ಸಿಂದಗಿ; ಮನುಷ್ಯ ಯಾವಾಗಲೂ ಸುಖವನ್ನೇ ಬಯಸುತ್ತಾನೆ. ಸುಖ ಮತ್ತು ಶಾಂತಿಗೆ ಧರ್ಮ ಪರಿಪಾಲನೆ ಬಹಳ ಮುಖ್ಯ. ವೀರಶೈವ ಧರ್ಮದಲ್ಲಿ ಸಂಸ್ಕಾರಕ್ಕೆ ಬಹಳಷ್ಟು ಪ್ರಾಮುಖ್ಯತೆ ಕೊಟ್ಟಿದ್ದಾರೆ. ಈ ನಾಡಿನ ಮಠಗಳು ಭಕ್ತರಿಗೆ ಸಂಸ್ಕಾರ ಕೊಡುವ ಜ್ಞಾನ ಕೇಂದ್ರಗಳಾಗಿವೆ ಎಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯಪಟ್ಟರು.
ಅವರು ಸಮೀಪ ಮಾಗಣಗೆರೆ ಶ್ರೀ ರುದ್ರಮುನೀಶ್ವರ ಹಿರೇಮಠದ ಶ್ರೀ ಗುರು ಪಟ್ಟಾಧಿಕಾರದ ಅಂಗವಾಗಿ ಜರುಗಿದ ಜನ ಜಾಗೃತಿ ಧರ್ಮ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡುತ್ತಿದ್ದರು.
ಭಾರತೀಯ ಸಂಸ್ಕೃತಿಯಲ್ಲಿ ಧರ್ಮ ಪರಂಪರೆ ಮತ್ತು ಆದರ್ಶಗಳಿಗ ಬಹಳಷ್ಟು ಮಹತ್ವವಿದೆ. ವೀರಶೈವ ಧರ್ಮ ಸಂವಿಧಾನದಲ್ಲಿ ಅಷ್ಟಾವರಣ, ಪಂಚಾಚಾರ ಮತ್ತು ಷಟ್ಸ್ಥಲಗಳು ಆತ್ಮ ವಿಶ್ವಾಸ ಮತ್ತು ಶ್ರೇಯೋಭಿವೃದ್ಧಿಗೆ ಇವುಗಳ ಅರಿವು ಆಚರಣೆ ಬಹಳ ಮುಖ್ಯ. ಶ್ರೀ ಜಗದ್ಗುರು ರೇಣುಕಾಚಾರ್ಯರು ಧಾರ್ಮಿಕ ಮೌಲ್ಯಗಳ ಪರಿಪಾಲನೆ ಮತ್ತು ಸಂರಕ್ಷಣೆಯಿಂದ ಮಾನವನ ವ್ಯಕ್ತಿತ್ವಕ್ಕೆ ಬೆಲೆ ನೆಲೆ ಪ್ರಾಪ್ತವಾಗುವುದೆಂದು ಬೋಧಿಸಿದ್ದಾರೆ. ನೂರಾ ಮೂವತ್ತು ವರ್ಷದಿಂದ ನಿಂತು ಹೋಗಿದ್ದ ಮಾಗಣಗೆರೆ ಶ್ರೀ ರುದ್ರಮುನೀಶ್ವರ ಹಿರೇಮಠಕ್ಕೆ ದಾನಯ್ಯ ದೇವರನ್ನು ನಿಯುಕ್ತಿಗೊಳಿಸಿ ಸಕಲ ಸದ್ಭಕ್ತರ ಸಮ್ಮುಖದಲ್ಲಿ ಪಟ್ಟಾಧಿಕಾರ ನೆರವೇರಿಸಿ ಶ್ರೀ ಷ||ಬ್ರ|| ಏಕಾಕ್ಷರ ಶಿವಾಚಾರ್ಯರು, ಎಂಬ ನೂತನ ಅಭಿದಾನದಿಂದ ದಂಡ ಕಮಂಡಲ ಸಮೇತ ಪಂಚ ಮುದ್ರಾ ಅನುಗ್ರಹಿಸಿ ಆಶೀರ್ವದಿಸಲಾಗಿದೆ. ವಯೋವೃದ್ಧರಾದ ಹುಡುಗಿ ಹಿರೇಮಠದ ವಿರೂಪಾಕ್ಷ ಶಿವಾಚಾರ್ಯ ಸ್ವಾಮಿಗಳು ನೂತನ ಶ್ರೀಗಳವರಿಗೆ ಧಾರ್ಮಿಕ ಸಂಸ್ಕಾರ ನೀಡಿ ಷಟ್ಸ್ಥಲ ಬ್ರಹ್ಮೋಪದೇಶ ಅನುಗ್ರಹಿಸಿ ಶುಭ ಹಾರೈಸಿದ್ದಾರೆ. ನೂತನ ಶ್ರೀಗಳವರು ಶ್ರೀ ಮಠದ ಅಭಿವೃದ್ಧಿ ಮತ್ತು ಭಕ್ತರಿಗೆ ಯೋಗ್ಯ ಮಾರ್ಗದರ್ಶನ ನೀಡುವರೆಂಬ ಆತ್ಮ ವಿಶ್ವಾಸ ತಮಗಿದೆ ಎಂದು ರೇಶ್ಮೆ ಮಡಿ ಸ್ಮರಣಿಕೆ ಫಲ ಪುಷ್ಪವಿತ್ತು ಶ್ರೀ ರಂಭಾಪುರಿ ಜಗದ್ಗುರುಗಳು ಆಶೀರ್ವದಿಸಿದರು.
ಸಾನ್ನಿಧ್ಯ ವಹಿಸಿದ್ದ ಶ್ರೀ ಉಜ್ಜಯಿನಿ ಸಿದ್ಧಲಿಂಗ ಜಗದ್ಗುರುಗಳು ಆಶೀರ್ವಚನ ನೀಡಿ, ವೀರಶೈವ ಧರ್ಮ ಅತ್ಯಂತ ಪ್ರಾಚೀನವಾದ ಧರ್ಮವಾಗಿದೆ. ಇದರ ಇತಿಹಾಸ ಪರಂಪರೆ ಬಹಳಷ್ಟು ದೊಡ್ಡದು. ಜೀವ ಶಿವನಾಗಲು ಅಂಗ ಲಿಂಗವಾಗಲು, ನರ ಹರನಾಗಲು, ಭವಿ ಭಕ್ತನಾಗುವ ಸಾಧನಾ ಮಾರ್ಗವನ್ನು ಈ ಧರ್ಮದ ಸಂವಿಧಾನದಿಂದ ಅರಿಯಲು ಸಾಧ್ಯವಿದೆ. ಮಾಗಣಗೆರೆ ಶ್ರೀ ರುದ್ರಮುನೀಶ್ವರ ಹಿರೇಮಠದ ಗುರುತ್ವಾಧಿಕಾರ ಸ್ವೀಕರಿಸಿದ ಏಕಾಕ್ಷರ ಶಿವಾಚಾರ್ಯ ಸ್ವಾಮಿಗಳು ಆ ಉನ್ನತ ದಾರಿಯಲ್ಲಿ ಮುನ್ನಡೆದು ಧರ್ಮ ಸಂಸ್ಕೃತಿಯ ಸಂವರ್ಧನೆಗೆ ಶ್ರಮಿಸುವರೆಂಬ ಆತ್ಮ ವಿಶ್ವಾಸ ತಮಗಿದೆ ಎಂದರು.
ಮಾಗಣಗೆರೆ ಬೃಹನ್ಮಠದ ಡಾ|| ವಿಶ್ವಾರಾಧ್ಯ ಶಿವಾಚಾರ್ಯರು, ಆಲೂರು ಹಿರೇಮಠದ ಕೆಂಚವೃಷಭೇಂದ್ರ ಶಿವಾಚಾರ್ಯರು ನೇತೃತ್ವ ವಹಿಸಿ ಮಾತನಾಡಿದರು. ಈ ಪವಿತ್ರ ಸಮಾರಂಭದಲ್ಲಿ ಬಡದಾಳ, ಸಿದ್ಧರಬೆಟ್ಟ, ನಾಗಣಸೂರು, ಕಾರಭೋಸಗಾ, ಶಖಾಪುರ, ಕಡಕೋಳ, ಆಲಮೇಲ, ಐನಾಪುರ, ಯಂಕAಚಿ, ಕೊಣ್ಣೂರು ಶ್ರೀಗಳವರು ಉಪಸ್ಥಿತರಿದ್ದರು.
