ಭಾರತವನ್ನು ಕೊರೋನಾ ಮುಕ್ತ ಮಾಡಲು ಪ್ರತಿಯೊಬ್ಬರೂ ಕೊರೋನಾ ಲಸಿಕೆಯನ್ನು ಹಾಕಿಸಿಕೊಳ್ಳಲೇಬೇಕು ಎಂದು ಕೇಂದ್ರ ಗೃಹ ಸಚಿವ ಅಮಿತ್ ಷಾ ಹೇಳಿದರು.
ಬೆಳಗಾವಿ ನಗರದ ಜಿಲ್ಲಾ ಕ್ರೀಡಾಂಗಣ ದಲ್ಲಿ ರವಿವಾರ ಜನ ಸೇವಕ ಸಮಾವೇಶದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು, ಪ್ರಧಾನಿ ಮೋದಿಯವರ ಸಮರ್ಥ ನಾಯಕತ್ವದಿಂದಾಗಿ ವಿದೇಶಗಳಿಗಿಂತಲೂ ನಮ್ಮ ದೇಶದಲ್ಲಿ ಕೊರೋನಾ ಸಾವಿನ ಸಂಖ್ಯೆ ಕಡಿಮೆ ಇದೆ. ಈಗ ಲಸಿಕೆ ಬಂದಿದ್ದು ಎಲ್ಲರೂ ಲಸಿಕೆ ಹಾಕಿಸಿಕೊಂಡು ಭಾರತವನ್ನು ಕೊರೋನಾ ಮುಕ್ತ ಮಾಡಬೇಕು ಎಂದರು.
ಇದೇ ಸಂದರ್ಭದಲ್ಲಿ ಕಿತ್ತೂರ ಚೆನ್ನಮ್ಮ, ಸಂಗೊಳ್ಳಿ ರಾಯಣ್ಣ, ಬೆಳವಡಿ ಮಲ್ಲಮ್ಮರನ್ನು ಅಮಿತ್ ಷಾ ಸ್ಮರಿಸಿದರು.
ಇತ್ತೀಚೆಗೆ ತೀರಿಹೋದ ಬೆಳಗಾವಿ ಸಂಸದ ಹಾಗೂ ಕೇಂದ್ರ ರೇಲ್ವೇ ಸಚಿವರಾಗಿದ್ದ ಸುರೇಶ ಅಂಗಡಿಯವರನ್ನೂ ಅಮಿತ್ ಷಾ ನೆನಪಿಸಿಕೊಂಡು, ಅಂಗಡಿಯವರ ಸಾವಿನಿಂದ ಬೆಳಗಾವಿ ಜಿಲ್ಲೆಗೆ ತುಂಬಲಾರದ ನಷ್ಟವುಂಟಾಗಿದೆ ಎಂದರು.
ನಂತರ ಅವರು ಸುರೇಶ ಅಂಗಡಿಯವರ ನಿವಾಸಕ್ಕೆ ಭೇಟಿಕೊಟ್ಟು ಕುಟುಂಬದವರಿಗೆ ಸಾಂತ್ವನ ಹೇಳಿದರು.