ಕನ್ನಡ ಭಾಷೆಯಲ್ಲಿ ವ್ಯವಸಾಯ ಮಾಡಿ,ಯಾವ ಲೇಖಕರೂ ಅವಗುಣಕ್ಕೆ ಕಾರಣರಾದ ನಿದರ್ಶನಗಳಿಲ್ಲ ಎಂದು ನಮ್ಮ ಹಿರಿಯ ಸಾಹಿತಿಗಳು ಹೇಳಿದ್ದುಂಟು.ನಾಡಭಾಷೆಯಲ್ಲಿ ಅಧ್ಯಯನ ಮಾಡಿ,ಕನ್ನಡ ಸಾಹಿತಿಗಳ ಗುಂಪಿನಲ್ಲಿ ಕನ್ನಡ ಭಾಷೆಯ ಬೆಳವಣಿಗೆಗೆ ಕಾರಣರಾದ ಉತ್ತಮ ಸಾಹಿತಿಗಳು,ಕಥೆಗಾರರು,ವಿಮರ್ಶಕರು,ವಾಗ್ಮಿಗಳು,ಇಂದಿನ ಕಾಲಘಟ್ಟದಲ್ಲಿ ಬಹುವಾಗಿ ಬೆಳೆದು ಕನ್ನಡದ ಕೀರ್ತಿಗೆ ಕಾರಣರಾಗಿದ್ದಾರೆ.
ಹಳೆಯ ತಲೆಮಾರಿನ ನಮ್ಮ ಹಿರಿಯರ ಆದಿಭಾಗದಲ್ಲಿ ಕನ್ನಡಕ್ಕಿದ್ದ ಪರಿಸ್ಥಿತಿಯನ್ನು ಗಮನಿಸಿದರೆ,ಎಲೆಯ ಮರೆಯಲ್ಲೇ ಹೊರೆಯಂತಹ ಸಾಹಿತ್ಯ ರಚಿಸಿ,ತಮ್ಮ ಜೀವಮಾನದುದ್ದಕ್ಕೂ ಸಾಹಿತ್ಯದ ತಪಸ್ಸನ್ನು ಮಾಡಿದವರ ಸಾಹಿತ್ಯವನ್ನು ನಾವಿಂದು ಕಲಿಯುತ್ತಿದ್ದೇವೆ. ಅವತ್ತಿನ ದಿನಗಳಲ್ಲಿ ಅವರಾವ ಸ್ಥಾನಮಾನಕ್ಕಾಗಿ ಬರೆಯಲಿಲ್ಲ. ತಮ್ಮನ್ನು ತಾವು ಬಿಂಬಿಸಿಕೊಳ್ಳಲಿಲ್ಲ. ಪ್ರಮಾಣಿಕವಾಗಿ ಕಷ್ಟದ ಜೀವನದ ಜೊತೆಗೆ ಸರಳವಾಗಿ ಸಾಹಿತ್ಯ ಕೃಷಿಯ ವ್ಯವಸಾಯ ಮಾಡಿದರು. ಇವತ್ತಿನ ಕನ್ನಡ ಸಾಹಿತ್ಯ ಬರಹಗಾರರ ಸ್ಥಾನಮಾನ,ಪ್ರಾಮುಖ್ಯತೆಯ ಜೊತೆ ಜೊತೆಗೆ ಬೆಳೆದು, ಕರೋನಾದಂತಹ ಸಂದಿಗ್ಧವಾದ ಕರಾಳ ಕಾಲವನ್ನು ದಾಟಿಕೊಂಡೇ ಕನ್ನಡ ಸಾಹಿತ್ಯವು ಇಂದು ತಲೆಯೆತ್ತಿ ನಿಂತಿದೆ.ಸಾಮಾಜಿಕ ಜಾಲತಾಣದ ಶಕ್ತಿಯಾಗಿದೆ ಎಂದರೆ ತಪ್ಪಲ್ಲ.
