ಸಿಂದಗಿ- ಶ್ರೀ ಮಠದಿಂದ ಸುಮಾರು 3-4 ವರ್ಷಗಳಿಂದ ಶ್ರೀ ವೀರಭದ್ರೇಶ್ವರ ಮತ್ತು ಭದ್ರಕಾಳಿ ಅಮ್ಮನವರ ಜಾತ್ರಾ ಮಹೋತ್ಸವವನ್ನು ಆಚರಿಸುತ್ತಾ ಬರಲಾಗುತ್ತಿದೆ ಭಕ್ತರ ಸಹಕಾರದಿಂದ ಬೆಳ್ಳಿ ರಥ ನಿರ್ಮಾಣಗೊಂಡಿದೆ. ರಥವನ್ನು ಮಹಿಳೆಯರು ಎಳೆಯುವುದೇ ಈ ಜಾತ್ರೆಯ ಅತ್ಯಂತ ವಿಶೇಷ ಎಂದು ಡಾ. ಪ್ರಭು ಸಾರಂಗದೇವ ಶಿವಾಚಾರ್ಯರು ಹೇಳಿದರು.
ಸ್ಥಳೀಯ ಸಾರಂಗಮಠದಲ್ಲಿ ವೇದ ಘೋಷಗಳೊಂದಿಗೆ ಪುರವಂತರ ಸೇವೆ, ಗುಗ್ಗಳ ಸೇವೆಯೊಂದಿಗೆ ಪ್ರಾರಂಭಗೊಂಡ ಪೂಜಾ ಕ್ರಾರ್ಯಕ್ರಮಕ್ಕೆ ಹಾಗೂ ಬೆಳ್ಳಿ ರಥೋತ್ಸವಕ್ಕೆ ಶ್ರೀಗಳು ಚಾಲನೆ ನೀಡಿ ಮಾತನಾಡಿದರು.
ಪಟ್ಟಣದ ಸಾರಂಗಮಠದಲ್ಲಿ ಮಂಗಳವಾರ ಜರುಗಿದ ಲಿಂ. ಪೂಜ್ಯ ಶ್ರೀ ಚೆನ್ನವೀರ ಸ್ವಾಮೀಜಿಗಳ 128 ನೇ ಜಯಂತ್ಯುತ್ಸವದ ನಿಮಿತ್ತ ಶ್ರೀ ವೀರಭದ್ರೇಶ್ವರ ಹಾಗೂ ಭದ್ರಕಾಳಿ ಅಮ್ಮನವರ ಜಾತ್ರಾ ಮಹೋತ್ಸವಕ್ಕೆಂದು ಭಕ್ತರ ಸಹಕಾರದಿಂದ ಕಳೆದ 3-4 ವರ್ಷಗಳ ಹಿಂದೆ ನಿರ್ಮಾಣ ಮಾಡಿರುವ ಸುಮಾರು 120 ಕೆಜಿ ತೂಕದ ಬೆಳ್ಳಿಯಿಂದ ರಚನೆ ಮಾಡಿರುವ ರಥವನ್ನು ನೂರಾರು ಮಹಿಳೆಯರು ಎಳೆದು ಸಂತಸ ಪಟ್ಟರು.
ಶ್ರೀ ಸಾರಂಗಮಠದಿಂದ ಪ್ರಾರಂಭಗೊಂಡ ಬೆಳ್ಳಿ ರಥೋತ್ಸವವು ಪಟ್ಟಣದ ಶ್ರೀ ಸ್ವಾಮಿ ವಿವೇಕಾನಂದ ವೃತ್ತ, ತೋಂಟದಾರ್ಯ ಡಾ. ಸಿದ್ದಲಿಂಗ ಸ್ವಾಮಿಗಳ ರಸ್ತೆಯ ಮಾರ್ಗವಾಗಿ ಸ್ಥಳೀಯ ಗಚ್ಚಿನ ಮಠದಲ್ಲಿರುವ ಶ್ರೀ ವೀರಭದ್ರೇಶ್ವರ ದೇವಸ್ಥಾನದವರೆಗೂ ಸಾಗಿತು. ಮಾರ್ಗ ಮಧ್ಯದಲ್ಲಿ ನೂರಾರು ಮಹಿಳೆಯರು ಭಜನೆ, ಜಯ ಘೋಷಗಳನ್ನು ಮಾಡುತ್ತಾ ತಮ್ಮ ಭಕ್ತಿಯ ಪರಾಕಾಷ್ಠೆಯನ್ನು ಮೆರೆದರು.
