ಅನಸೂಯ ಜಾಗೀರದಾರ ಗಜಲ್ ಗಳು

Must Read

ಇತ್ತೀಚಿನ ದಿನಗಳಲಿ ವಾದ ಮಾಡಲಾರೆ ಸುಮ್ಮನಿದ್ದುಬಿಡುತ್ತೆನೆ

ಕಾಗೆ ಬಿಳಿಯೆಂದವರಿಗೆ ಸಾಕ್ಷ್ಯ ನೀಡಲಾರೆ ಸುಮ್ಮನಿದ್ದುಬಿಡುತ್ತೇನೆ

ಅವರದೇ ಜಗತ್ತು ಕೂಪ ಮಂಡೂಕಗಳು ಎಲ್ಲೆಡೆಯೂ ತುಂಬಿರುವರು
ಸುಖಾ ಸುಮ್ಮನೆ ತಣ್ಣೀರ ಎರಚಿ ಕೊಳ್ಳಲಾರೆ
ಸುಮ್ಮನಿದ್ದುಬಿಡುತ್ತೇನೆ

ಒಂದೇ ಸಮನೆ ರಂಪ ರಾದ್ಧಾಂತ ಪ್ರತಿ ವಿಷಯಕೂ ಕ್ಯಾತೆ ತೆಗೆಯುವರು
ಹಾದಿಯ ಗರವ ಮನೆಗೆ ಎಳೆದು ತರಲಾರೆ ಸುಮ್ಮನಿದ್ದುಬಿಡುತ್ತೇನೆ

ವಾದ ವಿವಾದವಾಗಿ ನ್ಯಾಯಕ್ಕೆಡೆಯಾಗಿ ಕಣ್ಣೀರು ಕೋಡಿ ಹರಿಯಬಹುದು
ಶಕ್ತಿ ಸಮಯವ ಹೀಗೆ ಅಪವ್ಯಯ ಮಾಡಲಾರೆ ಸುಮ್ಮನಿದ್ದುಬಿಡುತ್ತೇನೆ

ಅರಿಷಡ್ವರ್ಗಗಳ ಗೋಡೆಗಳ ದಾಟಿ ನಡೆಯಬೇಕಿದೆ ಕ್ಷಣಿಕ ಬದುಕಿನಲಿ ಅನು
ಜ್ಯೋತಿ ಬೆಳಗಿಸಿ ನಡೆವೆ ಬೆಂಕಿ ಹಚ್ಚಲಾರೆ ಸುಮ್ಮನಿದ್ದುಬಿಡುತ್ತೇನೆ


ನನ್ನನ್ನು ಹೊರಗಿಟ್ಟು ನೋಡುತಿರುವೆ ಏಕೋ
ಅಪನಂಬಿಕೆ ಉಯ್ಯಾಲೆ ತೂಗುತಿರುವೆ ಏಕೋ

ದೇಹಗಳು ಒಂದಾಗುವುದು ದೊಡ್ಡ
ಮಾತೇನಲ್ಲಬಿಡು
ಹೃದಯ ಬೆಸುಗೆಗೆ ಮೀನ ಮೇಷ ಎಣಿಸುತಿರುವೆ ಏಕೋ

ನಮ್ಮೀರ್ವರ ಪ್ರಣಯ ಪಯಣವಿದು ಮುಕ್ತಾಯ ಅನ್ನುವುದಿದೆಯೆ
ಮೊಗೆದಷ್ಟು ಪ್ರೀತಿ ಸೆಲೆಯ ಶಂಕಿಸುತಿರುವೆ ಏಕೋ

ಅದೇನು ರಹಸ್ಯವೋ ಎದೆಗೂಡಿನಲಿ ಬಚ್ಚಿಟ್ಟು ನೋವು ಉಣ್ಣುತಿರುವೆ
ನೋವು ನಲಿವು ಸಮಪಾಲೆಂದು ಮರೆತಿರುವೆ ಏಕೋ

ನಡೆದ ದಾರಿ ಸಿಂಹಾವಲೋಕನ ಆಗಲಿ ನಮ್ಮ ಬಾಳ ಯಾನದಲಿ
ಅನುಳ ಪ್ರೇಮ ತಿಳಿದೂ ತಿಳಿಯದಂತಿರುವೆ ಏಕೋ


ನಿನ್ನ ಮರೆಯಬೇಕೆಂದೆ ಆಗುತ್ತಿಲ್ಲವೇಕೆ
ರೆಪ್ಪೆ ಅಗಲಿಸಬೇಕೆಂದೆ ಆಗುತ್ತಿಲ್ಲವೇಕೆ

ನೋವಿನಲಿ ಒದ್ದಾಡುತಿದೆ ಈ ಹೃದಯ
ಮನವ ಒಡೆಯಬೇಕೆಂದೆ ಆಗುತ್ತಿಲ್ಲವೇಕೆ

ಸಲೀಸಾಗಿ ಕಡ್ಡಿತುಂಡಾಗಿಸಿ ಏನೂ ಇಲ್ಲವೆಂದೆ
ಅಂದದ್ದನ್ನು ಆಚರಿಸಬೇಕೆಂದೆ ಆಗುತ್ತಿಲ್ಲವೇಕೆ

ನನ್ನೊಲವ ಒರತೆ ತುಂಬಿ ತುಳುಕಾಡುತಿತ್ತು
ಪಸೆ ಬತ್ತಿಸಿ ಒಣಗಿಸಬೇಕೆಂದೆ ಆಗುತ್ತಿಲ್ಲವೇಕೆ

ಸುಂದರ ಮಧುರ ಪದಗಳ ಕವಿತೆ ಹೆಣೆದಿದ್ದೆ
ಪದಗಳ ಚದುರಿಸಬೇಕೆಂದೆ ಆಗುತ್ತಿಲ್ಲವೇಕೆ

ಅವನೊಳಗಿನ ನನ್ನ ಛಾಯೆಯನು ಅದೆಂತು ಬಿಡಿಸಿಕೊಳ್ಳುವುದು
ಉತ್ತರ ಕಂಡುಕೊಳ್ಳಬೇಕೆಂದೆ ಆಗುತ್ತಿಲ್ಲವೇಕೆ

ಪ್ರೀತಿಗೆ ಅಲ್ಲಿ ಜೋರು ಜುಲುಮಿ ಇರಲೇ ಇಲ್ಲ ಅನು
ನನ್ನಂತೆ ಉರಿವ ಶಮೆಯ ಆರಿಸಬೇಕೆಂದೆ ಆಗುತ್ತಿಲ್ಲವೇಕೆ

ಅನಸೂಯ ಜಹಗೀರದಾರ

Latest News

ಬಸವ ಸಮಿತಿಯಿಂದ ಶರಣ ಸಂದೇಶ ಜಗತ್ತಿಗೆ ಮುಟ್ಟಿದೆ – ಯಾಪಲಪರವಿ

ಜನಸಾಮಾನ್ಯರಿಂದ ಸ್ಥಾಪಿತವಾದ ಧರ್ಮ ಲಿಂಗಾಯತಕಲಬುರ್ಗಿ - ಕಲಬುರ್ಗಿ ಬಸವ ಸಮಿತಿ ಅನುಭವ ಮಂಟಪ , ಡಾ. ಬಿ ಡಿ ಜತ್ತಿ ವಚನ ಅಧ್ಯಯನ ಮತ್ತು ಸಂಶೋಧನ...

More Articles Like This

error: Content is protected !!
Join WhatsApp Group