ಹಿಂಬದಿ ಸವಾರರಿಗೂ ಹೆಲ್ಮೆಟ್ ; ದುಡ್ಡು ಕೀಳುವ ಯೋಜನೆ -ಜನರ ಅಭಿಮತ
ದ್ವಿಚಕ್ರ ವಾಹನ ಸವಾರರಿಗೆ ಹೆಲ್ಮೆಟ್ ಧರಿಸಲು ಬಾರಿ ಬಾರಿ ಎಚ್ಚರಿಕೆ ನೀಡಿ, ದಂಡ ಹಾಕಿ ಬೇಸತ್ತ ರಾಜ್ಯ ಸರ್ಕಾರದ ರಸ್ತೆ ಸುರಕ್ಷತಾ ಸಮಿತಿಯು ಈಗ ಹೆಲ್ಮೆಟ್ ಕುರಿತಂತೆ ಹೊಸ ನಿಯಮವನ್ನು ಕಟ್ಟುನಿಟ್ಟಾಗಿ ಜಾರಿಗೆ ತರಲು ನಿರ್ಧರಿಸಿದೆ.
ಮೋಟಾರು ವಾಹನ ಕಾಯ್ದೆ ೧೯೮೮ ರ ಕಲಂ ೧೯೪ ಡಿ ಅನ್ವಯ ಸರ್ಕಾರದ ಅಧಿಸೂಚನೆ ಟಿಡಿ ೨೫೦, ಟಿಡಿಓ ೨೦೧೯ ರ ಪ್ರಕಾರ ದ್ವಿಚಕ್ರ ವಾಹನ ಸವಾರ ಹಾಗೂ ಹಿಂಬದಿ ಸವಾರ ಇಬ್ಬರೂ ಹೆಲ್ಮೆಟ್ ಧರಿಸದೇ ಇದ್ದಲ್ಲಿ ದಂಡ ಸಹಿತ ಮೂರು ತಿಂಗಳ ಕಾಲ ಲೈಸೆನ್ಸ್ ರದ್ದು ಮಾಡಲು ಸಮಿತಿ ಶಿಫಾರಸು ಮಾಡಿದೆಯೆಂಬುದಾಗಿ ರಾಜ್ಯ ಸರ್ಕಾರದ ಪ್ರಕಟಣೆ ತಿಳಿಸಿದೆ.
ಇನ್ನು ಮುಂದಾದರೂ ವಾಹನ ಸವಾರರು ಹೆಲ್ಮೆಟ್ ಧರಿಸುವರೆ ಎಂಬುದನ್ನು ಕಾದು ನೋಡಬೇಕಾಗಿದೆ. ಆದರೆ ಹಿಂಬದಿಯ ಸವಾರರಿಗೆ ಹೆಲ್ಮೆಟ್ ಕಡ್ಡಾಯ ಮಾಡಿದ್ದು ಜನರ ಆಕ್ರೋಶಕ್ಕೆ ಕಾರಣವಾಗಿದ್ದು ದಾರಿಯಲ್ಲಿ ಯಾರಾದರೂ ಲಿಫ್ಟ್ ಕೇಳಿದರೆ ಕೊಡಬೇಕಾ ಬೇಡವಾ ಎಂಬ ಸಮಸ್ಯೆ ಉದ್ಭವವಾಗುತ್ತದೆ.
ಕಾಯ್ದೆ ಮಾಡುವವರು ಸಾಧಕ ಬಾಧಕಗಳನ್ನು ಕೂಲಂಕುಷವಾಗಿ ಪರಿಶೀಲಿಸಿ ಮಾಡಬೇಕಾಗುತ್ತದೆ. ಹದಗೆಟ್ಟ ರಸ್ತೆಗಳಿಂದ ಸಾವಿರಾರು ಜನರು ಅಪಘಾತಗಳಿಂದಾಗಿ ಸಾಯುತ್ತಿದ್ದಾರೆ ಆದರೆ ಸರ್ಕಾರಕ್ಕೆ ಒಮ್ಮೆಲೆ ದ್ವಿಚಕ್ರ ವಾಹನ ಸವಾರರ ಜೀವದ ಬಗ್ಗೆ ಕಾಳಜಿ ಬಂದಿದ್ದು ವಿಚಿತ್ರವಾಗಿದೆ. ಜನರಿಂದ ದುಡ್ಡು ಹಿರಿಯುವ ಇನ್ನೊಂದು ಯೋಜನೆ ಇದಾಗಿದೆ ಎಂದು ಸಾಮಾನ್ಯ ಜನರು ಮಾತನಾಡಿಕೊಳ್ಳುತ್ತಿದ್ದಾರೆ.