ಬೀದರ್ ಕರ್ನಾಟಕದ ಉತ್ತರದ ತುದಿಯಲ್ಲಿರುವ ಕರ್ನಾಟಕದ ಕಿರೀಟ ಎಂದು ಕರೆಯಲ್ಪಡುವ ಜಿಲ್ಲೆಯಾಗಿದೆ. ಬೀದರ್ ನಗರದ ಕೋಟೆ ಇವಾಗ ಮದುಮಗಳ ಹಾಗೆ ಸಿಂಗಾರಗೊಂಡಿದ್ದು ಇಂತಹ ಸಂದರ್ಭದಲ್ಲಿ ಯುವಕರ ಒಂದು ತಂಡ ಕೋಟೆ ತುತ್ತ ತುದಿ ಮೇಲೆ ನಿಂತು ಸೆಲ್ಪಿ ತೆಗೆದುಕೊಳ್ಳಲು ಮುಗಿಬಿದ್ದ ಘಟನೆ ನಡೆಯಿತು.
ಜಿಲ್ಲಾ ಆಡಳಿತ ಮತ್ತು ಪೊಲೀಸ ಇಲಾಖೆ ಕೋಟೆ ಒಳಗೆ ಬೀಡುಬಿಟ್ಟಿದ್ದರೂ ಅವರ ಕಣ್ಣು ತಪ್ಪಿಸಿ ಯುವಕರು ಹುಚ್ಚಾಟಕ್ಕೆ ಬಿದ್ದಿದ್ದು ನೋಡಿ ಬೀದರ ಜಿಲ್ಲೆ ಜನರು ಆಕ್ರೋಶ ವ್ಯಕ್ತಪಡಿಸಿದರು.
ಬೀದರ್ 14ನೇ ಶತಮಾನದಲ್ಲಿ ಬಹಮನಿ ಸಾಮ್ರಾಜ್ಯದ ರಾಜಧಾನಿಯಾಗಿತ್ತು. ಬೀದರ್ ಕೋಟೆಯನ್ನು ಅಹ್ಮದ್ ಷಾ ವಾಲಿ ಬಹಮನಿ ನಿರ್ಮಿಸಿದ್ದು ಕೋಟೆಯನ್ನು 15 ನೇ ಶತಮಾನದಲ್ಲಿ ಒಂದನೇ ಸುಲ್ತಾನ್ ಅಹ್ಮದ್ ಷಾ ನವೀಕರಿಸಿದನು.
ಈ ಕೋಟೆಯಲ್ಲಿ ಇದೇ ಜ. 7, 8 ಮತ್ತು 9ರಂದು ನಡೆಯಲಿರುವ ಬೀದರ್ ಉತ್ಸವವನ್ನು ಸಂಪೂರ್ಣ ಸುರಕ್ಷಿತವಾಗಿ ನಡೆಸಿಕೊಡಲು ಪೊಲೀಸ್ ಇಲಾಖೆ ಭಾರಿ ಬಂದೋಬಸ್ತ್ ಏರ್ಪಾಡು ಮಾಡಿಕೊಂಡಿದ್ದು ಸರಿ ಸುಮಾರು 1500 ಪೊಲೀಸ್ ಹಾಗೂ 500 ಜನ ಹೋಮ್‌ಗಾರ್ಡಗಳಲ್ಲದೆ ಕೆಎಸ್‌ಆರ್‌ಪಿಯ 4 ತುಕಡಿಗಳು ಮತ್ತು ಡಿಎಆರ್ 4 ತುಕಡಿಗಳೊಂದಿಗೆ ಸುಮಾರು 2ಸಾವಿರ ಜನ ಅಧಿಕಾರಿಗಳು, ಸಿಬ್ಬಂದಿಯಿಂದ ಸುರಕ್ಷೆಯ ಸರ್ಪಗಾವಲು ಹಾಕಲಾಗುತ್ತಿದೆ.ಆದರೆ ಈ ಯುವಕರು ಪೊಲೀಸ ಇಲಾಖೆ ಕಣ್ಣಿಗೆ ಕಾಣದಂತೆ ಹೇಗೆ ಕೋಟೆ ಮೇಲೆ ಹೋಗಿ ಸೆಲ್ಫಿ ತೆಗೆದುಕೊಳ್ಳಲು ಅನುಮತಿ ಯಾರು ನೀಡಿದರು ಎಂದು ಪ್ರಶ್ನೆ ಏಳುತ್ತದೆ.
ಬೀದರ ಕೋಟೆಯು ಸಂರಕ್ಷಿತ ಪ್ರದೇಶವಾಗಿದ್ದರೂ ಈ ಯುವಕರು ತುದಿಯ ಮೇಲೇರಿ ಸೆಲ್ಫಿ ತೆಗೆದುಕೊಳ್ಳುತ್ತಿರುವುದು ಆಶ್ಚರ್ಯಕರ ಅಷ್ಟೇ ಅಲ್ಲದೆ ಪೊಲೀಸ್ ಭದ್ರತೆಯಲ್ಲಿ ಲೋಪವಿರುವುದನ್ನು ಸ್ಪಷ್ಟವಾಗಿ ಸಾರುತ್ತಿದೆ.
ವರದಿ: ನಂದಕುಮಾರ ಕರಂಜೆ, ಬೀದರ