ವೇತನ ನೀಡದೇ ಇರುವ ಕಾರಣಕ್ಕಾಗಿ ದೇಶದ ಮೊದಲ ಐಫೋನ್ ಕಂಪನಿಗೆ ಕಾರ್ಮಿಕರು ಬೆಂಕಿ ಹಚ್ಚಿದ್ದು ಕಾರು, ಕಂಪ್ಯೂಟರ್ ಒಳಗೊಂಡಂತೆ ಸುಮಾರು ೫೦ ಕೋಟಿ ರೂ.ಗಿಂತ ಹೆಚ್ಚು ಹಾನಿಯಾಗಿದೆ.
ಕೇವಲ ಎರಡು ವರ್ಷಗಳ ಹಿಂದೆ ಭಾರತದಲ್ಲಿ ಆರಂಭವಾದ ವಿಸ್ಟ್ರಾನ್ ಎಂಬ ಕಂಪನಿಯು ಪ್ರಖ್ಯಾತ ಐಫೋನ್ ಮೊಬೈಲ್ ಗಳ ಬಿಡಿ ಭಾಗಗಳನ್ನು ತಯಾರಿಸುತ್ತಿತ್ತು. ಆದರೆ ಕಾರ್ಮಿಕರಿಗೆ ೪ ತಿಂಗಳಿನಿಂದ ವೇತನ ನೀಡಿರಲಿಲ್ಲ ಎಂದು ಆರೋಪಿಸಿ ಕಾರ್ಮಿಕರು ರೊಚ್ಚಿಗೆದ್ದು ಕಚೇರಿ ಹಾಗೂ ಫ್ಯಾಕ್ಟರಿಗೆ ಬೆಂಕಿ ಹಚ್ಚಿದ್ದಾರೆ.
ಇದಲ್ಲದೆ ಕಂಪನಿಗೆ ಜನರನ್ನು ಒದಗಿಸುವ ಅಧಿಕಾರಿ ವೀರಭದ್ರಯ್ಯ ಎಂಬಾತನ ಮಿತಿ ಮೀರಿದ ಲಂಚಬಾಕತನವೂ ಗಲಾಟೆಗೆ ಕಾರಣ ಎಂದು ತಿಳಿದುಬಂದಿದ್ದು ಕಂಪನಿ ಈ ಬಗ್ಗೆ ನಿರ್ಲಕ್ಷ್ಯ ಧೋರಣೆ ತಾಳಿತ್ತು ಎನ್ನಲಾಗಿದೆ.
ಸುಮಾರು ನಾಲ್ಕು ತಿಂಗಳಿನಿಂದ ಕಾರ್ಮಿಕರಿಗೆ ಸಂಬಳ ನೀಡಿಲ್ಲ ಈ ಬಗ್ಗೆ ಆಡಳಿತ ವರ್ಗದವರೂ ಯಾವುದೇ ಲಕ್ಷ್ಯ ವಹಿಸಿರಲಿಲ್ಲ ಎನ್ನಲಾಗಿದೆ.
ಇದರಿಂದ ರೊಚ್ಚಿಗೆದ್ದ ಕಾರ್ಮಿಕರು ಕಂಪನಿಗೆ ಬೆಂಕಿ ಹಚ್ಚಿದ್ದಲ್ಲದೆ ಅನೇಕ ಐಫೋನ್ ಮೊಬೈಲ್ ಗಳನ್ನು ಕದ್ದಿದ್ದಾರೆ ಎನ್ನಲಾಗಿದೆ.
ಘಟನಾ ಸ್ಥಳಕ್ಕೆ ಭೇಟಿ ನೀಡಿದ ಸಂಸದ ಎಸ್. ಮುನಿಸ್ವಾಮಿ ಹಾಗೂ ಶಾಸಕ ಶ್ರೀನಿವಾಸ ಗೌಡಾ ಅವರು ಗಲಾಟೆ ಮಾಡಿದ ಕಾರ್ಮಿಕರ ಮೇಲೆ ಕಠಿಣ ಕ್ರಮಕ್ಕೆ ಒತ್ತಾಯಿಸಿದ್ದಾರೆ.