯವಾಗಿದೆ. ಕೆಎಲ್ಇಯ ನೂರಾರು ಶೈಕ್ಷಣಿಕ ಸಂಸ್ಥೆಗಳ ಮೂಲಕ ಲಕ್ಷಾಂತರ ವಿದ್ಯಾರ್ಥಿಗಳು ತಮ್ಮ ಭವಿಷ್ಯ ರೂಪಿಸಿಕೊಳ್ಳಲು ಕೋರೆ ಅವರು ನಾಂದಿ ಹಾಡಿದ್ದಾರೆ ಎಂದು ಹೇಳಿದ್ದಾರೆ.
ಕೇವಲ ಶಿಕ್ಷಣರಂಗ ಮಾತ್ರವಲ್ಲದೇ ಆರೋಗ್ಯ, ಸಹಕಾರಿ, ಉದ್ಯಮ, ಸಾಹಿತ್ಯ, ರಾಜಕೀಯ, ಸಮಾಜ ಸೇವೆಯಂತಹ ಹಲವಾರು ಕ್ಷೇತ್ರಗಳಲ್ಲಿ ಅವರು ತಮ್ಮದೆಯಾದ ಕೊಡುಗೆಯನ್ನು ನೀಡಿದ್ದಾರೆ. ಈ ಮೂಲಕ ಪರೋಕ್ಷವಾಗಿ ರಾಷ್ಟ್ರ ನಿರ್ಮಾಣಕ್ಕೂ ಸಹಕಾರ ನೀಡಿದ್ದು, ಅವರ ಈ ಕೊಡುಗೆಗಳನ್ನು ಪರಿಗಣಿಸಿ ಕೇಂದ್ರ ಸರ್ಕಾರವು ಪ್ರತಿಷ್ಠಿತ ಪದ್ಮಶ್ರೀ ಪುರಸ್ಕಾರಕ್ಕೆ ಆಯ್ಕೆ ಮಾಡಿರುವುದು ಸೂಕ್ತ ಮತ್ತು ಹೆಮ್ಮೆಯ ವಿಷಯವಾಗಿದ್ದು, ಅವರಿಗೆ ಹೃದಯಪೂರ್ವಕ ಅಭಿನಂದನೆಗಳನ್ನು ಸಲ್ಲಿಸಿದ್ದಾಗಿ ಶಾಸಕ ಬಾಲಚಂದ್ರ ಜಾರಕಿಹೊಳಿಯವರು ತಿಳಿಸಿದರು.