ಸಮಾರಂಭವನ್ನು ಉದ್ಘಾಟಿಸಿದ ರಾಜ್ಯ ವೈದ್ಯಕೀಯ ಸಚಿವ ಶರಣಪ್ರಕಾಶ ಪಾಟೀಲ ಮಾತನಾಡಿ, ಭಾರತ ಪುಣ್ಯ ನಾಡಿನಲ್ಲಿ ಹಲವಾರು ಪೀಠ ಮಠಗಳು ಮತ್ತು ಧಾರ್ಮಿಕ ಕೇಂದ್ರಗಳು ಆಧ್ಯಾತ್ಮ ಜ್ಞಾನವನ್ನು ಅರುಹುತ್ತಾ ಬಂದಿವೆ. ಶಿವಪಥವನರಿಯಲು ಗುರು ಮಾರ್ಗದರ್ಶನ ಮುಖ್ಯ. ಮಾಗಣಗೆರೆ ಶ್ರೀ ರುದ್ರಮುನೀಶ್ವರ ಹಿರೇಮಠಕ್ಕೆ ನೂತನ ಶ್ರೀಗಳವರು ಆಗಮಿಸಿರುವುದು ಈ ಭಾಗದ ಭಕ್ತರಿಗೆ ಬಹಳಷ್ಟು ಸಂತೋಷವಾಗಿದೆ ಎಂದರು.
ಜೇವರ್ಗಿ ಕ್ಷೇತ್ರದ ಶಾಸಕ ಮತ್ತು ಕೆ.ಕೆ.ಆರ್.ಡಿ.ಬಿ.ಅಧ್ಯಕ್ಷ ಡಾ|| ಅಜಯಸಿಂಗ್ ಇಂಡಿ ಕ್ಷೇತ್ರದ ಶಾಸಕ ಯಶವಂತರಾಯಗೌಡ ಪಾಟೀಲ್, ಜೇವರ್ಗಿ ಮಾಜಿ ಶಾಸಕ ದೊಡ್ಡಪ್ಪಗೌಡ ಪಾಟೀಲ್, ಶಿವರಾಜ್ ಪಾಟೀಲ್ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಗುರುರಕ್ಷೆ ಸ್ವೀಕರಿಸಿದರು.
ಪಟ್ಟಾಭಿಷಿಕ್ತರಾದ ನೂತನ ಪಟ್ಟಾಧ್ಯಕ್ಷ ಏಕಾಕ್ಷರ ಶಿವಾಚಾರ್ಯ ಸ್ವಾಮಿಗಳು ತಮ್ಮ ಮೊದಲ ಧರ್ಮ ಸಂದೇಶ ನೀಡಿ ವೀರಶೈವ ಧರ್ಮ ಪರಂಪರೆಯಲ್ಲಿ ಶ್ರೀ ಗುರುವಿಗೆ ಪ್ರಥಮ ಸ್ಥಾನವಿದೆ. ಯೋಗ್ಯ ಗುರುವಿನಿಂದ ಭಕ್ತರ ಕಲ್ಯಾಣ ಸಾಧ್ಯ. ಶ್ರೀ ರಂಭಾಪುರಿ ಜಗದ್ಗುರುಗಳ ಆಶೀರ್ವಾದ ಬಲದಿಂದ ಶ್ರೀ ಮಠದ ಭಕ್ತರಿಗೆ ಮಾರ್ಗದರ್ಶನ ಮಾಡುವ ಕಾರ್ಯ ಮಾಡುತ್ತೇನೆಂದು ಸಂಕಲ್ಪ ಕೈಕೊಂಡು ಶಿಷ್ಯ ಭಕ್ತರ ಸಂಪ್ರೀತಿಗೆ ಪಾತ್ರರಾದರು. ಶಂಕ್ರಣ್ಣ ವಣಿಕ್ಯಾಳ ಸ್ವಾಗತಿಸಿದರು. ಜೇರಟಗಿ ಮಡಿವಾಳ ಶಾಸ್ತ್ರಿಗಳು ನಿರೂಪಿಸಿದರು.

