ಮೈಸೂರಿನ ಅಭಿರುಚಿ ಬಳಗವು ಮೈಸೂರಿನ ನಮನ ಕಲಾ ಮಂಟಪದಲ್ಲಿ ಏರ್ಪಡಿಸಿದ್ದ ಸಮಾರಂಭದಲ್ಲಿ ಆಕಾಶವಾಣಿಯ ನಿವೃತ್ತ ಅಧಿಕಾರಿ ಹಾಗೂ ಸಾಹಿತಿ ಎನ್. ವಿ. ರಮೇಶ್ ಅವರ ‘ಬನ್ನಿ ರಾಮಾಯಣ ಯಾತ್ರೆಗೆ’ ಹಾಗೂ ‘ಮನಸಿನ ಅಲೆಗಳ ಉಯ್ಯಾಲೆ’ ಕೃತಿಗಳನ್ನು ಲೋಕಾರ್ಪಣೆ ಮಾಡಲಾಯಿತು.
ಸಾಹಿತ್ಯ ದಾಸೋಹಿ ಎಸ್. ರಾಮ ಪ್ರಸಾದ್ ಅವರು ಬನ್ನಿ ರಾಮಾಯಣ ಯಾತ್ರೆಗೆ ಕೃತಿ ಲೋಕಾರ್ಪಣೆ ಮಾಡಿ ಮಾತನಾಡಿ, ಎನ್. ವಿ. ರಮೇಶ್ ಅವರು ಮಹಾಪುರುಷ ಶ್ರೀ ರಾಮನ ಜೀವನವನ್ನು ಈ ಕೃತಿಯಲ್ಲಿ ಮನಸೆಳೆಯುವ ರೀತಿಯಲ್ಲಿ ವಿವರಿಸಿದ್ದಾರೆ. ರಾಮ ಜನಿಸಿದ, ಸಂಚರಿಸಿದ, ವನವಾಸ ಮಾಡಿದ, ಸೀತೆಯ ಅನ್ವೇಷಣೆ ಮಾಡಿ ರಾವಣನೊಡನೆ ಯುದ್ಧ ಮಾಡಿ ವಾಪಸು ಕರೆತಂದ ಎಲ್ಲಾ ಕ್ಷೇತ್ರಗಳಿಗೂ ಲೇಖಕ ರಮೇಶ್ ಅವರು ಭೇಟಿ ನೀಡಿದ್ದಾರೆ. ಅಲ್ಲಿನ ಎಲ್ಲಾ ಇತಿಹಾಸವನ್ನೂ ವಿವರವಾಗಿ ಅರಿತು ಕೃತಿ ರೂಪಕ್ಕೆ ತಂದಿದ್ದಾರೆ. ಇದೊಂದು ಸಂಗ್ರಹ ಯೋಗ್ಯ ಕೃತಿಯಾಗಿದೆ ಎಂದು ನುಡಿದರು.
ಮನಸಿನ ಅಲೆಗಳ ಉಯ್ಯಾಲೆ ಕೃತಿ ಲೋಕಾರ್ಪಣೆ ಮಾಡಿ ಮಾತನಾಡಿದ ಕನ್ನಡ ಸಾಹಿತ್ಯ ಪರಿಷತ್ ದತ್ತಿ ಪ್ರಶಸ್ತಿ ಪುರಸ್ಕೃತ ಸಾಹಿತಿ ಡಾ. ಭೇರ್ಯ ರಾಮಕುಮಾರ್ ಮಾತನಾಡಿ, ಮನುಷ್ಯನ ಜೀವನವೇ ಅಲೆಗಳ ಉಯ್ಯಾಲೆ. ಆಕಾಶವಾಣಿಯಲ್ಲಿ ಕಾರ್ಯಕ್ರಮ ಅಧಿಕಾರಿಗಳಾಗಿದ್ದ ಎನ್. ವಿ. ರಮೇಶ್ ಅವರು ತಾವು ಸಮಾಜದಲ್ಲಿ ಕಡುಂಡ ಎಲ್ಲಾ ನೋವು ನಲಿವುಗಳನ್ನೂ ಈ ಕೃತಿಯಲ್ಲಿ ಮನಸೆಳೆಯುವ ರೀತಿಯಲ್ಲಿ ಚಿತ್ರಿಸಿದ್ದಾರೆ. ಕಷ್ಟಪಟ್ಟು ಮಕ್ಕಳನ್ನು ಬೆಳೆಸುವ ಪೋಷಕರು. ವಿದ್ಯಾವಂತರಾದ ನಂತರ ವಿದೇಶಗಳಲ್ಲಿ ನೆಲೆಸುವ ಮಕ್ಕಳು. ಅಂತ್ಯ ಕಾಲದಲ್ಲಿ ದುರಂತ ಮಯ ಬದುಕು ನಡೆಸುವ ಪೋಷಕರು.. ಹೀಗೆ ಹೃದಯವನ್ನು ಹಿಂಡುವಂತಹ ಹಲವು ಕತೆಗಳು ಇಲ್ಲಿವೆ ಎಂದು ನುಡಿದರು.
ಕನ್ನಡಿಗರು ಕನ್ನಡ ಪತ್ರಿಕೆಗಳನ್ನು, ಪುಸ್ತಕಗಳನ್ನು ಕೊಂಡು ಓದುವ ಪ್ರವೃತ್ತಿ ಬೆಳೆಸಿಕೊಳ್ಳಬೇಕೆಂದವರು ಕಿವಿಮಾತು ನುಡಿದರು.
ಹಿರಿಯ ಚಿಂತಕರಾದ ಡಾ. ರಘುರಾಮ ವಾಜಪೇಯೀ ಅವರು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಶ್ರೀ ರಾಮ ಇಡೀ ಜಗತ್ತಿಗೆ ಮಾರ್ಗದರ್ಶನ ನೀಡುವ ಮಹಾಪುರುಷ ಎಂದು ನುಡಿದರು. ಸಾಹಿತಿ ಎನ್. ವಿ. ವೆಂಕಟೇಶ್, ಮಹಾಕವಿ ಗಜಾನನ ಹೆಗಡೆ, ಸಾಹಿತಿ ಶ್ರೀಮತಿ ಪದ್ಮಿನಿ ಹೆಗಡೆ, ಮೈಸೂರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ಮಡ್ಡಿಕೆರೆ ಗೋಪಾಲ್ ಸಭೆಯಲ್ಲಿ ಮಾತನಾಡಿ ಶ್ರೀ ರಾಮನ ವ್ಯಕ್ತಿತ್ವ ಶ್ಲಾಘಿಸಿದರು.
ಸ್ನೇಹ ಸಿಂಚನ ಸಂಸ್ಥೆಯ ಅಧ್ಯಕ್ಷರಾದ ಶ್ರೀಮತಿ ಲತಾ ಮೋಹನ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಟಿ. ತ್ಯಾಗರಾಜು ಸ್ವಾಗತಿಸಿದರು. ಅಭಿರುಚಿ ಬಳಗದ ಕಾರ್ಯದರ್ಶಿ ಶ್ರೀಮತಿ ಉಮಾ ರಮೇಶ್ ಸ್ವಾಗತಿಸಿದರು. ನಂತರ ಶ್ರೀ ರಾಮನನ್ನು ಕುರಿತ ಕವಿಗೋಷ್ಠಿ ನಡೆಯಿತು.