ಹಿರಿಯ ಕಾದಂಬರಿಕಾರ, ಸಮಾಜಮುಖಿ ಚಿಂತಕ ಎಸ್. ಎಲ್. ಭೈರಪ್ಪ ಅವರಿಗೆ ಮರಣೊತ್ತರ ಕರ್ನಾಟಕ ರತ್ನ ಪ್ರಶಸ್ತಿ ಘೋಷಿಸುವ ಮೂಲಕ ಅವರ ಸಾಹಿತ್ಯ ಸೇವೆಗೆ ಗೌರವ ನೀಡಬೇಕೆಂದು ಕನ್ನಡ ಸಾಹಿತ್ಯ ಪರಿಷತ್ತಿನ ದತ್ತಿ ಪ್ರಶಸ್ತಿ ಪುರಸ್ಕೃತ ಸಾಹಿತಿ ಡಾ ಭೇರ್ಯ ರಾಮಕುಮಾರ ರಾಜ್ಯ ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಈ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿಪತ್ರ ಬರೆದಿರುವ ಅವರು ಎಸ್. ಎಲ್. ಭೈರಪ್ಪ ಕನ್ನಡ ಭಾಷೆಗೆ ಅಂತಾರಾಷ್ಟ್ರೀಯ ಗೌರವ ತಂದುಕೊಟ್ಟಿರುವ ಅಪರೂಪದ ಸಾಹಿತಿಗಳು. ಅವರು ಬರೆದಿರುವ ಬಹುತೇಕ ಕಾದಂಬರಿಗಳು ಆಂಗ್ಲ ಭಾಷೆಗೆ ಅನುವಾದಗೊಂಡು ಲಕ್ಷಾಂತರ ಓದುಗರ ಮನಗೆದ್ದಿವೆ.
ಭೈರಪ್ಪ ಅವರು ತಮ್ಮ ಜೀವಿತಾ ವಧಿಯಲ್ಲಿ ಬರೆದಿರುವ 24 ಮಹೋನ್ನತ ಕಾದಂಬರಿಗಳು ಭಾರತದ 14 ಭಾಷೆಗಳಿಗೆ ಅನುವಾದಗೊಂಡಿವೆ. ಭೈರಪ್ಪ ಅವರ ಸಾಹಿತ್ಯಸೇವೆ ಕುರಿತಂತೆ ಭಾರತದ ವಿವಿಧ ವಿಶ್ವವಿದ್ಯಾನಿಲಯಗಳಲ್ಲಿ ಸುಮಾರು 20 ಮಂದಿ ಸಂಶೋಧನಾ ಪ್ರಬಂಧಗಳನ್ನು ಮಂಡಿಸಿ ಗೌರವ ಡಾಕ್ಟರೇಟ್ ಪ್ರಶಸ್ತಿ ಗಳಿಸಿದ್ದಾರೆ. ಇಂತಹ ಅಮೂಲ್ಯ ಸಾಹಿತ್ಯ ಸಾಧಕರಿಗೆ ಮರಣೋತ್ತರ ಕರ್ನಾಟಕ ರತ್ನ ಪ್ರಶಸ್ತಿ ನೀಡಿದರೆ ಆ ಪ್ರಶಸ್ತಿಗೂ ಮೌಲ್ಯ ದೊರೆಯುತ್ತದೆ ಎಂದು ತಿಳಿಸಿದ್ದಾರೆ.
ಎಸ್. ಎಲ್. ಭೈರಪ್ಪ ಅವರ ಸಾಹಿತ್ಯ ಸೇವೆ ಪರಿಗಣಿಸಿ 1966 ರಲ್ಲಿ ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, 1975 ರಲ್ಲಿ ಕೇಂದ್ರ ಸಾಹಿತ್ಯ ಪ್ರಶಸ್ತಿ, 1985ರಲ್ಲಿ ಮಾಸ್ತಿ ಪ್ರಶಸ್ತಿ, 2005ರಲ್ಲಿ ಪಂಪ ಪ್ರಶಸ್ತಿ, 2010 ರಲ್ಲಿ ಸರಸ್ವತಿ ಸಮ್ಮಾನ್ ಪ್ರಶಸ್ತಿ, 2011 ರಲ್ಲಿ ನಾಡೊಜ ಪ್ರಶಸ್ತಿ, 2014 ರಲ್ಲಿ ಬೆಟಗೇರಿ ಕೃಷ್ಣಶರ್ಮ ಪ್ರಶಸ್ತಿ ಸೇರಿದಂತೆ ನೂರಾರು ಪ್ರಶಸ್ತಿಗಳು ಇವರ ಸಾಹಿತ್ಯ ಸಾಧನೆಗೆ ದೊರೆತಿವೆ. ಇವರ ಅತ್ಯಮೂಲ್ಯ ಸಾಧನೆಯನ್ನು ಗೌರವಿಸಿ ಇವರಿಗೆ ಮರಣೋತ್ತರ ಕರ್ನಾಟಕ ರತ್ನ ಪ್ರಶಸ್ತಿಯನ್ನು ನೀಡುವ ಮೂಲಕ ಇವರ ಸೇವೆಯನ್ನು ಗೌರವಿಸಬೇಕೆಂದು ಭೇರ್ಯ ರಾಮಕುಮಾರ್ ರಾಜ್ಯಸರ್ಕಾರವನ್ನು ಕೋರಿದ್ದಾರೆ.