ನಾನು ಇವತ್ತು ಬೇಲಿಯೊಳಗಿನ ಬಟ್ಟೆ ಕಥಾ ಸಂಕಲನದ ಕುರಿತು ನನಗನಿಸಿದ ಅಭಿಪ್ರಾಯವನ್ನು ನಾಲ್ಕು ಸಾಲುಗಳಲ್ಲಿ ತಮ್ಮೊಂದಿಗೆ ಹಂಚಿಕೊಳ್ಳುವೆನು. ಇದೊಂದು ಸಣ್ಣ ಅವಲೋಕನ. ಎಲ್ಲವನ್ನೂ ವಿವರಿಸಲಾಗದಿದ್ದರೂ ತುಸುವೆ ಹೇಳಲು ಬಯಸುವೆ.
ಈ ಕಥಾ ಸಂಕಲನದ ಲೇಖಕಿ ಶ್ರೀದೇವಿ ಕೃಷ್ಣಪ್ಪನವರು. ವಿಚಾರಪೂರ್ಣ ಬದುಕಿನ ಆಗು ಹೋಗುಗಳನ್ನೇ ತಮ್ಮ ವಿವೇಕತನದಿಂದ ಅಮುಲ್ಯವಾದ ಕಥೆಗಳಿಗೆ ರೂಪ ನೀಡಿದ್ದಾರೆ. ನಮ್ಮ ಗಂಗಾವತಿ ಭಾಗದ ಹಿರಿಯ ಕಥೆಗಾರರಾದ ಲಿಂಗಾರೆಡ್ಡಿ ಆಲೂರ ರವರ ಮುನ್ನುಡಿಯು,ಆಳವಾದ ಲೋಕಾನುಭವ ನೀಡಿದೆ.
ಶ್ರೀದೇವಿ ಕೃಷ್ಣಪ್ಪನವರು ಕಥೆಯನ್ನು ಚಿತ್ರಿಸುವ ಮೂಲಕ, ಗಂಗಾವತಿ ಭಾಗದಲ್ಲಿ ಪ್ರಥಮ ಕಥೆಗಾರ್ತಿಯವರಾಗಿದ್ದಾರೆ. ಬೇಲಿಯೊಳಗಿನ ಬಟ್ಟೆ ಕಥಾಸಂಕಲನ ಸೇರಿ, ನಾಲ್ಕು ಗುರುತರ ಪುಸ್ತಕಗಳನ್ನು ಕನ್ನಡ ಸಾಹಿತ್ಯ ಲೋಕಕ್ಕೆ ಸಮರ್ಪಿಸಿದ್ದಾರೆ.
ಗಂಗಾವತಿ ನಿವಾಸಿಯಾದ ಇವರು, ಶಿಕ್ಷಕಿಯಾಗಿ, ಕವಯಿತ್ರಿಯಾಗಿ, ಹಲವಾರು ಸಾಹಿತ್ಯ ಚಟುವಟಿಕೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ. ಈ ನೆಲದ ಸಂಸ್ಕೃತಿಯನ್ನರಿತು ಕನ್ನಡದ ಹೊಸ ಆವಿಷ್ಕಾರದಲ್ಲಿ ನಿರಂತರ ಯಾರ ಪ್ರಶ್ನೆ-ಉತ್ತರಕ್ಕಾಗಿ ಕಾಯದೆ ಬರವಣಿಗೆಯಲ್ಲಿ ತಮ್ಮ ಕೈ ಪಳಗಿಸಿದ್ದಾರೆ.
