“ಅಡಿಕೇಶ್ವರ ಮಡಿಕೇಶ್ವರ, ಶ್ರೀ ಚನ್ನ ಬಸವೇಶ್ವರ ಮಹಾರಾಜಕಿ ಜೈ”
“ಶ್ರೀ ಉಳವಿ ಚನ್ನಬಸವೇಶ್ವರ ಬಹುಪರಾಕ
ಹರಹರ ಮಹಾದೇವ “
ಎಂಬ ಮುಗಿಲು ಮುಟ್ಟುವ ಜಯಘೋಷದೊಂದಿಗೆ ಶ್ರೀ ಚನ್ನಬಸವೇಶ್ವರ ರಥೋತ್ಸವವು ಭಾರತ ಹುಣ್ಣಿಮೆಯಂದು ಉಳವಿಯಲ್ಲಿ ಜರುಗುವುದು.ಹನ್ನೆರಡನೆಯ ಶತಮಾನದ ಸಾಮಾಜಿಕ ಕ್ರಾಂತಿಯ ಹರಿಕಾರ ಶ್ರೀ ಚನ್ನಬಸವೇಶ್ವರರು ಐಕ್ಯವಾದ ಸ್ಥಳ ಉಳವಿ.ಭಾರತ ಹುಣ್ಣಿಮೆಯ ಮಘಾ ನಕ್ಷತ್ರದ ಗಳಿಗೆಯಲ್ಲಿ ಮಹಾರಥೋತ್ಸವ ಜರುಗುತ್ತದೆ.ಶರಣರು ಬಂದು ಉಳಿದುಕೊಂಡಿದ್ದ ಕ್ಷೇತ್ರ ‘ಉಳವಿ.
ಜೋಯಿಡಾ ತಾಲೂಕಿನ ಉಳವಿ ಕ್ಷೇತ್ರಕ್ಕೆ ಹೋಗಲು ದಾಂಡೇಲಿಯನ್ನು ತಲುಪಿ ಅಲ್ಲಿಂದ ಕಾಳಿ ನದಿಯನ್ನು ದಾಟಿ ಹೋಗಬೇಕು. ದಾಂಡೇಲಿಯಿಂದ ಸುಮಾರು 11 ಕಿ.ಮೀ ಸಾಗಿದರೆ ಪೋಟೋಲಿ ಕ್ರಾಸ್ ಸಿಗುತ್ತದೆ.ಅಲ್ಲಿಂದ ಮುಂದೆ ಎರಡು ಮಾರ್ಗಗಳ ಮೂಲಕ ಉಳವಿಗೆ ಹೋಗಬಹುದು.ಒಂದು ಗೂಂಡ್ಯ,ಸಿಂಥೇರಿ ರಾಕ್‍ನ ಒಳಮಾರ್ಗ ಇನ್ನೊಂದು ಕುಂಬರವಾಡ ಮತ್ತು ಜೋಯಿಡ ಮಾರ್ಗ ಎರಡೂ ಮಾರ್ಗಗಳಲ್ಲಿ ವಾಹನ ಸಂಚಾರಕ್ಕೆ ಸುಲಭ ಮಾರ್ಗವಿದೆ.
ಇದು ವನಸಿರಿಗಳ ನಾಡು.ದಾಂಡೇಲಿಯಿಂದ 53 ಕಿ.ಮೀ. ಧಾರವಾಡದಿಂದ 120 ಕಿ.ಮೀ. ಕಾರವಾರದಿಂದ 70 ಕಿ.ಮೀ. ಗೋವಾದಿಂದ 160 ಕಿ.ಮೀ.ಬೆಳಗಾವಿಯಿಂದ 145 ಕಿ.ಮೀ ಅಂತರದಲ್ಲಿದೆ. ಕೇವಲ ದಾರ್ಮಿಕ ದೃಷ್ಟಿಯಿಂದಷ್ಟೇ ಅಲ್ಲ ಅದ್ಬುತ ಪ್ರಕೃತಿ ಸೌಂದರ್ಯದಿಂದ ಪ್ರಮುಖ ಆಕರ್ಷಣೆಯ ತಾಣ ಉಳವಿ.ಪಶ್ಚಿಮ ಘಟ್ಟಗಳ ಸುಂದರ ವನ್ಯ ಸಂಪತ್ತಿನಲ್ಲಿ ನೆಲೆಸಿರುವ ಈ ತಾಣವು ಆಕರ್ಷಕ ಗುಹೆಗಳು ಹಾಗೂ ನೀರ್ಗೋಲಗಳಿಂದ ಕಂಗೊಳಿಸುತ್ತದೆ.
