ಮೈಸೂರಿನಲ್ಲಿ ವೈಭವದಿಂದ ನಡೆದ ಮೂರನೇ ವರ್ಷದ ದ್ವಾದಶ ಗರುಡೋತ್ಸವ

Must Read

ವೈಷ್ಣವ ಪರಂಪರೆಯ  ಮಹಾಸಂಗಮಕ್ಕೆ  ಸಾಕ್ಷಿಯಾದ  ಸಾವಿರಾರು ಭಕ್ತರು

ಮೈಸೂರು: ಪಂಚಗರುಡೋತ್ಸವ ಸೇವಾ ಸಮಿತಿ (ರಿ),  ಮೈಸೂರು ಇವರ ಆಶ್ರಯದಲ್ಲಿ ಮಹಾಜನ ವಿದ್ಯಾಸಂಸ್ಥೆ ಕ್ರೀಡಾಂಗಣದಲ್ಲಿ ಮೂರನೇ ವರ್ಷದ “ದ್ವಾದಶ ಗರುಡೋತ್ಸವ” ಮಹೋತ್ಸವ ಭಕ್ತಿಭಾವಪೂರ್ಣ ವಾತಾವರಣದಲ್ಲಿ ಅದ್ಧೂರಿಯಾಗಿ ನಡೆಯಿತು.

ನಾಡಿನ ವೈಷ್ಣವ ಪರಂಪರೆಯನ್ನು ಒಂದೇ ವೇದಿಕೆಯಲ್ಲಿ ಪ್ರತಿಬಿಂಬಿಸುವ ಈ ಅಪೂರ್ವ ಉತ್ಸವದಲ್ಲಿ ಶ್ರೀರಂಗಂ, ತಿರುಪತಿ, ಕಾಂಚೀಪುರಂ, ಮೇಲುಕೋಟೆ ಹಾಗೂ ಶ್ರೀರಂಗಪಟ್ಟಣದ ಪಂಚ ಮಹಾದಿವ್ಯಕ್ಷೇತ್ರಗಳ ಗರುಡೋತ್ಸವ ಸಂಪ್ರದಾಯವನ್ನು ಸಾಂಕೇತಿಕವಾಗಿ ಪುನರುಜ್ಜೀವನಗೊಳಿಸಲಾಯಿತು. ಗರುಡನ ಮೇಲೆ ವಿರಾಜಮಾನನಾಗಿರುವ ನಾರಾಯಣನ ದೈವೀ ತತ್ತ್ವವನ್ನು ಆಚರಣೆಯ ರೂಪದಲ್ಲಿ ಭಕ್ತರಿಗೆ ಅನುಭವಿಸುವ ಅವಕಾಶ ದೊರೆಯಿತು.

ಉತ್ಸವದ ಪ್ರಮುಖ ಆಕರ್ಷಣೆಯಾಗಿ ಶ್ರೀ ಲಕ್ಷ್ಮೀನರಸಿಂಹ ಸ್ವಾಮಿ, ಪ್ರಸನ್ನ ವೇಂಕಟರಮಣ, ಶ್ರೀ ಶ್ರೀನಿವಾಸ, ಸಂತಾನ ವೇಣುಗೋಪಾಲ ಸ್ವಾಮಿ, ರಂಗನಾಥ, ಚೆಲುವ ನಾರಾಯಣಸ್ವಾಮಿ, ಶ್ರೀ ವರದರಾಜ, ಯೋಗನರಸಿಂಹ ಹಾಗೂ ಶ್ರೀ ರಾಮಾನುಜಾಚಾರ್ಯ ಪರಂಪರೆಯ ದೇವತೆಗಳ ಗರುಡಾರೋಹಣ ಸೇವೆಗಳು ಭಕ್ತರ ಸಮ್ಮುಖದಲ್ಲಿ ನೆರವೇರಿದವು. ವೇದಮಂತ್ರಗಳ ಘೋಷ, ದಿವ್ಯಪ್ರಬಂಧ ಪಠಣ ಮತ್ತು ಭಕ್ತರ ನಾಮಸ್ಮರಣೆ ಉತ್ಸವಕ್ಕೆ ದಿವ್ಯ ವೈಭವವನ್ನು ನೀಡಿದವು.