ಶ್ರೀದೇವಿ ಕೃಷ್ಣಪ್ಪನವರ ಕಥೆ ಕಟ್ಟುವಿಕೆಯ ಶೈಲಿ ತಿಳಿಯಾಗಿದೆ. ಸರಳವಾಗಿದೆ.ಸುಲಿದ ಬಾಳೆ ಹಣ್ಣಿನಂತೆ ನೈಜ ಘಟನೆಗಳ ಸಂಸಾರಿಕ ಕಥೆಗಳನ್ನು ಓದುಗರಿಗೆ ನೀಡಿದ್ದಾರೆ.ಬೇಲಿಯೊಳಗಿನ ಬಟ್ಟೆ ಸಂಕಲನ ಓದಿದಾಗ, ಕಥೆಯೊಳಗಿನ ನೇರ, ಸಾರ, ಶುದ್ಧ ನೀತಿಯ ಸವಿ ಕಾಣುತ್ತದೆ.ಕಥೆ ಬರೆಯುವಾಗ,ವಸ್ತುವನ್ನು ಸರಳವಾಗಿ ಆರಿಸಿಕೊಂಡಿದ್ದಾರೆ. ನಮ್ಮ ನೈಜ ಜೀವನಕ್ಕೂ ಇಲ್ಲಿರುವ ಕಥೆಗಳಿಗೂ ಹತ್ತಿರದ ನಂಟು ಬೆಸೆದುಕೊಂಡಿದೆ ಎಂದೆನಿಸಿಬಿಡುತ್ತದೆ. ಕಂಡು ಕೇಳಿದ ಸಂಗತಿಗಳ ಎಳೆಯನ್ನಿಡಿದು, ಸಹಜ ಪರಸ್ಥಿತಿಗಳನ್ನು ಯಾವುದೇ ಒತ್ತಡಗಳಿಲ್ಲದೇ ಲೀಲಾಜಾಲವಾಗಿ ನೇಯುತ್ತಾ ಸಾಗಿದ್ದಾರೆ.
ಕರುಣಾಮಯಿ ಕಥೆ ಯ ಪ್ರಾರಂಭದಿಂದಿಡಿದು ಸಾವೇ ನೀ ಬೇಗ ಬಾ ಅಂತಿಮದವರೆಗೆ ಅಸಹಾಯಕ ಸಂವೇದನೆಗಳು, ಮಹಿಳಾ ಸಮಸ್ಯೆಗಳು,ಕುಟುಂಬದ ಸೋಲು ಗೆಲುವುಗಳು, ಪ್ರಾಣಿ ದಯೆಗಳು, ಸಫಲತೆಯ ಚಿಂತನೆಗಳು, ತಲ್ಲಣಗಳು ಮನದ ಮೂಲೆಯಲ್ಲಿ ಸ್ಥಾನ ಗಿಟ್ಟಿಸಿಬಿಡುತ್ತವೆ.
ತಮ್ಮ ಭೂಮಿಯಲ್ಲಿ ದುಡಿಯುವ ದೀನರು,ಕೃಷಿಕಾರ್ಮಿಕರಿಗಾಗಿ ರೈತ ದಂಪತಿಗಳ ಸಿಂಪತಿ ತೋರುವ ನಯವಾದ ಸಾಲುಗಳು ಕರುಣಾಮಯಿ ಕಥೆಯಲ್ಲಿ ಓದುಗರಿಗೆ ಪುಷ್ಟಿ ನೀಡುತ್ತದೆ.ಈ ಕಥೆಯ ಮೂಲ ವಸ್ತುವೇ ಬರಗಾಲ.ಮಳೆ ಬಾರದ ದುಸ್ಥಿತಿಯಲ್ಲಿ ತೀರಾ ಹಸಿವು ಕಾಡಿದಾಗ,ರೈತ ದಂಪತಿಗಳ ಕರುಣಾ ಮನವು ಕಣ್ಣಿಂದ ನೋಡಲಾಗದೆ,ಕೃಷಿಕೂಲಿಕಾರರಿಗೆ ದವಸ ಧಾನ್ಯ ನೀಡಿ,ಮನೆಯೆಲ್ಲಾ ಬರಿದಾದರೂ,ಮಳೆರಾಯನ ಆಗಮನಕೆ ಪ್ರಾರ್ಥನೆ ಸಲ್ಲಿಸುವ ರೈತ ದಂಪತಿಗಳ ದೈನ್ಯತೆಯ ಭಾವ ವಿಸ್ತೃತವಾಗುತ್ತದೆ.