ಈ ಜಾತ್ರೆಯು ಉತ್ತರಕರ್ನಾಟಕದ ವಿವಿಧೆಡೆಯಿಂದ ಆಗಮಿಸಿದ ಪಲ್ಲಕ್ಕಿ ಉತ್ಸವಗಳು,ವೀರಭದ್ರ ವೀರಗಾಸೆ,ದೇವಸ್ಥಾನದಲ್ಲಿ ವಿಶೇಷ ಪೂಜೆ,ಅಭಿಷೇಕ.,ಆರತಿ ಭಕ್ತರಿಂದ ದೀಡ ನಮಸ್ಕಾರ,ಉರುಳು ಸೇವೆ ಮೊದಲಾದ ಚಟುವಟಿಕೆಗಳ ಮೂಲಕ ಇಡೀ ದಿನವೂ ವಿಶಿಷ್ಟತೆಯಿಂದ ನೆರವೇರುತ್ತದೆ. ಸಾವಿರಾರು ಭಕ್ತರು ಅನ್ನದಾಸೋಹ ಕೂಡ ನೆರವೇರಿಸುವರು.ಎಲ್ಲ ಜಾತ್ರೆಗಳಲ್ಲಿ ನಾವು ಬಿಳಿಯ ವಿಭೂತಿಯನ್ನು ಕಾಣುತ್ತೇವೆ.ಆದರೆ ಉಳವಿಯಲ್ಲಿ ಬಿಳಿಯ ವಿಭೂತಿಯ ಜೊತೆಗೆ ಚಿಲುಮೆ ವಿಭೂತಿಯಂದೇ ಪ್ರಸಿದ್ದವಾಗಿರುವ ಕಪ್ಪು ವಿಭೂತಿಗಳು ಭಕ್ತಾದಿಗಳ ಆಕರ್ಷಣೆಯಾಗಿದೆ.
ಅಂದ ಹಾಗೆ ಬಸವಣ್ಣನವರ ಅಕ್ಕ ನಾಗಲಾಂಬಿಕೆಯ ಮಗ ಚನ್ನ ಬಸವಣ್ಣ ತಮ್ಮ ಹನ್ನರಡನೇ ವರ್ಷದಲ್ಲಿಯೇ ಅನುಭವ ಮಂಟಪದ ಚರ್ಚಾವೇದಿಕೆಯಲ್ಲಿ ಸಕ್ರಿಯವಾಗಿ ಭಾಗವಹಿಸುವ ಮೂಲಕ ಅಲ್ಪ ಕಾಲದಲ್ಲಿಯೇ ಷಟಸ್ಥಲ ಸಂಪ್ರದಾಯಕ್ಕೆ ನೆಲೆ ಕಲ್ಪಿಸಿದವರು.ಕಿರಿಯ ವಯಸ್ಸಿನಲ್ಲಿ ಅಪಾರ ವಿದ್ವತ್ ಅನುಭವದ ಮೂಲಕ ಅಧ್ಯಾತ್ಮಿಕ, ತರ್ಕ, ಉನ್ನತ ವಿಚಾರಧಾರೆಯಿಂದ ಪ್ರಬುದ್ಧ ವಚನಗಳನ್ನು ರಚಿಸಿ, ಸಮಾಜದಲ್ಲಿನ ಅಜ್ಞಾನ,ಅಸಮಾನತೆ,ಸಾಮಾಜಿಕ ಅನಿಷ್ಟಗಳನ್ನು ತೊಲಗಿಸಲು ಶ್ರಮಿಸಿದವರು.
