ಕಾವ್ಯ ಮತ್ತು ಕವಿತ್ವ
ನಮ್ಮ ನಾಡಿನ ನವ್ಯ ಕವಿ ಶ್ರೀ ಎಂ ಗೋಪಾಲಕೃಷ್ಣ ಅಡಿಗರು ಒಂದು ಮಾತು ಹೇಳುತ್ತಾರೆ “ಹುತ್ತ ಹುಟ್ಟದೇ ಹುಟ್ಟಿತೇ ಮಹಾಕಾವ್ಯ” ಎಂಬುದಾಗಿ. ಬಹುಶಃ ಈ ಮಾತು ಇಂದು ಅಕ್ಷರಶಃ ಸತ್ಯ. ಏಕೆಂದರೆ ಕಾವ್ಯ ಲೋಕದ ತುದಿ ಮೊದಲು ಗೊತ್ತಿಲ್ಲದ ಅದೆಷ್ಟೋ ಯುವ ಮನಸ್ಸುಗಳು ತಮ್ಮನ್ನು ತಾವು ಮಹಾನ್ ಧೀಮಂತ ಸಾಹಿತಿಗಳೆಂದು ಕೊಚ್ಚಿಕೊಳ್ಳುತ್ತಿವೆ.
ಕಾವ್ಯ ರಚನೆ ಒಂದು ತಪಸ್ಸು. ಅದನ್ನು ತಪಸ್ಸು ಮಾಡಿ ಪಡೆದುಕೊಳ್ಳಬೇಕೆ ವಿನಃ ಕೊಂಡುಕೊಳ್ಳಲಾಗದು.ಅಡಿಗರ ಮಾತು ಇಂದು ಬಹಳಷ್ಟು ಸತ್ಯ. ಅಂದು ನಾರದ ಮಹರ್ಷಿಗಳು ಕಿರಾತಕ ರತ್ನಾಕರ ತಮ್ಮನ್ನು ದೋಚಿಕೊಂಡು ಹೋಗಲು ಬಂದಾಗ ಮಾಡಿದ ಒಂದು ಉಪದೇಶ ರತ್ನಾಕರನ ಭಾಗ್ಯವನ್ನು ತೆರೆಯಿತು.
ನಿರಕ್ಷರ ಕುಕ್ಷಿ ರತ್ನಾಕರ ಅವನ ಬಾಯಲ್ಲಿ ರಾಮ ನಾಮ ಉಚ್ಚರಿಸಲು ಎಲ್ಲಿಂದ ಬರಬೇಕು. ಆದರೆ ತ್ರಿ ಲೋಕ ಸಂಚಾರಿ ನಾರದ ಮಹರ್ಷಿಗಳು ಬಲು ಬುದ್ದಿವಂತರು.ಪಕ್ಕದಲ್ಲಿದ್ದ ಮರವನ್ನು ತೋರಿಸಿ ಇದೇನು?ಎನ್ನಲು ಮರ ಎಂದ ರತ್ನಾಕರ. ಇದನ್ನೇ ನಾನು ತಿರುಗಿ ಬರುವವರೆಗೂ ಉಚ್ಚರಿಸು ಎಂದು ಅಲ್ಲಿಂದ ಹೊರಟು ಹೋದರು. ಎಷ್ಟೋ ವರ್ಷಗಳ ನಂತರ ತಿರುಗಿ ಅದೇ ತಾಣಕ್ಕೆ ಬಂದಾಗ ದೊಡ್ಡ ಹುತ್ತ ಬೆಳೆದಿತ್ತು.
ಜೊತೆಗೆ ರಾಮ ರಾಮ ಎನ್ನುವ ಧ್ವನಿಯೊಂದು ಅನುರಣಿಸುತ್ತಿತ್ತು. ಮಹರ್ಷಿಗಳು ಒಂದು ಚಿಕ್ಕ ಕಡ್ಡಿಯಿಂದ ಆ ಹುತ್ತವನ್ನು ಕದಡಿದಾಗ ನೀಳ ಕಾಯದ ಗಡ್ಡ ಧಾರಿ, ಪ್ರಾಂಜ್ವಲ ವದನಿ,ದಿವ್ಯ ತೇಜಸ್ವಿ ಮುಖವೊಂದು ರಾಮ ನಾಮ ಉಚ್ಚರಿಸುತ್ತ ಕುಳಿತಿದ್ದು ಕಂಡ ಮಹರ್ಷಿಗಳು ತಾವು ಹಿಂದೊಮ್ಮೆ ಈ ತಾಣದಲ್ಲಿ ನಡೆದ ಘಟನೆಯೊಂದನ್ನು ನೆನಪಿಸಿಕೊಂಡರು.