ನಮಸ್ತೇ ಟೀಚರ್ ಎಂಬ ಕಥೆಯು ಸಂಸ್ಕಾರ ಕಲಿಕೆಯಾಗಿದೆ.ಬೇಟೆಗಾರ ಸಾಕಿದ ಗಿಳಿಗೂ,ಮುನಿ ಸಾಕಿದ ಗಿಳಿಗೂ ಭಾಷೆ,ಸಂಸ್ಕೃತಿ ಹೇಗೆ ವ್ಯತ್ಯಾಸವೋ ಹಾಗೆ ಉದಾರಿಸಬಹುದು.ಸಾಧನೆ ಮತ್ತು ಕಲಿಕೆಗಳು ಶಾಲೆಯಲ್ಲಿ ನಿರ್ಧಾರವಾಗುತ್ತದೆ.ಕೆಟ್ಟ ಚಟ ಮಾಡಿದವರು ಕತ್ತಲೆಡೆಗೆ ಸಾಗುತ್ತಾರೆ.ಒಳ್ಳೆಯ ವಿದ್ಯೆ,ಸಂಸ್ಕಾರ ಕಲಿತವ ಸಿದ್ಧಿಯೆಡೆಗೆ ನಡೆದು,ಬೆಳಕು ಕಾಣುತ್ತಾನೆಂಬ ಉದ್ಧೇಶವಾಗಿದೆ.ಈ ಕಥೆಯು ಸಾರ್ಥಕತೆ ಬಿಂಬಿಸಿ ಹೇಳುತ್ತದೆ.
ನಮ್ಮ ನಿತ್ಯ ಜೀವನದಲ್ಲಿ ಮನೆಯೊಡತಿಯ ಒಂದೊಂದು ಪ್ರಶ್ನೆಗೆ ನಾವು ನಿಜವಾದ ಉತ್ತರ ನೀಡುವುದೇ ಇಲ್ಲ.ಸಮಂಜಸ ಮರುತ್ತರ ನೀಡದೇ ಧಾವಂತದ ಬದುಕಿಗಂಟಿಕೊಂಡುಬಿಡುವ ದಾಸ್ಯತನ ನಮ್ಮದು.ಪ್ರತಿಯೊಬ್ಬ ಮನೆಯ ವಾರಸುದಾರನು ಪತ್ನಿಯ ಪ್ರೀತಿಗೆ,ಕಾಳಜಿಗೆ,ಕುಳಿತು ಬೆರೆತು ಸಾಂತ್ವನದ ನುಡಿಯಾಡದಿರುವುದು ವಿಷಾದಕರ.
ಕೈಯಲ್ಲಿ ಹಾವು,ಗಂಟಲೊಳಗೆ ವಿಷ ಎಂಬಂತೆ ಹೊಸ್ತಿಲು ದಾಟಿಬಿಡುತ್ತೇವೆ. ಇದೇ ವಸ್ತುವನ್ನು ವಿಸ್ತರಿಸಿ,ಮುಂದೊಂದು ದಿನ ಎಂಬ ಕಥೆ ಹೆಣೆದಿರುವರು.ಹೆಂಡತಿಯ ನೋವು ಇರುಕಿನಲ್ಲಿ ಸಿಕ್ಕಿರುವುದು ಆಕೆ ಸತ್ತಾಗ ಗೊತ್ತಾಗುವುದು ಮುದಿತನದ ಕಲ್ಪನೆ ಸುರಳಿ ಬಿಚ್ಚಿಕೊಳ್ಳುತ್ತದೆ.ಜೀವನದಲ್ಲಿ ಕಷ್ಟಕಾರ್ಪಣ್ಯಗಳಿದ್ದರೂ ನಗು ನಗುತಾ ಹೆಂಡತಿಯನ್ನು ಅರ್ಥೈಸಿಕೊಂಡು ಬಾಳಬೇಕು ಎನ್ನುವ ಕಥೆ ಮಾರ್ಮಿಕವಾಗಿದೆ.
ಇನ್ನು ಹಿಂದಿನ ಕಾಲದ ಬದುಕು ಬವಣೆ ಹಂಚಿಕೊಳ್ಳುವ ಸ್ಥಳವೆಂದರೆ ಬಾವಿಕಟ್ಟೆ. ಊರಿನ ಹೆಣ್ಣುಮಕ್ಕಳಿಗೆ ಅದೊಂದು ವಿಶ್ರಾಂತಿ ತಾಣವೇ ಸರಿ.ಹೆಂಗಸರ ಮನೆ ಮನೆ ಕತೆ ಅನಾವರಣಗೊಳ್ಳುವ ಪಾಂಜಾ ಅಂದ್ರೆ ಊರ ಮುಂದಿನ ಬಾವಿ.ಹೃದಯ ಹಗುರವಾಗಿಸಿಕೊಳ್ಳುವ,ಕಷ್ಟ ಸುಖಗಳ ವಿಲೇವಾರಿಯಾಗುವ ಜಾಗ. ಬಾವಿಕಟ್ಟೆ ಕಥೆಯು ಒಳಿತಿಗೆ ಮತ್ತು ಕೆಡುಕಿಗೆ ಮೂಲ ವಿವರಣೆ ನೀಡುವುದಾಗಿದೆ.