ಕಲ್ಯಾಣ ಕ್ರಾಂತಿಯ ನಂತರ ಶರಣರು ಗುಂಪುಗಳಾಗಿ ವಿವಿಧೆಡೆಗೆ ಚದುರಿ ಹೋದರು.ತಾಯಿ ನಾಗಲಾಂಬಿಕೆಯವರೊಂದಿಗೆ ಚನ್ನಬಸವಣ್ಣನ ನೇತೃತ್ವದಲ್ಲಿ ಶರಣರ ತಂಡವೊಂದು ಉಳವಿಗೆ ಬಂದು ನೆಲೆಸಿತು.ಇವರು ಸಂಚರಿಸಿದ ಮಾರ್ಗವೆಂದರೆ ಸೊನ್ನಲಗಿ, ಹಲಸಂಗಿ, ನಿಂಬಾಳ, ವಿಜಯಪುರ, ಬಬಲೇಶ್ವರ, ಗುಂಡಾಳ, ಮಂಟೂರ, ಮುಧೋಳ, ಯಾದವಾಡ, ಸತ್ತೀಗೇರಿ, ಯರಗಟ್ಟಿ, ಕಡಕೋಳ, ತೊರಗಲ್, ಚುಂಚನೂರು, ಜಾಲಿಕಟ್ಟಿ, ಲ್ಲೂರು, ಮುರಗೋಡ, ಕಾರೀಮನಿ, ಹೊಸೂರ, ಬೈಲಹೊಂಗಲ, ಸಂಪಗಾವ, ನಂದಿಹಳ್ಳಿ,ತಿಗಡಿ, ನಾಗಲಾಪುರ, ಮುಗುಟಖಾನ ಹುಬ್ಬಳ್ಳಿ,
ಕಾದರವಳ್ಳಿ, ಹುಣಸೀಕಟ್ಟಿ, ಕಿತ್ತೂರು, ಧಾರವಾಡ. ಉಣಕಲ್,ಹುಬ್ಬಳ್ಳಿ,ಕಲಘಟಗಿ, ಸಾಂಬ್ರಾಣಿ,ಕೂಡಲಗಿ,ಕುಂಬಾರವಾಡಗಿ ಮೂಲಕ ಉಳವಿ ಸೇರಿದರು..ಇಂದಿಗೂ ಈ ಸ್ಥಳಗಳಲ್ಲಿ ಅವರ ಕುರಿತು ಐತಿಹ್ಯಗಳಿವೆ.ಷಟಸ್ಥಳ ಜ್ಞಾನಿ,ಷಟಸ್ಥಳ ಚಕ್ರವರ್ತಿ ಎಂಬ ಹೆಸರಿನಿಂದ ಪ್ರಖ್ಯಾತರಾಗಿದ್ದ ಚನ್ನಬಸವಣ್ಣನವರು 1.ಮಾನವರೆಲ್ಲರೂ ಒಂದೇ,2.ಕಾಯಕವೇ ಕೈಲಾಸ. 3.ಕಾಯಕದಿಂದ ಕುಲ ಜಾತಿ 4.ಜಾತಿ ಮತಗಳೆಲ್ಲವೂ ಒಂದೇ ಎಂದು ಬೋಧಿಸಿದರು.ಸುಮಾರು 1800 ವಚನಗಳನ್ನು ಬರೆದಿರುವ ಇವರನ್ನು ಉಳವಿಗೆ ಬಂದಾಗ ಈ ಭಾಗದಲ್ಲಿ ಆಳ್ವಿಕೆ ನಡೆಸುತ್ತಿದ್ದ ಕದಂಬ ಅರಸರು ತಮ್ಮ ರಾಜ್ಯದಲ್ಲಿ ಇವರಲ್ಲಿದ್ದ ಜ್ಞಾನವನ್ನು ಉಪದೇಶಿಸಲು ಹಾಗೂ ಪ್ರತಿಭೆ ಬೆಳೆಸಲು ಆಶ್ರಯ ನೀಡಿ ಪ್ರೋತ್ಸಾಹಿಸಿದರು.
