ಮೂಡಲಗಿ: ಮಾತಂಗ (ಮಾದರ) ಸಮಾಜದ ಪ್ರತಿಯೊಬ್ಬರು ಸಮಾಜದ ಇತಿಹಾಸವನ್ನು ಅರಿತು ಸಮಾಜದ ಮಹಾನ್ ಪುರುಷರ ತತ್ವ ಚಿಂತನೆಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ತಮ್ಮ ಮಕ್ಕಳಿಗೆ ಸಮಾಜದ ಇತಿಹಾಸವನ್ನು ತಿಳಿಸಬೇಕು ಎಂದು ಅಗರಖೇಡ ಮಾತಂಗ (ಮಾದರ)ಸಮಾಜದ ಹಿರಿಯ ಚಿಂತಕ ಸ್ವತಂತ್ರ ಶಿಂಧೆ ಹೇಳಿದರು.
ಪಟ್ಟಣದ ಅಂಬೇಡ್ಕರ ಭವನದಲ್ಲಿ ಮಾತಂಗ (ಮಾದರ) ಸಮಾಜದ ಗತವೈಭವ ಇತಿಹಾಸ ಕುರಿತು ಸೋಮವಾರ ಜರುಗಿದ ಚಿಂತನಾ ಸಭೆಯಲ್ಲಿ ಅವರು ಮಾತನಾಡಿ, ಅನೇಕ ಶಬ್ದಗಳಿಂದ ಕರೆಯಲ್ಪಡುವ ಮಾತಂಗ (ಮಾದರ) ಸಮಾಜವು ವಿಶ್ವದ ಮೊಟ್ಟ ಮೊದಲ ಸಮಾಜವಾಗಿದ್ದು ಸಪ್ತ ಮುನಿಗಳ ತಂದೆ ಜಾಂಬವಂತ ಮುನಿಗಳು ಮನುಕುಲಕ್ಕೆ ನವಿಲಿನ ರೂಪದಲ್ಲಿ ಪ್ರಥಮವಾಗಿ ಸಂತಾನ ನೀಡಿದರು. ಸಂಸ್ಕೃತಿ, ಮದುವೆಯ ಕಲ್ಪನೆ, ದಾನ-ಧರ್ಮ ನೀಡಿದ ಮಾತಂಗ ಸಮಾಜದ ಜಾಂಬವಂತ ಮುನಿಗಳ ಕಾರ್ಯ ಇಂದಿಗೂ ಪ್ರಸ್ತುತವಾಗಿವೆ ಎಂದರು.
ಶಿವ-ಪಾವರ್ತಿಗೆ ಮದುವೆಗೆ ಬೇಕಾಗಿರುವ ತಾಳಿ, ಮೂಗುಬಟ್ಟು, ಕಾಲುಂಗುರ, ಬಳೆ, ಹೊನ್ನಾಳಿ ವೃಕ್ಷ ರೂಪದಿಂದ ಮಾಡಿ ಮದುವೆ ನೆರವೇರಿಸಿದ ಕೀರ್ತಿ ಮಾತಂಗ ಸಮಾಜದ ಜಾಂಬವಂತ ಋಷಿಮುನಿಗೆ ಸಲ್ಲುತ್ತದೆ. ರಾಮಾಯಣ ಮತ್ತು ಮಹಾಭಾರತ ಕಾವ್ಯಗಳಲ್ಲು ಕೂಡಾ ಮಾತಂಗ ಸಮಾಜದ ಸ್ಥಾನಮಾನಗಳು ಪ್ರಮುಖವಾಗಿವೆ ಎಂದು ವಿವರಿಸಿದ ಅವರು, ಕಳೆದ 25 ವರ್ಷಗಳಿಂದ ಮಾತಂಗ ಸಮಾಜ ಹಿರಿಮೆ-ಗರಿಮೆಗಳ ಅಧ್ಯಯನ ಮಾಡಿ ರಾಜ್ಯಾದ್ಯಂತ 500ಕ್ಕೂ ಹೆಚ್ಚು ಚಿಂತನಾ ಸಭೆಗಳನ್ನು ನಡೆಸಲಾಗಿದೆ ಎಂದರು.
ಸಾನ್ನಿಧ್ಯ ವಹಿಸಿದ್ದ ಹಂಪಿ ಮಾತಂಗ ಮಹಾಋಷಿ ಆಶ್ರಮದ ಶ್ರೀ ಪೂರ್ಣಾನಂದ ಭಾರತಿ ಸ್ವಾಮೀಜಿ ಹಾಗೂ ಆದಿ ಜಾಂಬವಂತ ಮಠದ ಶ್ರೀ ಅನಂತ ಆನಂದ ಸ್ವಾಮೀಜಿಗಳು ಸಮಾಜ ಬಾಂಧವರಿಂದ ಸತ್ಕಾರ ಸ್ವೀಕರಿಸಿ ಆಶಿರ್ವಚನ ನೀಡಿದರು.
ಸಭೆಯ ವೇದಿಕೆಯಲ್ಲಿ ಪುರಸಭೆ ಸದಸ್ಯ ರವೀಂದ್ರ ದಾ.ಸಣ್ಣಕ್ಕಿ, ಪ್ರಕಾಶ ಮಾದರ, ಮನೋಹರ ಸಣ್ಣಕ್ಕಿ, ಈರಪ್ಪ ಢವಳೇಶ್ವರ, ಪರಶುರಾಮ ಬಂಕಾಪೂರ, ಸತ್ಯಪ್ಪ ಕರವಾಡಿ, ಸುಂದರ ಸಣ್ಣಕ್ಕಿ ಮಾದೇವ ಮಾಸನ್ನವರ, ಯಶ್ವಂತ ಮಂಟೂರ, ಸುಂದರ ಹವಳೆವ್ವಗೋಳ, ಮೂಡಲಗಿ ಮತ್ತು ವಿವಿಧ ಹಳ್ಳಿಗಳ ಮಾತಂಗ ಸಮಾಜದ ಮುಖಂಡರು ಭಾಗವಹಿಸಿದ್ದರು. ಎಡ್ವಿನ್ ಪರಸನ್ನವರ ಸ್ವಾಗತಿಸಿ ನಿರೂಪಿಸಿದರು, ಈರಪ್ಪ ಢವಳೇಶ್ವರ ವಂದಿಸಿದರು.