ಪ್ರೀತಿ ಹೇಗೆ ಹುಟ್ಟುತ್ತದೆ?ಅಂತಿಮ ಹೇಗೆ ಕಾಣುತ್ತದೆ?ಎಂದು ಹೇಳಲಾಗದು.ಹದಿ ಹರೆಯದ ರಭಸದ ಹೊಳೆಯಲ್ಲಿ ಈಜಿ ದಡ ಸೇರಿದರೆ ಅದಕ್ಕಿಂತ ಭಾಗ್ಯವೇನಿಲ್ಲ.ಹುಚ್ಚುತನದಿ ಕೊಚ್ಚಿ ಸೆಳಿವಿಗೋದರೆ ಜೀವನ ಮುಕ್ತಾಯದಂತೆ.ಪ್ರೀತಿ,ಪ್ರೇಮ ಎಂದು ಪರಿಚಿತವಾದ ಹೊಸತನದಲ್ಲಿ ಕುಂತಲ್ಲಿ ಕೂಡಿಸದು ವಯಸ್ಸು.ಪ್ರೀತಿ ಗೆಲ್ಲುತ್ತದೆ ಎಂದರೆ,ನಾಲಿಗೆ ಮೇಲಿರುವ ಕಲ್ಲು ಸಕ್ಕರೆ ಸವಿದಂತೆ,ಪ್ರೀತಿ ಜಟಿಲವಾದರೆ ಅದೇ ಕಲ್ಲುಸಕ್ಕರೆ ಕಲ್ಲಾಗಿ ದವಡೆಗೆ ಮೂಲವಾದಂತೆ.ಬೇಲಿಯೊಳಗಿನ ಬಟ್ಟೆ ಕಥೆಯಲ್ಲಿ ಪ್ರೀತಿಸಿದವಳ ಗೋಳನು ವಿವರಿಸಲಾರೆ.
ಓದುಗರೇ ತಿಳಿಯಬೇಕು.ಯಾಕೆಂದರೆ,ಈಗಿನ ಹುಡುಗ-ಹುಡುಗಿಯರಿಗೆ ತಾಳ್ಮೆಯೆಂಬುದೇ ಇಲ್ಲ.ಈ ಪ್ರಪಂಚದಲ್ಲಿ ಪ್ರೀತಿ ಅನರ್ಥವಾದರೆ,ನಿರ್ಧಿಷ್ಟವಾದ ಕಡೆ ಬಿದ್ದಿರುವ ವಸ್ತುಗಳ ಹಾಗೆ ನಿಶ್ಚೇತನವಾಗಿರಬೇಕಾಗುತ್ತದೆ.ಬೆಳಗ ದೀಪಕ್ಕೂ,ನಂದಿದ ದೀಪಕ್ಕಿರುವ ವ್ಯತ್ಯಾಸ,ಬೆಳಗಿನ ಬಿಸಿಲಿಗೂ,ಮಧ್ಯಾಹ್ನದ ಬಿಸಿಲಿಗಿರುವ ವ್ಯತ್ಯಾಸ,ಹುಣ್ಣಿವೆ ಚಂದ್ರನಿಗೂ,ಮೋಡ ಕವಿದ ಚಂದ್ರನಿಗಿರುವ ವ್ಯತ್ಯಾಸದ ಹಾಗೆ ಕಥೆ ಓದಿದಾಗ ಮಮ್ಮಲ ಮರುಗುವಂತ ಭಾವನೆಯಾಗಿ ಕೆಲವು ಕಥೆಗಳು ಮನದಲ್ಲಿ ಉಳಿದು ಬಿಡುತ್ತವೆ.
