ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಸಚಿವ ಸಂಪುಟ ವಿಸ್ತರಣೆ ಮಾಡುವುದಷ್ಟೇ ತಡ ಬಿಜೆಪಿಯಲ್ಲಿ ಬೆಂಕಿ ಕಾರುವ ರಾಜಕೀಯ ನಾಯಕರ ಸಂಖ್ಯೆ ಹೆಚ್ಚಾಗಿದೆ.
ತಮಗೆ ಸಚಿವ ಸ್ಥಾನ ಸಿಗಲಿಲ್ಲ ಎಂಬ ಕಾರಣದಿಂದ ಬಂಡಾಯವೆದ್ದಿರುವ ಬಸನಗೌಡಾ ಪಾಟೀಲ ಯತ್ನಾಳ, ಮುನಿರತ್ನ ಹಾಗೂ ಹಳ್ಳಿ ಹಕ್ಕಿ ವಿಶ್ವನಾಥ್ ಬಹಿರಂಗವಾಗಿಯೇ ತಮ್ಮ ಆಕ್ರೋಶ, ಅಸಮಾಧಾನ ವ್ಯಕ್ತಪಡಿಸಿದ್ದು, ಯಡಿಯೂರಪ್ಪನವರ ಒಂದು ಸಿಡಿ ಇಟ್ಟುಕೊಂಡು ಬ್ಲಾಕ್ ಮೇಲ್ ಮಾಡಿ ಕೆಲವರು ಮಂತ್ರಿಯಾಗಿದ್ದಾರೆ ಎಂದು ಇಬ್ಬರು ನಾಯಕರು ಹೇಳಿದ್ದಾರೆ.
ಸಂಕ್ರಾಂತಿಯ ನಂತರ ಯಡಿಯೂರಪ್ಪನವರ ಕೆಟ್ಟ ದಿನಗಳು ಆರಂಭವಾಗಿವೆ ಎಂದೂ ಯತ್ನಾಳ ತೀವ್ರವಾಗಿ ಪ್ರತಿಕ್ರಿಯೆ ತೋರಿದ್ದಾರೆ.
ಅಲ್ಲದೆ ಪಕ್ಷದ ೧೨ ಜನ ಶಾಸಕರು ತೀವ್ರ ಕೋಪಗೊಂಡಿದ್ದು ಈ ಬಗ್ಗೆ ಹೈಕಮಾಂಡ್ ಗೂ ದೂರು ಸಲ್ಲಿಸುವುದಾಗಿ ಗುಟುರು ಹಾಕಿದ್ದಾರೆ.
ಆದರೆ ಸಿಡಿ ಇಟ್ಟುಕೊಂಡು ಮಂತ್ರಿಯಾಗಿರುವ ಮೂವರು ಶಾಸಕರು ಯಾರು ಎಂಬ ಪ್ರಶ್ನೆ ದೊಡ್ಡದಾಗಿ ಬೆಳೆದು ನಿಂತಿದ್ದು ಉತ್ತರವಿಲ್ಲದ ಪ್ರಶ್ನೆಯಾಗಿದೆ.
ಈ ಮಧ್ಯೆ ಸಂಪುಟ ವಿಸ್ತರಣೆಯ ಈ ಬೆಳವಣಿಗೆಗಳ ಬಗ್ಗೆ ಪ್ರತಿಕ್ರಿಯೆ ತೋರಿರುವ ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಮಾತ್ರ, ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ಸು ಅಧಿಕಾರಕ್ಕೆ ಬರುವುದು ಗ್ಯಾರಂಟೀ ಎಂದು ತಮ್ಮ ಎಂದಿನ ಸ್ಟೈಲ್ ನಲ್ಲಿ ಭವಿಷ್ಯ ನುಡಿದಿದ್ದಾರೆ.