ಉಳವಿಯ ಹತ್ತಿರದಲ್ಲಿಯೇ ವಚನಕಾರ ಹರಳಯ್ಯನ ಚಿಲುಮೆ,ಅಕ್ಕನಾಗಮ್ಮನವರ ಗವಿ.ವಿಭೂತಿ ಕಣಜ.ಆಕಳ ಗವಿ.ರುದ್ರಾಕ್ಷಿ ಮಂಟಪ.ಪಂಚಲಿಂಗೇಶ್ವರ ಗವಿ.ಕಿನ್ನರಿ ಬೊಮ್ಮಯ್ಯನ ನದಿ.ಚನ್ನಬಸವ ಜಲಪಾತ ಇತ್ಯಾದಿ ಸ್ಥಳಗಳು ಶರಣರು ನೆಲೆಸಿದ ನಾಡಿದು ಎಂಬುದಕ್ಕೆ ಸಾಕ್ಷಿಯಾಗಿ ಕೇವಲ ಹನ್ನೆರಡು ಕಿ.ಮೀ ಅಂತರದಲ್ಲಿ ಈ ಎಲ್ಲ ಸ್ಥಳಗಳಿವೆ.ಅವರು ತಮ್ಮ 24 ನೆಯ ವಯಸ್ಸಿನಲ್ಲಿ ಇಲ್ಲಿಯೇ ಜೀವಂತ ಸಮಾಧಿಯಾದರೆಂದು ಹೇಳಲಾಗಿದೆ.ಅವರ ಸಮಾಧಿ ಸ್ಥಳದಲ್ಲಿ ದೇವಸ್ಥಾನ ನಿರ್ಮಿಸಲಾಗಿದೆ.ಈ ಸಮಾಧಿಗೆ ನಿತ್ಯವೂ ಮುಂಜಾನೆ 6 ರಿಂದ 7.30 ರ ವರೆಗೆ ಅಭಿಷೇಕ ನಡೆಯುತ್ತದೆ.
ಉಳವಿಗೆ ಬರುವ ಭಕ್ತರ ಅನುಕೂಲಕ್ಕಾಗಿ ಸುಸಜ್ಜಿತವಾದ ವಸತಿಗೃಹಗಳಿದ್ದು.ನಿತ್ಯವೂ ಇಲ್ಲಿ ದಾಸೋಹ ಕೂಡ ನಡೆಯುತ್ತಿದೆ. ಇಲ್ಲಿಯ ಪ್ರಸಾದ ನಿಲಯದಲ್ಲಿ ಮಧ್ಯಾಹ್ನ 12.30 ರಿಂದ 3 ಗಂಟೆಯವರೆಗೆ ಮತ್ತು ರಾತ್ರಿ 8.30 ರಿಂದ 9.30 ರ ವರೆಗೆ ನಿತ್ಯವೂ ಎರಡು ಹೊತ್ತು ಅನ್ನ ಸಂತರ್ಪಣೆ ವ್ಯವಸ್ಥೆ ಇದೆ.
ಇಂತಹ ಜಾತೆಯಲ್ಲಿ ಬೆಂಡು ಬೆತ್ತಾಸ.ಕಲ್ಲುಸಕ್ಕರೆ,ಉತ್ತತ್ತಿ.ಬಾಳೆಹಣ್ಣು ತೆಂಗಿನಕಾಯಿಗಳ ಮಾರಾಟ ಜೋರು.ಅಷ್ಟೇ ಅಲ್ಲ ವಿಭೂತಿಗಳ ಜೊತೆಗೆ ನೈಸರ್ಗಿಕ ಲೋಬಾನ(ಧೂಪ),ಇತ್ಯಾದಿ ಮಾರಾಟ ಜೋರು.ಒಂದು ವಾರಗಳ ಕಾಲ ಮುಂಚಿತವಾಗಿ ಇಲ್ಲಿ ಬಂದು ಉಳಿದುಕೊಂಡು ಶರಣರ ಎಲ್ಲ ಸ್ಥಳಗಳ ತಲುಪಿ ರಥೋತ್ಸವದಲ್ಲಿ ಪಾಲ್ಗೊಳ್ಳುವ ಭಕ್ತ ಜನರ ಒಂದು ದೊಡ್ಡ ಸಂಗಮವೇ ಇಲ್ಲಿ ನೆರೆದಿರುವುದು.
ವೈ.ಬಿ.ಕಡಕೋಳ
ಸಂಪನ್ಮೂಲ ಶಿಕ್ಷಕರು
ಮಾರುತಿ ಬಡಾವಣೆ ಸಿಂದೋಗಿ ಕ್ರಾಸ್
ಮುನವಳ್ಳಿ-591117
ತಾಲೂಕಃಸವದತ್ತಿ ಜಿಲ್ಲೆಃಬೆಳಗಾವಿ
8971117442 7975547298