ಈ ಕಥಾ ಸಂಕಲನದಲ್ಲಿ ಒಟ್ಟು 21 ಕಥೆಗಳಿವೆ. ಪ್ರೇರಣೆ, ಪೋಲಿಯೋ., ಸಂಸ್ಕಾರ.,ಮತ್ತೇ ಅವನದೇ ಫೋನು?, ಬೇಡಿಕೆ., ಮುಂದೊಂದು ದಿನ., ಬೇಲಿಯೊಳಗಿನ ಬಟ್ಟೆ.,ನಾಯಿ ಮುಟ್ಟದ ಮಡಿಕೆ.,ಇನ್ನೂ ಹಲವಾರು ಕಥೆಗಳು ಒಂದರಿಂದ ಮತ್ತೊಂದರಂತೆ ಉಪಕೃತಗೊಂಡು,ಆಕರ್ಷಕವಾದ ಅನುಭವ ನೀಡುತ್ತವೆ.
ಲೇಖಕಿ ಶ್ರೀದೇವಿ ಕೃಷ್ಣಪ್ಪನವರು,ಬದುಕಿನ ವಿವಿಧ ಮುಖಗಳನು ಕಥೆಯಲ್ಲಿ ಅನಾವರಣಗೊಳಿಸಿದ್ದಾರೆ.ಒಟ್ಟಿನಲ್ಲಿ ತಮ್ಮ ಮನಸ್ಸಿಗೆ ಸಿಕ್ಕ ಆಲೋಚನೆಗಳನ್ನು, ಭಾವಾನುಭವನ್ನು,ಹೃದಯಕ್ಕೆ ತಾಗುವಂತೆ ಕಲ್ಪಿಸಿ ಕಥೆ ಹೆಣೆದಿದ್ದಾರೆ.ಇದಕ್ಕಿಂತ ಆಳವಾದ ಕಥೆ ನೀಡಬೇಕೆನ್ನುವ ಮಹದಾಸೆ ಗುರಿ ಇವರಿಗಿದೆ.ಎಲ್ಲವನ್ನೂ ಓದಿ ಅರಗಿಸಿಕೊಳ್ಳುವ,ಹೊಸ ಹೊಸ ವಸ್ತುವಿಗೆ ರೂಪಗಳನ್ನು ನೀಡುವ,ನವಿರಾದ ಸಾಹಿತ್ಯ ಸೃಷ್ಟಿಸುವ ಶಕ್ತಿ ಸಹೋದರಿ ಶ್ರೀದೇವಿ ಕೃಷ್ಣಪ್ಪನವರಿಗಿದೆ.ಬೇಲಿಯೊಳಗಿನ ಬಟ್ಟೆ ಕಥಾ ಸಂಕಲನ ತಮಗೆ ಲಭಿಸಿದರೆ,ಓದುತ್ತೀರೆಂಬ ವಿಶ್ವಾಸ ನನಗಿದೆ.
ಅಭಿನಂದನೆಗಳೊಂದಿಗೆ
ಶರಶ್ಚಂದ್ರ ತಳ್ಳಿ,ಕುಪ್ಪಿಗುಡ್ಡ
ಅಣ್ಣ, ತಮ್ಮ ಅಭಿಮಾನಕ್ಕೆ, ಪ್ರೀತಿ ಪೂರ್ವಕ ಕಾಳಜಿಗೆ ಧನ್ಯವಾದಗಳು. ತಾವು ಮನಸಾರೆ ಮೆಚ್ಚಿ ನನ್ನ ಕಥಾ ಸಂಕಲನವಾದ ಬೇಲಿಯೊಳಗಿನ ಬಟ್ಟೆ ಕೃತಿಯನ್ನು ವಿಮರ್ಶಿಸಿದ ರೀತಿಗೆ ನಾನು ತಲೆಬಾಗುವೆ.
