ಸಿಂದಗಿ: ಪುಸ್ತಕ ಮತ್ತು ಸರಕಾರ ಬದಲಾಗಬಹುದು ಆದರೆ ಗುರು ಎಂದಿಗೂ ಬದಲಾಗಲಾರ. ಸಮಾಜದಲ್ಲಿ ಒಳ್ಳೆಯ ಬದುಕು ಕಟ್ಟಿಕೊಳ್ಳಲು ಗುರು ಕಲಿಸಿದ ವಿದ್ಯೆಯನ್ನು ಯಾರಿಂದಲೂ ಕಸಿದುಕೊಳ್ಳಲು ಸಾಧ್ಯವಿಲ್ಲ ಎಂದು ಶಿರುಂಜಿ ಜ್ಞಾನ ಯೋಗಾಶ್ರಮದ ಪೂಜ್ಯ ಶ್ರೀ ಬಸವ ಸಮರ್ಥ ಮಹಾಸ್ವಾಮಿಗಳು ಹೇಳಿದರು.
ಪಟ್ಟಣದ ಆಶೀರ್ವಾದ ಕಲ್ಯಾಣ ಮಂಟಪದಲ್ಲಿ ನಮ್ಮ ಗೆಳೆಯರ ಬಳಗ ಹಮ್ಮಿಕೊಂಡ ಗುರು ಸನ್ಮಾನ ಹಾಗೂ ಸ್ನೇಹ ಸಮ್ಮಿಲನ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿ, ಸನ್ಯಾಸಿಯಾದವರು ಶಿಷ್ಯರ ಏಳಿಗೆ ಬಯಸಬೇಕು ಅಂದಾಗ ಮಾತ್ರ ಸ್ವಾಮೀಜಿಯಾಗಲು ಸಾಧ್ಯ ಅಂತೆಯೇ ಎಲ್ಲಿ ಶಾಂತಿ ಕಾಣಲು ಸಾಧ್ಯವೋ ಅದೇ ಗುರು. ನಿಸರ್ಗದ ವೈಪರಿತ್ಯದಿಂದ ಎಲ್ಲವು ಹಾಳಾಗಬಹುದು ಆದರೆ ಗುರುಕೊಟ್ಟ ವಿದ್ಯೆ ಎಂದೂ ಹಾಳಾಗದು. ಭೂಮಿಯನ್ನು ನಂಬಿದ ರೈತ, ಸಮಾಜವನ್ನು ಸನ್ಮಾರ್ಗದೆಡೆಗೆ ಸಾಗಲು ತನ್ನ ಜೀವನವನ್ನೆ ಮುಡುಪಾಗಿಟ್ಟ ಶಿಕ್ಷಕ, ಭಾರತ ಮಾತೆಯನ್ನು ಗಡಿಯಲ್ಲಿ ರಕ್ಷಣೆ ಮಾಡುತ್ತಿರುವ ಯೋಧ ಈ ಮೂವರು ಭಾರತ ಮಾತೆಯ ಕಣ್ಣುಗಳಿದ್ದಂತೆ ಕಾರಣ ಗುರು ತೋರಿದ ಮಾರ್ಗದಲ್ಲಿ ನಡೆದು ಸಮಾಜ ಬೆಳಗುವ ದೀಪಗಳಾಗಬೇಕು ಎಂದರು.
ನಮ್ಮ ಗೆಳೆಯರ ಬಳಗ ಹಮ್ಮಿಕೊಂಡ ಗುರು ಸನ್ಮಾನ ಹಾಗೂ ಸ್ನೇಹ ಸಮ್ಮಿಲನ ಕಾರ್ಯಕ್ರಮವನ್ನು ಶಾಸಕ ಅಶೋಕ ಮನಗೂಳಿ ಉದ್ಘಾಟಿಸಿದರು.
