spot_img
spot_img

ರಾಮ ಮಂದಿರವು ಭಾರತದ ಪರಂಪರೆ ಸಾರುವ ಕೇಂದ್ರವಾಗಲಿ – ಈರಣ್ಣ ಕಡಾಡಿ

Must Read

spot_img
- Advertisement -

ಮೂಡಲಗಿ: ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣವಾಗುವ ಮೂಲಕ ಭಾರತದ ಸಂಸ್ಕೃತಿ ಮತ್ತು ಪರಂಪರೆಗೆ ಮತ್ತೊಂದು ಗರಿ ಇಟ್ಟಂತಾಗಿದೆ. ಮಂದಿರ ಕೇವಲ ಒಂದು ಧಾರ್ಮಿಕ ಶ್ರದ್ದಾ ಕೇಂದ್ರವಾಗದೇ ಅಖಂಡ ಭಾರತದ ಪರಂಪರೆ, ಸಂಸ್ಕೃತಿ, ಜೀವನದ ಮೌಲ್ಯಗಳು, ದೇಶದ ಇತಿಹಾಸವನ್ನು ಜಗತ್ತಿಗೆ ಸಾರುವ ಕೇಂದ್ರವಾಗಿ ರೂಪಗೊಳ್ಳಲಿ ಎಂದು ರಾಜ್ಯಸಭಾ ಸಂಸದ ಈರಣ್ಣ ಕಡಾಡಿ ಹೇಳಿದರು.

ಸೋಮವಾರ ಜ-22 ರಂದು ಅಯೋಧ್ಯೆಯಲ್ಲಿ ಮರ್ಯಾದಾ ಪುರುಷೋತ್ತಮ ಪ್ರಭು ಶ್ರೀ ರಾಮ ಮಂದಿರದ ಉದ್ಘಾಟನೆಯ ಕಾರ್ಯಕ್ರಮದ ನಿಮಿತ್ತ ಕಲ್ಲೋಳಿ ಪಟ್ಟಣದ ಶ್ರೀ ರಾಮ ಮಂದಿರದಲ್ಲಿ ಆಯೋಜಿಸಿದ ವಿಶೇಷ ಪೂಜಾ ಕಾರ್ಯಕ್ರಮದಲ್ಲಿ ಭಾಗವಹಿಸಿ, ದೇವರ ದರ್ಶನ ಪಡೆದು ಮಾತನಾಡಿದ ಅವರು ಭಾರತೀಯರ ಬಹುದಿನಗಳ ಕನಸು ಇಂದು ನನಸಾಗುತ್ತಿದ್ದು, ನಮ್ಮೆಲ್ಲರ ಆರಾಧ್ಯ ದೈವ ಶ್ರೀರಾಮನ ಮಂದಿರ ಸ್ಥಾಪನೆಯಾಗಿ ಪ್ರಾಣ ಪ್ರತಿಷ್ಠಾಪನೆ ಆಗುತ್ತಿರುವುದು ನಮಗೆಲ್ಲರಿಗೂ ಹೆಮ್ಮೆಯ ಸಂಗತಿ ಎಂದರು.

ಭಾರತೀಯರಾದ ನಮಗೆ ರಾಮ, ರಾಮಾಯಣ ಎನ್ನುವುದು ಪ್ರತಿ ನಿತ್ಯದ ಜೀವನದಲ್ಲಿ ಒಂದಿಲ್ಲೊಂದು ರೀತಿಯಲ್ಲಿ ಹಾಸುಹೊಕ್ಕಾಗಿದೆ. ಮಹರ್ಷಿ ವಾಲ್ಮೀಕಿ ಅವರು ಬರೆದಿರುವ ರಾಮಾಯಣ ವಿಶ್ವದ ಅತ್ಯಂತ ಶ್ರೇಷ್ಠ ಕೃತಿಗಳಲ್ಲಿ ಒಂದಾಗಿದ್ದು, ಅದು ಪ್ರತಿಯೊಬ್ಬ ವ್ಯಕ್ತಿಯ ಜೀವನ ಸಂಬಂಧ ಹಾಗೂ ಬದುಕಿನ ಆದರ್ಶಗಳ ಬಗ್ಗೆ ಮಾರ್ಗ ತೋರಿಸುತ್ತದೆ. ರಾಮಾಯಣ ರಾಮನ ಆದರ್ಶ ಜೀವನದ ಜೊತೆಗೆ ದಶರಥನ ಮೂಲಕ ತಂದೆ ಮಗನ ಸಂಬಂಧ, ಲಕ್ಷ್ಮಣ, ಭರತನ ತ್ಯಾಗಗಳ ಮೂಲಕ ಅಣ್ಣ ತಮ್ಮಂದಿರ ಸಂಬಂಧ, ಕೌಸಲ್ಯಳ ಮೂಲಕ ತಾಯಿ ಮಗನ ಸಂಬಂಧ, ರಾವಣನ ವಶದಲ್ಲಿದ್ದರೂ ಸೀತೆ ಪತಿವ್ರತಾ ಧರ್ಮ ಕಾಪಾಡುವ ಮೂಲಕ ಅದರ್ಶ ಪತ್ನಿಯ ಜೀವನದ ಪಾಠವನ್ನು ಕಲಿಸುತ್ತದೆ ಎಂದು ರಾಮಾಯಣದ ಘಟನೆಗಳನ್ನು ಮೆಲಕು ಹಾಕಿದರು.