ಕುತೂಹಲ ಹೆಚ್ಚಾಗಿ ಆ ದಿವ್ಯ ಚೇತನವನ್ನು ಕೇಳಿದಾಗ, ಆ ಚೇತನ ಮಹರ್ಷಿಗಳ ಪಾದಕಮಲಗಳಿಗೆರಗಿ ದೇವಾ ನಾನು ರತ್ನಾಕರ ಎಂದರು. ಆಗ ಮಹರ್ಷಿ ನಾರದರು ರತ್ನಾಕರ ನೀನಿಂದಿನಿಂದ ರತ್ನಾಕರ ಅಲ್ಲ.ಹುತ್ತದಿಂದ ಕಂಡ ನೀನು ವಾಲ್ಮೀಕಿ ಎಂದು ಹೆಸರಿಸಿದರು. ಮುಂದೆ ನೀನು ರಾಮಾಯಣ ಕಾವ್ಯವನ್ನು ರಚಿಸಲು ಹರಸಿದರು. ತಮಸಾ ನದಿ ತೀರದಲ್ಲಿ ಒಂದು ಸುಂದರ ಕುಟೀರ ನಿರ್ಮಿಸಿ ತಪೋಗೈದ ಮೇಲಲ್ಲವೇ ಮಹಾಕಾವ್ಯ ರಾಮಾಯಣ ರಚನೆಯಾದದ್ದು.
ಇಲ್ಲಿ ಅಡಿಗರು ಹೇಳಿದ್ದು ಸತ್ಯ. ಹುತ್ತ ಹುಟ್ಟದೇ ಹುಟ್ಟಿತೇ ಮಹಾಕಾವ್ಯ ಎನ್ನುವ ಮಾತು.ಆದರೆ ಇಂದು ಅಂದಿನಂತೆ ಮಹರ್ಷಿ ನಾರದರು ಬರುವುದಿಲ್ಲ. ನಾವು ರತ್ನಾಕರ ಆಗಲು ಸಾಧ್ಯವಿಲ್ಲ. ಆದರೆ ಒಂದು ಮಹಾಕಾವ್ಯಕ್ಕೆ ಶಕ್ತಿ ತುಂಬುವ ಚೈತನ್ಯ ನಮ್ಮೊಳಗಿದೆ.
ಕಾವ್ಯದ ಸೃಷ್ಟಿ ನಮ್ಮೊಳಗಿನ ಆಂತರಿಕ ತುಮುಲುತೆ, ಭಾವಾಭಿವ್ಯಕ್ತಿಗಳು ನಮ್ಮನ್ನು ಒರೆ ಹಚ್ಚಿ ನೋಡಲು ಅವಕಾಶ ಮಾಡಿಕೊಡುತ್ತವೆ.ನಾವು ಸಾಹಿತ್ಯಾಲಂಕೃತ ಗರ್ವಿಗಳಾಗಬೇಕು. ಗರ್ವ ಸಾಹಿತ್ಯಾಲಂಕೃತವಾಗಬಾರದು. ನನ್ನ ಕಾವ್ಯ ಮನುಕುಲಕ್ಕೆ ಹೊಸ ಮನ್ವಂತರ ಆಗಬೇಕು.
ಸಾಹಿತಿ ಅಳಿದರೂ ಸಾಹಿತ್ಯ ಉಳಿಯಬೇಕು. ಕಾವ್ಯ ಕವಿತ್ವಕ್ಕೆ ಸಂಬಂಧಿಸಿರಬೇಕು. ಇನ್ನೊಂದನ್ನು ಎತ್ತಿ ಹಿಡಿಯುವ ಸಲುವಾಗಿ ರಚಿಸಿದ ಪುರಾಣ ಕಥೆ ಆಗಬಾರದು. ಕವಿತ್ವ ಕವಿಯ ಅಂತಃಚಕ್ಷು ಆಗಿರಬೇಕು. ಇತರರನ್ನು ಮೆಚ್ಚಿಸುವುದಕ್ಕಿಂತ ಹೆಚ್ಚಾಗಿ ಕಾವ್ಯವನ್ನು ಮೆಚ್ಚಿಸುವ ಸಾಹಿತ್ಯವಾಗಬೇಕು.
