ಸಂಭ್ರಮದ ಹೋಳಿ ಹಬ್ಬ
ಹೋಳಿ ಹುಣ್ಣಿಮೆ ಹಬ್ಬ ಬಂತು ನೋಡ್ರಿ
ಸಂಜಿ ಆಗ್ಯಾದ ಮಬ್ಬ ಕೂಡೂನು ಬರ್ರಿ !!
ಕುಳ್ಳು,ಕಟಗಿ,ಕದ್ದು ಒಂದ್ಕಡೆ ಹಾಕೂನು
ಓಣ್ಯಾಗೆಲ್ಲ ಬಾರಸ್ಕೋಂತ ಹಲಗೀನ !!
ಗೆಳ್ಯಾರೆಲ್ಲಾ ಕೂಡಿ ಕಾಮಣ್ಣ ಸುಟ್ಟು
ರಾತ್ರಿರಾತ್ರಿ ಬರದು ಪದವ ಹಾಡಿ
ಓಣ್ಯಾಗಿನ ಟೋಳಿ ಕೂಡಿ ಮುಂಜ್ಯಾನೆದ್ದು
ಬಣ್ಣಬಣ್ಣದ ಡಬ್ಬಿ ತಂದ್ವಿ ಅಂದು !!
ಬಣ್ಣ ಕಲಿಸಿ ಇಟ್ಟಿದ್ವಿ ಹಂಡ್ಯಾ ತುಂಬಿ
ಬಂದಬಂದವರಿಗಿ ಬಣ್ಣಚೆಲ್ಲಿ ಮೈತುಂಬಿ
ರಂಗುರಂಗಿನ ರಂಗೋಲಿ ಮೈಮ್ಯಾಲ ಬಿಡಸಿ
ಮಾಡಿದ್ವಿ ಝಳಕ ಬಣ್ಣದಾಗ ಎಬ್ಬಿಸಿ !!
ಬಣ್ಣಬಣ್ಣದ ಪಿಚಕಾರಿ ಕೈಯಾಗ
ಪಡ್ಡೆ ಹುಡುಗುರು ಹೊಂಟಿದ್ವಿ ಓಣ್ಯಾಗ
ಅತ್ಲಾಗಿಂದ ಬಿಳಿಬಟ್ಟೆ ತೊಟ್ಟು ಸೇಠ ಬರತಿದ್ದ
ಏಏ ಅನ್ನುದಕ ಸುರದೇ ಬಿಟ್ವಿ ಬಣ್ಣನ್ನ !!
ಸುತ್ತವರದು ಬಣ್ಣಚ್ಚಿ ಮಾಡಿದ್ವಿ ಮಂಗ್ಯಾನ
ಬಣ್ಣದ ಪೊರೆ ಕಳಚಿ ಶುಭದ ಬಣ್ಣವ ಹಚ್ಚಿ
ಲಬಲಬೋ ಅನಕೋಂತ ಆಚಿಚೆ
ಜಿಗಜಿಗದ ಸೇರಿದ್ವಿ ಮನಿನ !!
ಹೊಸತನ ಸಂಭ್ರಮದ ಪ್ರತೀಕ
ಈ ಬಣ್ಣ ಎನ್ನೋಣ
ಒತ್ತಡವ ಕಳೆದು ಆನಂದ ಹಂಚೋಣ
ರಂಗಪಂಚಮಿ ತುಂಬಲಿ ಬದುಕಿಗೆ ಬಣ್ಣ !!
ಶ್ರೀ ಅಕ್ಬರಅಲಿ ಸೋಲಾಪೂರ ಧಾರವಾಡ