ಮಹಾಲಿಂಗಪೂರ: 1857ರ ಕ್ರಾಂತಿ ಭಾರತೀಯರ ಪಾಲಿಗೆ ಅದೊಂದು ಪ್ರಥಮ ಸ್ವಾತಂತ್ರ ಸಂಗ್ರಾಮ. ಭಾರತೀಯರು ಒಂದುಗೂಡಿ ಬ್ರಿಟಿಷರ ದರ್ಪಿಷ್ಠ ಆಳ್ವಿಕೆ ವಿರುದ್ಧ ಹೋರಾಟ ಮಾಡಿದ ಕ್ಷಣ. ಬ್ರಿಟಿಷರಿಗೆ ಭಾರತೀಯರು ಈ ಹೋರಾಟದ ಮೂಲಕ ಎಚ್ಚರಿಕೆಯ ಕರೆಗಂಟೆಯನ್ನು ನೀಡಿದ್ದರು ಎಂದು ಕಲ್ಲೋಳಿಯ ಶ್ರೀ ರಾಮಲಿಂಗೇಶ್ವರ ಶಿಕ್ಷಣ ಸಂಸ್ಥೆಯ ಪ್ರಥಮ ದರ್ಜೆ ಕಾಲೇಜಿನ ಇತಿಹಾಸ ಅಧ್ಯಾಪಕ ಪ್ರೊ. ಶಂಕರ ನಿಂಗನೂರ ಹೇಳಿದರು.
ಅವರು ಮಹಾಲಿಂಗಪೂರದ ಕೆ.ಎಲ್.ಇ. ಸಂಸ್ಥೆಯ ಶ್ರೀ ಚನ್ನಗಿರೀಶ್ವರ ಪ್ರಸಾದಿಕ ಕಲಾ, ವಿಜ್ಞಾನ ಹಾಗೂ ಡಿ.ಡಿ.ಶಿರೋಳ ವಾಣಿಜ್ಯ ಮಹಾವಿದ್ಯಾಲಯದ ಇತಿಹಾಸ ವಿಭಾಗ ಮತ್ತು ಆಯ್.ಕ್ಯೂ.ಎಸ್ಸಿ ಸಹಯೋಗದಲ್ಲಿ ‘೧೮೫೭ರ ಕ್ರಾಂತಿಯ ಸ್ವರೂಪ’ ಎಂಬ ವಿಷಯದ ಮೇಲೆ ಹಮ್ಮಿಕೊಂಡಿದ್ದ ವಿಶೇಷ ಉಪನ್ಯಾಸ ಕಾರ್ಯಕ್ರದಲ್ಲಿ ಮುಖ್ಯಅತಿಥಿಯಾಗಿ ಆಗಮಿಸಿ ಮಾತನಾಡುತ್ತಾ, ತಕ್ಕಡಿಯನ್ನು ಹಿಡಿದುಕೊಂಡು ಭಾರತಕ್ಕೆ ಬಂದಿದ್ದ ಬ್ರಿಟಿಷರು, ಇಲ್ಲಿಯ ರಾಜಕೀಯ ಅರಾಜಕತೆಯ ಲಾಭ ಪಡೆದು, ಸಾಮ್ರಾಜ್ಯವನ್ನು ಕಟ್ಟಿ, ದಬ್ಬಾಳಿಕೆಯಿಂದ ರಾಜ್ಯಭಾರ ಮಾಡುತ್ತಿದ್ದರು. ಬ್ರಿಟಿಷರ ದತ್ತುಸ್ವೀಕಾರ ಕಾಯಿದೆ, ಸಹಾಯಕ ಸೈನ್ಯಪದ್ಧತಿ ಮತ್ತು ಅವರ ಒಡೆದು ಆಳುವ ಕುಟಿಲನೀತಿಯಿಂದ ಭಾರತದ ಎಲ್ಲ ರಾಜ್ಯಗಳನ್ನು ತಮ್ಮ ಅಧೀನಕ್ಕೆ ತೆಗೆದುಕೊಂಡಿದ್ದು.
ಅದರಲ್ಲಿ ಕೆಲವೊಂದು ರಾಜ್ಯಗಳು ಅವರ ಹಿಡಿತಕ್ಕೆ ಸಿಕ್ಕಿರಲಿಲ್ಲ. ಬ್ರಿಟಿಷರ ರಾಜ್ಯದಾಹ ಮತ್ತು ಆಕ್ರಮಣನೀತಿಯೇ ಈ ಹೋರಾಟಗಳಿಗೆ ಮೂಲ. ದೇಶೀಯ ರಾಜರು ತಮ್ಮ ರಾಜ್ಯ ಮತ್ತು ಹಕ್ಕುಗಳನ್ನು ಕಾಯ್ದುಕೊಳ್ಳಬೇಕಾಗಿ ಬಂದಾಗ ಬ್ರಿಟಿಷರ ವಿರುದ್ಧ ಹೋರಾಡಬೇಕಾಯಿತು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರಾಚಾರ್ಯರಾದ ಡಾ. ಕೆ. ಎಂ. ಅವರಾದಿ ವಹಿಸಿ ಮಾತನಾಡಿ ಭಾರತೀಯರು ಶಸ್ತ್ರಾಸ್ತ್ರಗಳನ್ನು ಹಿಡಿದು ಬ್ರೀಟಿಷರ ವಿರುದ್ದ ಹೋರಾಡಿದ ೧೮೫೭ರ ಕ್ರಾಂತಿ ಸ್ಮರಣೀಯ ಎಂದರು.
ಆಯ್.ಕ್ಯೂ.ಎಸ್ಸಿ ಸಂಯೋಜಕರಾದ ಡಾ. ಎಸ್. ಡಿ. ಸೋರಗಾಂವಿ, ಇತಿಹಾಸ ವಿಭಾಗದ ಮುಖ್ಯಸ್ಥ ಟಿ. ಡಿ. ಡಂಗಿ ಉಪಸ್ಥಿತರಿದ್ದರು.