ಸಾಹಿತಿಯಾಗುವವನಿಗೆ ಸಹನೆ ಇರಬೇಕು. ಎಲ್ಲವನ್ನೂ ಸಹಿಸಿಕೊಳ್ಳುವ ಸಾಮರ್ಥ್ಯವನ್ನು ಅರಿತಿರಬೇಕು.ಛಂದಸ್ಸು, ಅಲಂಕಾರಕ್ಕಿಂತ ಮುಖ್ಯವಾಗಿ ಕಾವ್ಯವನ್ನು ಅರಿಯುವಂತಿರಬೇಕು.ಕವಿತ್ವ ಅದೊಂದು ತಪಸ್ಸು.
ಸುಮ್ಮನೆ ನಾಲ್ಕಕ್ಷರಗಳಿಗೆ ಪ್ರಾಸ, ಅನುಪ್ರಾಸ, ಪಲ್ಲವಿ, ಅನುಪಲ್ಲವಿ ಸೇರಿಸಿ ಒಂದು ಕವನ ರಚಿಸಿ, ಯಾರದೋ ಬೆನ್ನುಡಿ,ಇನ್ಯಾರದೋ ಮುನ್ನುಡಿ ಬರೆಸಿ ಪ್ರಕಟಿಸಿ ಕಾವ್ಯ ಕಾವ್ಯವಲ್ಲ.ಕಾವ್ಯ ಒಂದು ಜನಾಂಗದ ಮೇಲೆ ಪ್ರಭಾವ ಬೀರುವುದಾಗಿರಬಾರದು.
ಅದು ಜಾತ್ಯಾತೀತ ಪದಗಳನ್ನು ಹೊಂದಿರಬೇಕು. ಅಂದಾಗ ಅದೊಂದು ಕಾವ್ಯವಾಗಿ ಹೊರಹೊಮ್ಮುತ್ತದೆ. ಕಾವ್ಯ ಒಂದು ದಿನದ ರಚನೆಯಾಗಬಾರದು. ಅದು ನಿತ್ಯ ನಿರಂತರ ವಾಕ್ಝರಿಯಾಗಿ ಧುಮ್ಮಿಕ್ಕುವ ಅಬ್ಬಿಯ ನೆಲೆಯಾಗಿ, ನಿಲ್ಲಬೇಕು.ಅದು ಕಾವ್ಯ.
ಕಾವ್ಯ ರಚನೆ ಒಂದು ತಪಸ್ಸಿನ ಫಲವಾಗಿ ಬಂದ ಜ್ಞಾನ. ಅದು ಸದ್ವಿನಿಯೋಗವಾಗಬೇಕಾದರೆ, ಕವಿತ್ವ ಹೊಂದಿರಬೇಕು. ಕವಿ ಕರಗಿ ಹೋದರು ಕಾವ್ಯ ನಿಲ್ಲಬೇಕು. ಕಾವ್ಯ ಸಮುದಾಯಗಳ ನಡುವಿನ ಸಾಮರಸ್ಯ ಬೆಸೆಯುವಂತಿರಬೇಕು.ಎರಡು ಮನಗಳನ್ನು ಒಗ್ಗೂಡಿಸಬೇಕು. ಒಡೆಯಬಾರದು.ಕಾವ್ಯದ ನೆಲೆಗಟ್ಟು ಕವಿತ್ವವಾಗಿರಬೇಕು. ಮತೀಯ ಭಾವನೆಗಳನ್ನು ಕೆರಳಿಸುವಂತಿರಬಾರದು. ಅದು ಕಾವ್ಯ. ಹಾಗೆ ಬರೆಯುವುದು ಕವಿತ್ವ.
*ಶ್ರೀ ಇಂಗಳಗಿ ದಾವಲಮಲೀಕ*
ಶಿಕ್ಷಕ ಸಾಹಿತಿಗಳು, ಹತ್ತಿಮತ್ತೂರು