ರಾಮಾನುಜ ವೇದಿಕೆಯಲ್ಲಿ ನಡೆದ ಉದ್ಘಾಟನಾ  ಸಮಾರಂಭದಲ್ಲಿ ಮೇಲುಕೋಟೆಯ ಯದುಗಿರಿ ಯತಿರಾಜ ಮಠದ ನಾರಾಯಣ ರಾಮಾನುಜ ಜೀಯರ್ ಸ್ವಾಮಿಗಳು, ಅವಧೂತ ದತ್ತಪೀಠದ ಶ್ರೀ ದತ್ತ ವಿಜಯೇಂದ್ರ ತೀರ್ಥ ಸ್ವಾಮೀಜಿ, ತ್ರಿದಂಡಿ ಶ್ರೀಮನ್ ನಾರಾಯಣ ರಾಮಾನುಜ ಚಿನ್ನಜಿಯರ್ ಸ್ವಾಮೀಜಿ ಸೇರಿದಂತೆ ಹಲವಾರು ಯತಿಗಳು ದಿವ್ಯಸಾನ್ನಿಧ್ಯ ವಹಿಸಿದರು. ಶಾಸಕ ಟಿ.ಎಸ್. ಶ್ರೀವತ್ಸ ಅಧ್ಯಕ್ಷತೆ ವಹಿಸಿ, ಧಾರ್ಮಿಕ ಪರಂಪರೆಯ ಸಂರಕ್ಷಣೆ ಪ್ರತಿಯೊಬ್ಬರ ಜವಾಬ್ದಾರಿಯೆಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಇದೇ ವೇಳೆ ಬೆಳಿಗ್ಗೆಯಿಂದ ವಿಷ್ಣು ಸಹಸ್ರನಾಮ ಪಾರಾಯಣ, ಯುಗಳ ವೀಣಾ ವಾದನ, ಭರತನಾಟ್ಯ ವಿಶೇಷ ನೃತ್ಯ ರೂಪಕ ಸೇರಿದಂತೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಭಕ್ತರನ್ನು ಮಂತ್ರಮುಗ್ಧಗೊಳಿಸಿದವು.

ವೈಷ್ಣವ ಸಂಸ್ಕೃತಿಯ ಉಳಿವಿಗೆ ಇಂತಹ ಉತ್ಸವಗಳು  ಪ್ರೇರಣೆಯಾಗುತ್ತಿದ್ದು, ಮುಂದಿನ ಪೀಳಿಗೆಗೆ ಪರಂಪರೆಯನ್ನು ವರ್ಗಾಯಿಸುವಲ್ಲಿ ಪಂಚಗರುಡೋತ್ಸವ ಸೇವಾ ಸಮಿತಿ (ರಿ) ಮಹತ್ವದ ಪಾತ್ರವಹಿಸುತ್ತಿದೆ ಎಂದು ಆಯೋಜಕರು ತಿಳಿಸಿದರು.

LEAVE A REPLY

Please enter your comment!
Please enter your name here

Latest News

ಸವಿತಾ ಮಹರ್ಷಿ ಜಯಂತಿ ಕಾರ್ಯಕ್ರಮ

ಸಿಂದಗಿ; ಪ್ರತಿಯೊಂದು ಸಮುದಾಯವನ್ನು ಗೌರವಿಸಿ ಆದರ್ಶ ವ್ಯಕ್ತಿಗಳ ತತ್ವಗಳನ್ನು ಮುಂದಿನ ಪೀಳಿಗೆಗೆ ಗೊತ್ತುಪಡಿಸುವ ನಿಟ್ಟಿನಲ್ಲಿ ರಾಜ್ಯ ಸರಕಾರವು ಜಯಂತಿಗಳನ್ನು ಆಚರಿಸುವ ಸತ್ಕಾರ್ಯಗಳನ್ನು ನಡೆಸಿದೆ. ಮಹಾನ್ ವ್ಯಕ್ತಿಗಳ...

More Articles Like This

error: Content is protected !!
Join WhatsApp Group