ಶ್ರೀ ವೀರಭದ್ರ ದೇವಸ್ಥಾನದಲ್ಲಿ ವಿವಿಧ ಪೂಜಾ ಕೈಂಕರ್ಯಗಳನ್ನು ಮುಗಿಸಿ ಡಾ. ಪ್ರಭು ಸಾರಂಗದೇವ ಶಿವಾಚಾರ್ಯರು ಅಗ್ನಿ ಪ್ರವೇಶವನ್ನು ಮಾಡಿದರು. ನಂತರ ಅದೇ ಮಾರ್ಗವಾಗಿ ಶ್ರೀ ಮಠಕ್ಕೆ ಬೆಳ್ಳಿ ರಥೋತ್ಸವ ಸಾಗಿತು. ರಥೋತ್ಸವದಲ್ಲಿ ಡೊಳ್ಳು ಕುಣಿತ, ಹಲಗೆ ಸೇರಿದಂತೆ ವಿವಿಧ ವಾದ್ಯ ಮೇಳಗಳು ಜನಾಕರ್ಷಣೆಗೊಂಡಿತು.
ಸ್ಥಳೀಯ ಸಾರಂಗಮಠದ ಶ್ರೀ ವೀರಭದ್ರೇಶ್ವರ ಮತ್ತು ಭದ್ರ ಕಾಳಿ ಜಾತ್ರಾ ಕಾರ್ಯಕ್ರಮದಲ್ಲಿ ಕೊಣ್ಣೂರಿನ ಶ್ರೀ ಡಾ. ವಿಶ್ವಪ್ರಭುದೇವ ಶ್ರೀಗಳು, ಕನ್ನೋಳ್ಳಿ ಶ್ರೀ ಸಿದ್ದಲಿಂಗ ಶಿಚಾಚಾರ್ಯರು, ಊರಿನ ಹಿರಿಯ ಮಠದ ಶಿವಾನಂದ ಶಿವಾಚರ್ಯರು ಸೇರಿದಂತೆ ನಾಡಿನ ಅನೇಕ ಮಠಗಳ ಹರಗುರು ಚರಮೂರ್ತಿಗಳು, ಕಾಂಗ್ರೆಸ್ ಮುಖಂಡ ಅಶೋಕ ಮನಗೂಳಿ, ಗಂಗಾಧರ ಜೋಗೂರ, ಅಶೋಕ ಮಸಳಿ, ಮುತ್ತು ಮುಂಡೇವಾಡಗಿ, ವಿಶ್ವನಾಥ ಜೋಗೂರ, ಸಿ.ಎಂ.ಪೂಜಾರಿ, ಸುರೇಶ ಜೋಗೂರ, ಶರಣಪ್ಪ ವಾರದ, ದಯಾನಂದ ಬಿರಾದಾರ, ಡಾ.ಶರಣಬಸವ ಜೋಗೂರ, ಎಸ್.ಎಮ್.ಬಿರಾದಾರ, ಬಸಣ್ಣ ಅಂಬಲಗಿ, ಡಾ. ಮಹಾಂತೇಶ ಹಿರೇಮಠ,ಗುರುಶಾಂತಯ್ಯ ಜಂಗಿನಮಠ, ಡಾ. ಅಂಬರೀಶ ಬಿರಾದಾರ, ಪ್ರಭು ಜಂಗಿನಮಠ, ಚನ್ನು ಕತ್ತಿ, ಬಸವರಾಜ ಜೋಗೂರ, ಶ್ರೀಶೈಲ ನಂದಿಕೋಲ, ಬಸವರಾಜ ಕಕ್ಕಳಮೇಲಿ, ಮಹಾಂತೇಶ ನೂಲನವರ ಸೇರಿದಂತೆ ಅನೇಕರು ಮಹಿಳೆಯರು ರಥೋತ್ಸವದಲ್ಲಿ ಭಾಗವಹಿಸಿದ್ದರು.
ಸಾರಂಗಮಠದಲ್ಲಿನ ಜಾತ್ರಾ ಮಹೋತ್ಸವದಲ್ಲಿ ಬೆಳ್ಳಿಯ ರಥವನ್ನು ಮಹಿಳೆಯರೆ ಎಳೆಯುತ್ತಿರುವುದು ವಿಶೇಷವಾಗಿದೆ. ಮಹಿಳೆಯರು ಎಲ್ಲ ಕ್ಷೇತ್ರದಲ್ಲಿಯೂ ಸಾಧನೆ ತೋರುತ್ತಿರುವುದು ನಮಗೆಲ್ಲ ಸಂತಸ ತಂದಿದೆ. ರಥ ಎಳೆಯುವ ಅವಕಾಶವನ್ನು ಕೊಟ್ಟಂಥ ಸಾರಂಗ ಶ್ರೀಗಳಿಗೆ ಅಭಿನಂದನೆಗಳು ರಥವನ್ನು ಎಲ್ಲ ಮಹಿಳೆಯರು ಎಳೆಯುತ್ತಿರುವುದು ಸೌಭಾಗ್ಯವೇ ಸರಿ.
ಅಶೋಕ ಮನಗೂಳಿ
ಕಾಂಗ್ರೆಸ್ ಮುಖಂಡರು, ಸಿಂದಗಿ.
ವರದಿ: ಪಂಡಿತ್ ಯಂಪೂರೆ, ಸಿಂದಗಿ