ನೀವೇ ಹೇಳಿದಂತೆ ನನ್ನ ಮನಸ್ಸಿಗೆ ಸಿಕ್ಕ ಆಲೋಚನೆಗಳನ್ನು, ಭಾವಾನುಭವನ್ನು, ಕತೆಯಾಗಿಸಿದ್ದೇನೆ. ಇಲ್ಲಿ ನಾನು ಕಂಡ, ಅನುಭವಿಸಿದ ಹಲವು ಕತೆಗಳಿವೆ. ಅವುಗಳನ್ನು ನೀವು ಮೆಚ್ಚಿ ವಿಮರ್ಶಿಸಿ ಇನ್ನೂ ಹಲವರಿಗೆ ಓದಲು ಪ್ರೇರೇಪಿಸಿದ್ದೀರಿ. ತಮಗೆ ಮತ್ತೊಮ್ಮೆ ಧನ್ಯವಾದಗಳು. ಈ ಸಂದರ್ಭದಲ್ಲಿ ನನ್ನ ಕೃತಿಗೆ ಮುನ್ನುಡಿ ಬರೆದು ಬೆಂಬಲಿಸಿ ಹರಸಿದ ಶ್ರೀ ಲಿಂಗಾರೆಡ್ಡಿ ಆಲೂರು ಸರ್ ರವರಿಗೆ ಹೃತ್ಪೂರ್ವಕ ಧನ್ಯವಾದಗಳು.
ತಳ್ಳಿ ಅಣ್ಣನವರ ವಿಮರ್ಶೆಗೆ ಸ್ಪಂದಿಸಿ ಅಭಿಪ್ರಾಯ ವ್ಯಕ್ತಪಡಿಸಿದ ಎಲ್ಲಾ ಹಿರಿಯರಿಗೂ, ಕಥಾ ಪ್ರೇಮಿಗಳಿಗೂ ವಿಶೇಷ ಧನ್ಯವಾದಗಳು.
ಪುಸ್ತಕ ಓದಲು ಬಯಸಿದವರಿಗೆ ಖಂಡಿತವಾಗಿ ನಾನು ಪುಸ್ತಕ ತಲುಪಿಸುತ್ತೇನೆ.
ಈ ಪುಸ್ತಕ ಬಿಡುಗಡೆಗೆ ಸಹಕರಿಸಿದ ಕ ಸಾ ಪ ಗಂಗಾವತಿ ಘಟಕದ ಶ್ರೀ ಎಸ್ ಬಿ ಗೊಂಡಬಾಳ, ಶ್ರೀ ಶ್ರೀನಿವಾಸ ಅಂಗಡಿ, ಹಾಗೂ ಎಲ್ಲಾ ಕ ಸಾ ಪ ಪದಾಧಿಕಾರಿಗಳಿಗೆ ಧನ್ಯವಾದಗಳು.
ವಿಶೇಷವಾಗಿ ಅಂತರಾಷ್ಟ್ರೀಯ ಖ್ಯಾತಿಯ ಶ್ರೀ ಬಿ ಪ್ರಾಣೇಶ ಸರ್ ಅನಿರೀಕ್ಷಿತವಾಗಿ ಪುಸ್ತಕ ಬಿಡುಗಡೆ ಕಾರ್ಯಕ್ರಮಕ್ಕೆ ಆಗಮಿಸಿ ಪುಸ್ತಕ ಬಿಡುಗಡೆಗೊಳಿಸಿದ್ದು ಒಂದು ಅವಿಸ್ಮರಣೀಯ ದಿನ ಎಂದು ನಾನು ಭಾವಿಸುತ್ತೇನೆ. ಅವರಿಗೂ ಹೃತ್ಪೂರ್ವಕ ಧನ್ಯವಾದಗಳು.
ಮತ್ತೊಮ್ಮೆ ಮಗದೊಮ್ಮೆ ನನ್ನ ಬೇಲಿಯೊಳಗಿನ ಬಟ್ಟೆ ಕೃತಿಯನ್ನು ಓದಿ, ವಿಮರ್ಶಿಸಿ ಸವಿ ನೆನಪುಗಳ ಸುರುಳಿ ಬಿಚ್ಚುವಂತೆ ಮಾಡಿದ ಶ್ರೀ ಶರಣಪ್ಪ ತಳ್ಳಿ ಅಣ್ಣನವರಿಗೆ ಮನಃಪೂರ್ವಕವಾಗಿ ಧನ್ಯವಾದಗಳು ಸಲ್ಲುತ್ತವೆ.
ಜಿ ಶ್ರೀದೇವಿಕೃಷ್ಣಪ್ಪ
ಹಿರೇಜಂತಕಲ್ ಗಂಗಾವತಿ