ಅಧ್ಯಕ್ಷತೆ ವಹಿಸಿದ್ದ ರಾಷ್ಟ್ರ ಪ್ರಶಸ್ತಿ ಪುರಷ್ಕೃತ ಹ.ಮ.ಪೂಜಾರ ಮಾತನಾಡಿ, ಗುರುವಿಗಿಂತ ಶಿಷ್ಯ ಎತ್ತರ ಸ್ಥಾನದಲ್ಲಿ ಬೆಳೆದರೆ ಅದುವೇ ಗುರುವಿಗೆ ನೀಡುವ ಗೌರವವಾಗಿದೆ. 1981ರಿಂದ ಪ್ರಾಥಮಿಕ, ಪ್ರೌಢಶಾಲೆಯಲ್ಲಿ ವಿದ್ಯಾಬ್ಯಾಸ ಮುಗಿಸಿದ ವಿದ್ಯಾರ್ಥಿಗಳು ಒಂದೆಡೆ ಸೇರಿ ಗುರುವಂದನೆ ಮಾಡುವ ಮೂಲಕ ಪರಸ್ಪರ ಸೇರಿ ಬದುಕಿನ ಕ್ಷಣಗಳನ್ನು ಮೆಲುಕು ಹಾಕುವ ಕಾರ್ಯವಾಗಿದೆ. ಅಲ್ಲದೆ ಅಭೂತಪೂರ್ವ ಗುರುವಂದನೆಯ ಜೊತೆಗೆ ಸಿಬ್ಬಂದಿಗಳಿಗೂ ಗೌರವ ಸಲ್ಲಿಸಿದ್ದು ಸ್ವಾಗತಾರ್ಹವಾಗಿದೆ ಎಂದು ಅಭಿಮತ ವ್ಯಕ್ತಪಡಿಸಿದರು.
ಎಚ್.ಟಿ.ಕುಲಕರ್ಣಿ ಶಿಕ್ಷಣ ಸಂಸ್ಥೆಯ ಮುಖ್ಯಸ್ಥ ಪ್ರಕಾಶ ಚೌಧರಿ, ಸವಿತಾ ಬಮ್ಮಣ್ಣಿ, ಭಗವಂತ್ರಾಯ ರೇವೂರ ಅನಿಸಿಕೆ ವ್ಯಕ್ತಪಡಿಸಿದರು.
ಸನ್ಮಾನ ಸ್ವೀಕರಿಸಿದ ಶಿಕ್ಷಕ ಎಸ್.ಕೆ.ಗುಗ್ಗರಿ ಮಾತನಾಡಿದರು.
ಈ ಸಂದರ್ಭದಲ್ಲಿ ಕಲಿಕಾ ಸಮಯದಲ್ಲಿ ಬೋಧನೆ ಮಾಡಿದ ಎಚ್.ಜಿ.ಕನ್ಯಾ ಪ್ರೌಢಶಾಲೆ, ಬಾಲಕರ ಪ್ರೌಢಶಾಲೆ, ಚೆನ್ನವೀರ ಪ್ರೌಢಶಾಲೆ, ಅಂಜುಮನ್ ಪ್ರೌಢಶಾಲೆಯ ಶಿಕ್ಷಕರಿಗೆ ಸನ್ಮಾನಿಸಿ ಗೌರವಿಸಲಾಯಿತು.
ನೇತೃತ್ವ ವಹಿಸಿದ ಮುತ್ತು ಮುಂದೆವಾಡಗಿ, ಕಾಶಿನಾಥ ಲೋಣಿ, ಸಂಜೀವ ವಡ್ಡೋಡಗಿ, ರಮೇಶ ಹೂಗಾರ, ಡಾ ರಾಜಶೇಖರ ಸಂಗಮ, ಖಾದರ ಬಂಕಲಗಿ, ಸಿದ್ರಾಮ ಕುಂಬಾರ, ಸಂತೋಷ ಬಮ್ಮಣ್ಣಿ, ಶಿವಾನಂದ ಹಡಪದ, ಶೈಲಜಾ ಮಣ್ಣೂರ, ರುದ್ರಗೌಡ ಬಿರಾದಾರ, ರಾಜು ಕೊಳಕೂರ, ಅನೀಲ ಕೊಳೂರ ಸೇರಿದಂತೆ ನೂರಾರು ಹಳೇ ವಿದ್ಯಾರ್ಥಿಗಳು ಇದ್ದರು.
ಭಗವಂತ ರೆವೂರ ಪ್ರಾರ್ಥಿಸಿ ಗುರುವಂದಿಸಿದರು. ಶಿಕ್ಷಕ ವ್ಹಿ.ಎಸ್. ಪಾಟೀಲ ಸ್ವಾಗತಿಸಿದರು. ಗುರುನಾಥ ಥೋರ್ತೆ ನಿರೂಪಿಸಿ ವಂದಿಸಿದರು.