- Advertisement -

ಇಡೀ ದೇಶ ಪ್ರಭು ಶ್ರೀರಾಮ ಪ್ರಾಣ ಪ್ರತಿಷ್ಠಾಪನೆ ಮಾಡುವ ಸಂದರ್ಭದಲ್ಲಿ ದೇಶದ ಪ್ರತಿಯೊಂದು ಹಳ್ಳಿ ಹಳ್ಳಿಯಲ್ಲಿ, ಮನೆ ಮನೆಗಳಲ್ಲಿ ತೋರಿರುವ ಉತ್ಸಾಹ ಇಡೀ ದೇಶವನ್ನು ಒಗ್ಗೂಡಿಸಿದೆ. ಮುಂದಿನ 25 ವರ್ಷ ಅಮೃತ ಕಾಲ ಎಂದು ಪ್ರಧಾನಿ ನರೇಂದ್ರ ಮೋದಿಯವರು ಹೇಳಿದ್ದಾರೆ. ಅಮೃತ ಕಾಲ ಎಂದರೆ ರಾಮರಾಜ್ಯ ಸ್ಥಾಪನೆ ಎಂದರಲ್ಲದೇ ಕಳೆದ ಒಂಭತ್ತುವರೆ ವರ್ಷದ ಅಧಿಕಾರದಲ್ಲಿ ಉತ್ತಮ ಹಾಗೂ ಸದೃಢ ಆಡಳಿತ ನೀಡುವ ಮೂಲಕ ಇಡೀ ವಿಶ್ವವೇ ಭಾರತದ ಕಡೆಗೆ ನೋಡುವಂತೆ ಮಾಡಿದ್ದಾರೆ. ನಮ್ಮ ಮುಂದಿನ ಪೀಳಿಗೆಗೆ ರಾಮ ರಾಜ್ಯ ಕಟ್ಟುವ ಸೌಭಾಗ್ಯ ನಮ್ಮದಾಗಿದೆ. ಆ ಕರ್ತವ್ಯವನ್ನು ನಾವು ಶ್ರದ್ಧೆ, ಭಕ್ತಿಯಿಂದ ಮಾಡಿದರೆ, ಶ್ರೀರಾಮನ ಆದರ್ಶಕ್ಕೂ, ಭಾರತಕ್ಕೂ ಮಾಡುವ ಸೇವೆಯಾಗಲಿದೆ. ಈ ರಾಮಮಂದಿರದ ಮೂಲಕ ರಾಮನ ಆದರ್ಶಗಳು ಎಲ್ಲರಿಗೂ ಪ್ರೇರಣೆಯಾಗಲಿ, ಆ ಮೂಲಕ ರಾಮರಾಜ್ಯದ ಸಂಕಲ್ಪ ಕಾರ್ಯ ಸಿದ್ದಿಯಾಗಲಿ  ಎಂದರು.

ಕಲ್ಲೋಳಿ ಶ್ರೀ ಮಾರುತಿ ದೇವರ ಹಾಗೂ ಶ್ರೀರಾಮ ಮಂದಿರಕ್ಕೆ ತೆರಳಿ ದೇವರ ದರ್ಶನ ಪಡೆದರು. ನಂತರ ಶ್ರೀ ರಾಮಾಂಜನೇಯ ವಿಶ್ವಸ್ಥ ಮಂಡಳಿಯ ವತಿಯಿಂದ ಸಂಸದರನ್ನು ಸನ್ಮಾನಿಸಿದರು.

ಕಾರ್ಯಕ್ರಮದಲ್ಲಿ ಸುರೇಶ ಕಬ್ಬೂರ, ಬಸಗೌಡ ಪಾಟೀಲ, ಮಲ್ಲಪ್ಪ ಖಾನಾಪುರ, ರಾಮಣ್ಣ ದಬಾಡಿ, ದತ್ತು ಕಲಾಲ, ರಾಮಚಂದ್ರ ಕಲಾಲ, ಮನೋಹರ ಮಲ್ಕಾಪುರೆ, ಶ್ರೀಶೈಲ ತುಪ್ಪದ, ಹಣಮಂತ ಕುರಬೇಟ, ರಾಜು ದಬಾಡಿ, ಲೋಹಿತ ಕಲಾಲ, ಪರಪ್ಪ ಗಿರೆಣ್ಣವರ, ಹಣಮಂತ ಸಂಗಟಿ, ಚರಂತಯ್ಯ ಮಳಿಮಠ, ರಾಮಪ್ಪ ಗುರ್ಲಾಪೂರ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

- Advertisement -
- Advertisement -

Latest News

ಅವಿರತ ಕಲಾಸೇವೆ ಮುಂದೊಮ್ಮೆ ಗುರುತಿಸಲ್ಪಡುತ್ತದೆ – ಪತ್ರಕರ್ತ ಪತ್ತಾರ

ಮೂಡಲಗಿ :ಕಲೆ ಎಂಬುದು ಯಾರ ಸ್ವತ್ತಲ್ಲ, ಸ್ವಾರ್ಥವಿಲ್ಲದ ಅವಿರತ ಕಲಾ ಸೇವೆ ಮುಂದೊಂದು ದಿನ ಗುರುತಿಸಲ್ಪಟ್ಟು, ಪದವಿ ಸನ್ಮಾನಗಳು ತಾನಾಗಿಯೇ ಅರಸಿ ಬರುತ್ತವೆ ಎಂದು ಪತ್ರಕರ್ತ...
- Advertisement -

More Articles Like This

- Advertisement -
close
error: Content is protected !!
Join WhatsApp Group