ಬೀದರ: ತನ್ನ ಊರಿಗೆ ಬಸ್ ಇಲ್ಲವೆಂದು ಕುಡಿದ ಮತ್ತಿನಲ್ಲಿ ಬಸ್ ನಿಲ್ದಾಣದಲ್ಲಿ ನಿಂತಿದ್ದ ಸಾರಿಗೆ ಬಸ್ ಚಲಾಯಿಸಿಕೊಂಡು ಹೋದ ಭೂಪ!
ಗಡಿ ಬೀದರ್ ಜಿಲ್ಲೆಯ ಔರಾದ ಬಸ್ ನಿಲ್ದಾಣದಲ್ಲಿ ನಿಂತಿದ್ದ ಸಾರಿಗೆ ಬಸ್ಸನ್ನು ವ್ಯಕ್ತಿಯೊಬ್ಬ ತೆಗೆದುಕೊಂಡು ನಿಲ್ದಾಣದಿಂದ ಹೊರಗಿರುವ ಡಿವೈಡರ್ ಮೇಲೆ ಹತ್ತಿಸಿದ ಘಟನೆ ನಡೆದಿದೆ.
ಯಶಪ್ಪ ಸೂರ್ಯವಂಶಿ ಎನ್ನುವ ವ್ಯಕ್ತಿ ಬೆಳಿಗ್ಗೆಯಿಂದ ನಿಲ್ದಾಣದಲ್ಲಿ ಕುಳಿತರೂ ಅವರ ಊರಿಗೆ ಹೋಗಲು ಬಸ್ ಇರಲಿಲ್ಲ, ಹೀಗಾಗಿ ಬಸ್ ತೆಗೆದುಕೊಂಡು ಹೋಗಲು ನಿರ್ಧರಿಸಿ, ಬಸ್ ನಿಲ್ದಾಣದಲ್ಲಿ ಬಸ್ ನಿಲ್ಲಿಸಿ ಚಾಲಕ ಹಾಗೂ ನಿರ್ವಾಹಕರು ಎಂಟ್ರಿ ಮಾಡಿಕೊಂಡು ಬರುವಷ್ಟರಲ್ಲಿ ಬಸ್ ತೆಗೆದುಕೊಂಡು ಹೊದ ಭೂಪ ಹೊರಗಿನ ಡಿವೈಡರ್ ಗೆ ಡಿಕ್ಕಿ ಹೊಡೆಸಿದ ಈ ಘಟನೆ ನಡೆದಿದೆ.
ನಗರ ಪೊಲೀಸ್ ರಿಂದ ದಸ್ತಗಿರಿ ಮಾಡಲಾದ ಸೂರ್ಯವಂಶಿ ಇಟ್ಟಿಗೆ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದು, ಸೋಮವಾರ ಗ್ರಾಮಕ್ಕೆ ತೆರಳಲು ಔರಾದಗೆ ಬಂದಿದ್ದು ಪಟ್ಟಣದ ಕಂಠಪೂರ್ತಿ ಕುಡಿದು ಬಸ್ ಹೊಡೆದುಕೊಂಡು ಬಂದಿದ್ದ. ಆದರೆ ಹೊರಗೆ ಬರುತ್ತಲೇ ಬಸ್ ಕ್ರೂಜರ ವಾಹನಕ್ಕೆ ಡಿಕ್ಕಿ ಹೊಡೆದು ನಂತರ ಡಿವೈಡರ್ ಮೇಲೆ ಹತ್ತಿದೆ.
ಸ್ಥಳಕ್ಕೆ ಪಿಎಸ್ಐ ಮಡಿವಾಳಪ್ಪ ಭೇಟಿ ನೀಡಿ ಸಂಚಾರ ದಟ್ಟಣೆ ನಿವಾರಿಸಿದ್ದಾರೆ.ಔರಾದ್ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವರದಿ: ನಂದಕುಮಾರ ಕರಂಜೆ, ಬೀದರ