ಸಾಗರದ ಮೇಲೀಜಿ ಬರಲೇನು ದೊರಕುವುದು ?
ತಳಕಿಳಿಯೆ ರತ್ನಗಳು ದೊರಕಬಹುದು
ಬಾಳ ಕಡಲಲಿ ಮುಳುಗಿ ಭಾವ ತಳದಲಿ ಪಡೆಯೊ
ಅನುಭಾವ ಮುತ್ತುಗಳ – ಎಮ್ಮೆತಮ್ಮ
ಶಬ್ಧಾರ್ಥ
ಸಾಗರ= ಸಮುದ್ರ. ಕಡಲು
ತಾತ್ಪರ್ಯ
ಸಮುದ್ರದ ಮೇಲೆ ಬರಿದೆ ಈಜಿದರೆ ಏನು ಸಿಗುವುದಿಲ್ಲ.
ಭೋರ್ಗರೆಯುವ ನೊರೆತೆರೆಗಳು, ಗುಳ್ಳೆಬುರುಗುಗಳು
ಮಾತ್ರ ಕಾಣಸಿಗುತ್ತವೆ. ಆದಕಾರಣ ಸಮುದ್ರದ ತಳದಲ್ಲಿ ಮುಳುಗಿ ಹುಡುಕಿದರೆ ಮುತ್ತುರತ್ನಗಳು ಸಿಕ್ಕುತ್ತವೆ. ಅದಕ್ಕೇನೆ ಹಿರಿಯರು ಅದಕ್ಕೆ ರತ್ನಾಕರ ಎಂದು ಕರೆದಿದ್ದಾರೆ. ಮತ್ತೆ ಬಸವಣ್ಣನವರು ಹೊಳೆ ಹಳ್ಳ ಬಾವಿಗಳು ಮೈದೆಗೆದರೆ ಗೊಳ್ಳೆ ಗೊರಜೆ ಚಿಪ್ಪುಗಳ ಕಾಣಬಹುದು. ವಾರಿಧಿ ಮೈದೆಗೆದರೆ ರತ್ನಂಗಳು ಕಾಣಬಹುದು ಎಂದು ಹೇಳಿದ್ದಾರೆ.
ಹಾಗೆ ದೇಹ ಅಥವಾ ಜೀವನದ ಕಡಲಿನ ಮೇಲೆ ಏನೂ ಕಾಣುವುದಿಲ್ಲ. ಬರಿ ಆಡಂಬರದ ಡಂಬಾಚಾರದ ಬೂಟಾಟಿಕೆಯ ನೊರೆತೆರೆಗಳು. ನಿನ್ನ ಅಂತರಂಗದ ತಳಕ್ಕಿಳಿದರೆ ಪರಮಾತ್ಮನ ಅನುಭಾವದ ಮುತ್ತು ರತ್ನಗಳನ್ನು ಹೆಕ್ಕಿ ತೆಗೆಯಬಹುದು. ಆದಕಾರಣ ಭಕ್ತಿಯಿಂದ ಭಾವ ಪ್ರವೇಶ ಮಾಡಿ ಪ್ರೀತಿ, ಪ್ರೇಮ, ಕರುಣೆ, ಅನುಕಂಪ, ಸಹನೆ ,ಸೈರಣೆ ,ಮಾನವೀಯತೆ, ಶಾಂತಿ, ಸಮಾಧಾನ ಸಮಭಾವ, ಸಹಬಾಳ್ವೆ, ಸಹೋದರತ್ವ, ಸೌಹಾರ್ದ, ಸಹಕಾರ, ಸುಜ್ಞಾನ, ಪರಮಾನಂದ ಮುಂತಾದ ರತ್ನಗಳನ್ನು ಪಡೆದು ಸದ್ಗುಣ ಸಂಪನ್ನನಾಗಿ ಜೀವಿಸು. ಶಿವಶರಣರು ಅನುಭಾವದ ವಚನ ಸಂಪತ್ತನ್ನು ಜಗಕ್ಕೆ ಕೊಟ್ಟು ಹೋದಂತೆ ನೀನು ನಿನ್ನ ಅನುಭಾವದ ಸಿರಿನುಡಿಯ ಮುತ್ತುರತ್ನಗಳನ್ನು ಬಿಟ್ಟುಹೋಗು.
ರಚನೆ ಮತ್ತು ವಿವರಣೆ ಎನ್.ಶರಣಪ್ಪ ಮೆಟ್ರಿ
ಮೊ. 9449030990