ಕರೋನಾ ವರ್ಷ 2020
ಎರಡು ಸಾವಿರ ಇಪ್ಪತ್ತು
ಕರೋನಾ ಮಾರಿ ನುಂಗಿತ್ತು
ವರ್ಷ ಪೂರ ಮರೆಯದಂಗ
ಮರಳಿ ನೋಡುವಂತಾಯಿತು.
ಅತಿ ಬುದ್ಧಿವಂತಿಕೆ ಪ್ರಮಾದಿಂದ
ಹೊಸ ವೈರಸ್ಸೇ ಉದಯಿಸಿತು
ಎಂದೂ ಕಂಡು ಕೇಳರಿಯದ
ಹೊಸ ಇತಿಹಾಸವೇ ಸೃಷ್ಟಿಸಿತು.
ಕರೋನಾ ಹೊಸ ಅಲೆಗೆ
ಜಗದ ಉಸಿರೇ ನಿಂತಿತು
ಚಿಕಿತ್ಸೆ ಇಲ್ಲದ ಮಹಾ ಮಾರಿಗೆ
ವೈದ್ಯ ವಿಜ್ಞಾನ ಕೈ ಕಟ್ಟಿ ಕುಳಿತಿತ್ತು.
ಕಾಣದ ವೈರಸ್ ಗೆ ಬಳಲಿ
ವಿಶ್ವವೇ ತಲ್ಲಣಿಸಿತ್ತು
ದೇಶದ ಬಾಗಿಲಿಗೆ ಹಾಕಿ ಬೇಲಿ
ಒಳಗೇ ಒಣ ಜೀವನ ಸಾಗಿತ್ತು.
ದುಡಿಯುವ ಕೈಗಳಿಗೆ ಕೆಲಸವೇ ಇಲ್ಲ
ಒಪ್ಪೊತ್ತಿನ ಊಟಕ್ಕೂ ಗತಿಯಿಲ್ಲ
ಕಾಲನ ಕರೆಗೆ ಓಗೊಟ್ಟು ಕೆಲವರು
ಜಗವ ಬಿಟ್ಟು ನಡೆದರಲ್ಲ.
ನೋಡಲು ಹೊರಗೆ ಗಮ್ಮತ್ತು
ಪೋಲೀಸರ ಬಿಸಿ ಲಾಟಿ ಏಟು
ಸುಳ್ಳು ಪೊಳ್ಳು ನೆಪ ಹೇಳುತ್ತ
ಪಾರಾಗುತ್ತಿದ್ದರು ಕೆಲವರು ನೀಟು.
ರಕ್ತ ಸಂಬಂಧಿಗಳ ಅಪ್ಪದೆ
ಭಯದಿ ಜೀವನ ಸಾಗಿತ್ತು
ಒಬ್ಬರಿಗೊಬ್ಬರು ತಾಗಿಸಿಕೊಳ್ಳದೆ
ಮಾನವೀಯತೆಯೇ ಮುರಿದುಬಿತ್ತು.
ಶಿಸ್ತು ಸ್ವಚ್ಛತೆ ಅಭಿಯಾನ
ಮರಳಿ ಬಂದ ಋತುಗಾನ
ಬಾಯಿ ಮುಚ್ಚಿಕೊಳ್ಳುವ ನೀತಿ
ಬಾಳಿಗೆ ತಂದಿದೆ ಸಮಾಧಾನ.
ದೇವರ ಮೊರೆ ಹೋಗುವ
ಮನಗಳಿಗೂ ಕಲ್ಲು ಹಾಕಿತು
ಧೈರ್ಯವೆ ಜೀವನ ಎನ್ನುವ
ಸತ್ಯ ಮಾರ್ಗ ತೋರಿಸಿತು.
ಮಹೇಂದ್ರ ಕುರ್ಡಿ
ಕಳೆಯಿತು ಕಳೆಯಿತು
ಇಪ್ಪತ್ತು ಇಪ್ಪತ್ತು
ನೆಮ್ಮದಿಯ ಕಬಳಿಸಿ
ಎಲ್ಲರ ತಲ್ಲಣಗೊಳಿಸಿ
ಆಪ್ತರನ್ನು ಅಗಲಿಸಿ
ಅಟ್ಟಹಾಸ ಮೆರೆದ
ದೈತ್ಯ ಶಕ್ತಿಯನ್ನು
ಮರೆತುಬಿಡೋಣ
ಕೋವಿಡ್ ಹತ್ತೊಂಬತ್ತನು.
