ಮೂಡಲಗಿ: ಸಮಾಜದಲ್ಲಿ ಭ್ರಷ್ಟಾಚಾರವು ಸಾಮಾಜಿಕ ಮತ್ತು ಆರ್ಥಿಕ ಅಭಿವೃದ್ಧಿಯನ್ನು ಹಾಳುಮಾಡುತ್ತಿರುವ ಗಂಭೀರ ಪಿಡುಗಾಗಿದೆ. ಭ್ರಷ್ಟಾಚಾರದ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸುವುದು ಅನಿವಾರ್ಯವಾಗಿದೆ ಎಂದು ಮೂಡಲಗಿ ತಹಶೀಲ್ದಾರ ಶ್ರೀಶೈಲ ಗುಡಮೆ ಅಭಿಪ್ರಾಯಪಟ್ಟರು.
ಅವರು ತಾಲೂಕಿನ ಕಲ್ಲೋಳಿ ಪಟ್ಟಣದ ಶ್ರೀ ರಾಮಲಿಂಗೇಶ್ವರ ಶಿಕ್ಷಣ ಸಂಸ್ಥೆಯ ಪ್ರಥಮ ದರ್ಜೆ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ ಮತ್ತು ಐಕ್ಯೂಎಸಿ ಘಟಕಗಳ ಸಹಯೋಗದಲ್ಲಿ ಶನಿವಾರ ಆಯೋಜಿಸಿದ್ದ “ಭ್ರಷ್ಟಾಚಾರ ವಿರೋಧಿ ಅರಿವು ಸಪ್ತಾಹ ಹಾಗೂ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ-೨೦೨೫ರ ಪೂರ್ವಭಾವಿ ಜಾಗೃತಿ ಅಭಿಯಾನ” ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು.
ಸರ್ಕಾರಗಳ ನೀತಿ ಧೋರಣೆಯನ್ನು ರೂಪಿಸುವಲ್ಲಿ ಸಮೀಕ್ಷೆಗಳ ಪಾತ್ರ ಮಹತ್ವದ್ದಾಗಿದೆ. ಎಲ್ಲ ನಾಗರಿಕರು ಸಂಪೂರ್ಣವಾದ ಮಾಹಿತಿಯನ್ನು ಒದಗಿಸುವ ಮೂಲಕ ಸಮೀಕ್ಷೆಯ ಕಾರ್ಯ ಯಶಸ್ವಿಯಾಗಿಸಲು ಸಹಕರಿಸಬೇಕು ಎಂದರು.
ಕಲ್ಲೋಳಿ ಪಟ್ಟಣ ಪಂಚಾಯತ ಮುಖ್ಯಾಧಿಕಾರಿ ಚಿದಾನಂದ ಮುಗಳಖೋಡ ಮಾತನಾಡಿ,
ಭವಿಷ್ಯದ ಪ್ರಜೆಗಳಾದ ವಿದ್ಯಾರ್ಥಿಗಳು ಪ್ರಾಮಾಣಿಕತೆ ಮತ್ತು ನೈತಿಕ ಮೌಲ್ಯಗಳನ್ನು ಅಳವಡಿಸಿಕೊಂಡು ಸಮಾಜಕ್ಕೆ ಮಾದರಿಯಾಗಬೇಕು. ಎಲ್ಲಿಯವರೆಗೆ ಲಂಚವನ್ನು ನೀಡುತ್ತೇವೆಯೋ ಅಲ್ಲಿಯವರೆಗೂ ಭ್ರಷ್ಟಾಚಾರ ನಿಲ್ಲುವುದಿಲ್ಲ. ಈಗ ನಡೆಯುತ್ತಿರುವ ಸಾಮಾಜಿಕ ಹಾಗೂ ಶೈಕ್ಷಣಿಕ ಸಮೀಕ್ಷೆಯ ಕುರಿತು ಎನ್.ಎಸ್.ಎಸ್. ಸ್ವಯಂಸೇವಕರು ಸೇವಾ ಮನೋಭಾವದಿಂದ ಸಾರ್ವಜನಿಕರಲ್ಲಿ ಅರಿವು ಮೂಡಿಸಬೇಕೆಂದು ವಿನಂತಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಚಾರ್ಯ ಡಾ. ಸುರೇಶ ಹನಗಂಡಿ ಮಾತನಾಡಿ, “ಸಮಾಜದಲ್ಲಿ ಭ್ರಷ್ಟಾಚಾರವನ್ನು ನಿರ್ಮೂಲನೆ ಮಾಡಲು ವಿದ್ಯಾರ್ಥಿಗಳು ಮತ್ತು ಯುವಜನರು ಪ್ರಮುಖ ಪಾತ್ರ ವಹಿಸಬೇಕು. ಭ್ರಷ್ಟಾಚಾರದ ವಿರುದ್ಧ ಜಾಗೃತಿ ಮೂಡಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ” ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಧ್ಯಾಪಕರಾದ ಡಾ. ಎಂ.ಬಿ. ಕುಲಮೂರ, ಡಾ.ಕೆ.ಎಸ್. ಪರವ್ವಗೋಳ, ಬಿ.ಕೆ. ಸೊಂಟನವರ, ಆರ್. ಎಸ್. ಪಂಡಿತ, ವಿ. ವಾಯ್. ಕಾಳೆ, ವಿಲಾಸ ಕೆಳಗಡೆ, ಬಿ.ಬಿ. ವಾಲಿ, ಡಾ. ಆರ್.ಎಂ. ತೋಟಗಿ, ಬಿ.ಸಿ. ಮಾಳಿ, ಸಂತೋಷ ಬಂಡಿ, ಎಂ.ಆರ್. ಕರಗಣ್ಣಿ, ಸಾಗರ ಐದಮನಿ, ಮಲ್ಲಪ್ಪ ಮುರಗೋಡ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಕು. ರಾಧಿಕಾ ಕರೆವ್ವಗೋಳ ಪ್ರಾರ್ಥಿಸಿದರು. ಪ್ರೊ. ಡಿ.ಎಸ್. ಹುಗ್ಗಿ ಸ್ವಾಗತಿಸಿದರು. ಡಾ.ಕೆ.ಎಸ್. ಪರವ್ವಗೋಳ ನಿರೂಪಿಸಿದರು. ಎನ್ನೆಸ್ಸೆಸ್ ಕಾರ್ಯಕ್ರಮ ಅಧಿಕಾರಿ ಪ್ರೊ. ಶಂಕರ ನಿಂಗನೂರ ವಂದಿಸಿದರು.