ಪುಷ್ಪ ಮುರುಗೋಡ
ಯಾವುದು ಹೊಸ ವರ್ಷ
ನಾಕು ಮಂದಿ ಕೇಕು ತಂದು.
ಚಾಕು ಹಿಡಿದು ಕೇಕು ತಿಂದು.
ನಾ ಮುಂದು ನೀ ಮುಂದು
ಎಂದು ಮುಖಕೆ ಮೆತ್ತುವುದಲ್ಲ
ಹೊಸ ವರುಷ. !!
ಚಟಾಕಿ ಹಾರಿಸಿ ಪಟಾಕಿ ಸಿಡಿಸಿ.
ಮಂದ ಬೆಳಕಲ್ಲಿ ಸುಂದು ಬಂದವರಂಗೆ
ಕುಣಿದು ಕುಪ್ಪಳಿಸಿ ಮೋಜು ಮಸ್ತಿ
ಮಾಡಿ ಹಾಡು ಹಾಡಿ ಹಾರಾಡುವುದಲ್ಲ
ಹೊಸ ವರುಷ!!
ಮಧ್ಯರಾತ್ರಿಯವರೆ ಮದ್ಯಕುಡಿದು.
ಅರ್ಧಂಬರ್ಧ ಕಂಡ ತುಂಡು ತಿಂದು.
ಹೆಂಡ ಕುಡಿದು ಕೋತಿಯಂಗ
ಜೊಲಿಹೊಡೆಯುವುದಲ್ಲ
ಹೊಸ ವರುಷ!!
ಕಂಠಪೂರ್ತಿ ಕುಡಿದು ಕಂಡ
ಬಾಲೆಯರ ಸೊಂಟ ಹಿಡಿದು
ಅಮಲಿನಲ್ಲಿ ತೇಲಿ ಹೋಗಿ
ಲಾಲಿ ಹಾಡುವ ಹಾಗೆ ಮಾಡುವುದಲ್ಲ
ಹೊಸ ವರುಷ!!
ಜಗದ ಸಸ್ಯರಾಶಿಗೆ ಹೊಸ ಜೀವ ನೀಡಿ ಬರಡಾದ ಗಿಡದಲಿ ಹಸಿರ ಚಿಗುರಿಸಿ ನಾಡ ಗುಡಿಗೆ ಇಂಪ ಹಾಡಿ. ಜೀವಿಗಳಿಗೆಲ್ಲ ನಗುವ ನೀಡುವುದುಹೊಸ ವರುಷ!!
ಬೇವು ಬೆಲ್ಲ ನೋವು ನಲಿವು.
ಸಮವೆಂದು ಸಾರಿ ಜೀವನದ ಪಾಠ ಹೇಳಿ.
ಜಗದ ಬದುಕಿಗೆ ಭರವಸೆಯ ನೀಡಿ.
ಭಾರವಾದ ಹೃದಯಕೆ ಮುದವ ನೀಡುವುದು
ಹೊಸ ವರುಷ!!
ವ್ಯರ್ಥವಾಗದಂತೆ ಜೀವನದ ಅರ್ಥ ನೀಡಿ.
ಹಾದಿಗೆಲ್ಲ ಸುಖವ ಚಲ್ಲಿ ಸದಾ
ನಗು ನಗುತಾ ಬಾಳಿ ಎಂದು ಸಾರಿ
ಸೃಷ್ಟಿಯ ಬದಲಾವಣೆಯ ಪಾಠ ಹೇಳುವುದು
ಹೊಸ ವರುಷ!!
ಯಲ್ಲಪ್ಪ ಮಲ್ಲಪ್ಪ ಹನಾ೯ಳಗಿ(ಯಮಹ)
ಹೇಗಾಯಿತು ಹೊಸ ವರುಷ
ಚುಕ್ಕಿಗಳು ಕರ್ರಗಾದವೆ?
ಹಕ್ಕಿಗಳು ಬೆರಗಾದವೆ?
ಕತ್ತಲೆ ಥಳಥಳ ಹೊಳೆಯಿತೆ?
ಬೆಳಕು ಉಮ್ಮಳದಿ ಅದುರಿತೆ?
ಮೂಡಿತ್ಹೇಗೆ ಹೊಸ ವರುಷ?
ನೆತ್ತರು ಬಿಳಿಯಾಯಿತೆ?
ಸತ್ತವರೆದ್ದು ಕುಳಿತರೆ?
ಎಲೆ ಉದುರಿ ತಲೆ ಸವರಿತೆ?
ಕೋಗಿಲೆ ನೇಗಿಲು ಹೂಡಿತೆ?
ಬದುಕುಗಳು ಭವಣೆಗೆ ಮಿಕ್ಕವೆ?
ಕೆದಕುಗಳು ಎಣಿಕೆಗೆ ಸಿಕ್ಕವೆ?
ಕಳೆದ ಘಳಿಗೆ ಎದೆ ಹೊಕ್ಕಿತ್ತೆ?
ಜಗದ ನಗು ಮುಗಿಲ ನೆಕ್ಕಿತೆ?
ಮೂಡಿತ್ಹೇಗೆ ಹೊಸ ವರುಷ?
ಬೈಬಲ್ ಕಥೆ ಹೊನ್ನಾಯಿತೆ?
ಕುರಾನ ನುಡಿ ಭಿನ್ನವಾಯಿತೆ?
ಭಗವದ್ಗೀತೆ ಕಣ್ಣಾಯಿತೆ?
ಮೂಡಿತ್ಹೇಗೆ ಹೊಸ ವರುಷ?
ಬಡವರ ಕೊರಗು,ಹೂವಾಯಿತೆ?
ಹಸಿದ ಕೂಸು ನಕ್ಕಾಡಿತೆ?
ನದಿಯ ಹರಿವು,ಕುದಿತವಾಯಿತೆ?
ಗಾಳಿಯ ತುದಿ ಕಣ್ಣಿಗೆ ಕಂಡಿತಾ?
ಮೂಡಿತ್ಹೇಗೆ ಹೊಸ ವರುಷ?
ಜಾತಿಧರ್ಮ,ಪ್ರೇಮ ಕಲಿಸಿದವೆ?
ಉಸಿರು-ಬಸಿರು ಒಲುಮೆಯಾದವೆ?
ಕಾಮಕ್ರೋಧ ಭುವಿ ತೊರೆದವೆ?
ದೀನರ ಬಾಧೆ ಬದಿ ಸರಿಯಿತೆ?
ಮೂಡಿತ್ಹೇಗೆ ಹೊಸ ವರುಷ?
ಕ್ಯಾಲೆಂಡರ್ ತಿರುವಿದೆವಷ್ಟೆ
ಬೆಡಗು ಬಿನ್ನಾಣ ತೊರೆದು ಬದುಕಬೇಕಷ್ಟೆ !!
ಶರಶ್ಚಂದ್ರ ತಳ್ಳಿ ಕುಪ್ಪಿಗುಡ್ಡ
ವೆಲ್ ಕಮ್ ಟು ೨೦೨೧
ಹುಟ್ಟಿದ ದಿನ ತಿದ್ದಿಕೊಳ್ಳಬಹುದು
ಮರಣದ ದಿನ ಬದಲಿಸಲುಂಟೇ!?
ಮೈಮೇಲಿನ ಬಟ್ಟೆಯ ಬದಲಿಸಿದಂತೆ ದೇಹದೊದಿಕೆಯನು ಕಳಚಲುಬಹುದೇ!?
ಗೋಡೆಯ ಮೇಲಿನ ದಿನದರ್ಶಿಕೆಯ ತೆರವುಮಾಡಿ ಮತ್ತೊಂದನು ನೇತುಹಾಕಬಹುದೇ ವಿನಃ ಕಾಲಚಕ್ರವನು ಪರ್ಯಾಯಗೊಳಿಸಲುಂಟೇ!?
ಮನುಜ ಈ ಜಗದ ಜಂಜಡದಲಿ ಏರುಪೇರುಗಳನೇರಿ ಸಿಹಿಕಹಿಗಳ ಸಮಚಿತ್ತದಲಿ ಸ್ವೀಕರಿಸಿ
ಬಂದಂತೆ ಬದುಕ ಬದಲಿಸಿ
ಹೊಂದಿಕೆಯಲಿ ಸಾಗಿದೊಡೆ
ಸ್ವರ್ಗವೆಂಬುದು ನಿನ್ನಡಿಯ ಕೆಳಗೆ
ಹುಡಿಯಾಗಿ
ಬಾಳು ಬಂಗಾರವಾಗುವುದು ಕಣಾ
ಅರಿತು ನಡೆ,ಸಂಪೂರ್ಣವಾಗಿ ತಿಳಿದು ನುಡಿ
ಪ್ರತಿಜೀವತಂತುವಿನ ಹೃದಯವೇ ದೇವನಿರುವ ಗರ್ಭಗುಡಿ..ನೀ ಅವನಿಗೆ ಅವ ನಿನಗೆ ನಮಿಸಿ ನಡಿ.
ಹೋದ ವರ್ಷದ ಚಿಂತೆ ಯಾಕ ಮಾಡುತಿ ನಡೆಯಬೇಕಾದದ್ದು ನಡೆದು ಹೋಗಿದೆ
ಆಗಬೇಕಾದ್ದು ಸಂಭವಿಸಲು ಆಗಮಿಸುತ್ತಿದೆ
ಅದನ್ನು ಬೀಳ್ಕೊಟ್ಟು
ಇದನ್ನು ಸ್ವಾಗತಿಸು
ಸಂಕಲ್ಪವೊಂದೆ ಸಾಧನೆ ಹೆಗ್ಗುರುತು
ಬದುಕಿದ್ದು ಸಾಧಿಸು
ದೈವವನು ನಂಬಿ ಆರಾಧಿಸು..
ಸಾವಿರದ ಹೆಸರಾಗಿಸು.
ರವಿ ಬಾಣಾವರ
ಇಪ್ಪತ್ತು ಇಪ್ಪತ್ತು ಆಪತ್ತು
ಇಪ್ಪತ್ತು ಇಪ್ಪತ್ತು ಮರೆಯದಿರು ಯಾವತ್ತೂ
ಮಾಡಿಬಿಟ್ಟಿತ್ತು ಕರಾಮತ್ತು ಜಗಕ್ಕೆಲ್ಲಾ ಆಪತ್ತು.
ಕೊರೋನಾ ಹೆಮ್ಮಾರಿ ಬಂದುಬಿಡ್ತು
ಸಾವು ನೋವು ಹೆಚ್ಚು ಮಾಡಿತು ಮನುಕುಲವೇ.. ಮರುಗಿಬಿಟ್ಟಿತು.
ವರ್ಷಧಾರೆ ಈ ವರ್ಷ ಹೆಚ್ಚಿಸಿತು ಪ್ರವಾಹ ಉಕ್ಕಿ ದಿಕ್ಕುತಪ್ಪಿಸಿತು ಕಣ್ಣೀರಲಿ ಜನರ ನಿದ್ದೆಗೆಡಿಸಿತು.
ಕಲಿಯುವ ಶಾಲೆ ಮುಚ್ಚಿಸಿತು
ಆಟಪಾಠದ ಶಿಕ್ಷಣ ವಂಚಿಸಿತು
ಆನ್ ಲೈನ್ ಕ್ಲಾಸು ಹೆಚ್ಚಿಸಿತು.
ಆರ್ಥಿಕ ಬೆಳವಣಿಗೆ ಕುಗ್ಗಿಸಿತು ವ್ಯಾಪಾರ, ವ್ಯವಹಾರ ತಗ್ಗಿಸಿತು
ಕರಾಳ ಮುಖವ ತೂರಿಸಿತು.
ಬದುಕಿಗೆ ಬೆಲೆಯನು ತಿಳಿಸಿತು
ಸಂಬಂಧಗಳ ದೂರ ಮಾಡಿಸಿತು
ಯಾರಿಗೆ ಯಾರಿಲ್ಲ ಎಂದು ಹೇಳಿತು.
ದುಃಖ ದುಮ್ಮಾನ ದೂರಾಗಿಸಿಲಿ ಹರುಷ ತರಲಿ ಬರುವ ವರುಷದಲಿ
ಸುಖ ಶಾಂತಿ ನಮ್ಮದಾಗಲಿ.
ಹೆಚ್ ಎಸ್ ಗೌಡರ ಶಿಕ್ಷಕರು