ಮೂಡಲಗಿ: ಅಸಂಘಟಿತ ಕಾರ್ಮಿಕರು ವಿವಿಧ ಸಾಮಾಜಿಕ ಭದ್ರತಾ ಯೋಜನೆಗಳ ಪ್ರಯೋಜನಗಳನ್ನು ಪಡೆಯಲು ಕರ್ನಾಟಕ ರಾಜ್ಯದ 1.6 ಕೋಟಿಗೂ ಹೆಚ್ಚು ಅಸಂಘಟಿತ ಕಾರ್ಮಿಕರು ಇ-ಶ್ರಮ್ ಪೋರ್ಟಲ್ ನಲ್ಲಿ ನೋಂದಾಯಿಸಿಕೊಂಡಿದ್ದಾರೆ ಎಂದು ಕೇಂದ್ರ ಕಾರ್ಮಿಕ ಮತ್ತು ಉದ್ಯೋಗ ಖಾತೆ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಅವರು ಲಿಖಿತ ಉತ್ತರದಲ್ಲಿ ಮಾಹಿತಿ ನೀಡಿದ್ದಾರೆ ಎಂದು ರಾಜ್ಯಸಭಾ ಸಂಸದ ಈರಣ್ಣ ಕಡಾಡಿ ತಿಳಿಸಿದ್ದಾರೆ.
ನವದೆಹಲಿಯಲ್ಲಿ ನಡೆಯುತ್ತಿರುವ ಸಂಸತ್ತಿನ ಬಜೆಟ್ ಅಧಿವೇಶನದಲ್ಲಿ ನೋಂದಾಯಿತ ಕಾರ್ಮಿಕರಿಗೆ ಇ-ಶ್ರಮ್ ಪೋರ್ಟಲ್ ಮೂಲಕ ನೀಡುತ್ತಿರುವ ಕಲ್ಯಾಣ ಯೋಜನೆಗಳ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವರು ದೇಶದಲ್ಲಿ 30.68 ಕೋಟಿಗೂ ಹೆಚ್ಚು ಅಸಂಘಟಿತ ಕಾರ್ಮಿಕರು ಈಗಾಗಲೇ ಇ-ಶ್ರಮ್ ಪೋರ್ಟಲ್‌ನಲ್ಲಿ ನೋಂದಾಯಿಸಿಕೊಂಡಿದ್ದಾರೆ, ಅವರಲ್ಲಿ ಅರ್ಧಕ್ಕಿಂತ ಹೆಚ್ಚು ಜನರು (53.68%) ಮಹಿಳೆಯರು ಇದ್ದಾರೆ ಎಂದರು.
ನೋಂದಾಯಿಸಲಾದ ಅಸಂಘಟಿತ ಕಾರ್ಮಿಕರಿಗೆ ವಿವಿಧ ಕೇಂದ್ರ ಸಚಿವಾಲಯಗಳು/ಇಲಾಖೆಗಳ 13 ಸಾಮಾಜಿಕ ಭದ್ರತಾ ಯೋಜನೆಗಳನ್ನು ಈಗಾಗಲೇ ಸಂಯೋಜಿಸಲಾಗಿದೆ. ಪ್ರಧಾನ ಮಂತ್ರಿ ಬೀದಿ ವ್ಯಾಪಾರಿಗಳ ಆತ್ಮನಿರ್ಭರ್ ನಿಧಿ , ಪ್ರಧಾನ ಮಂತ್ರಿ ಸುರಕ್ಷಾ ಬಿಮಾ ಯೋಜನೆ , ಪ್ರಧಾನ ಮಂತ್ರಿ ಜೀವನ್ ಜ್ಯೋತಿ, ರಾಷ್ಟ್ರೀಯ ಕುಟುಂಬ ಪ್ರಯೋಜನ ಯೋಜನೆ, ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಕಾಯ್ದೆ, ಪ್ರಧಾನ ಮಂತ್ರಿ ಆವಾಸ್ ಯೋಜನೆ – ಗ್ರಾಮೀಣ , ಆಯುಷ್ಮಾನ್ ಭಾರತ್ – ಪ್ರಧಾನ ಮಂತ್ರಿ ಜನ ಆರೋಗ್ಯ ಯೋಜನೆ , ಪ್ರಧಾನ ಮಂತ್ರಿ ಆವಾಸ್ ಯೋಜನೆ – ನಗರ, ಪ್ರಧಾನ ಮಂತ್ರಿ ಮತ್ಸ್ಯ ಸಂಪದ ಯೋಜನೆ, ಪ್ರಧಾನ ಮಂತ್ರಿ ಕಿಸಾನ್ ಮಾನ್ ಧನ್ ಯೋಜನೆಗಳ ಪ್ರಯೋಜನಗಳನ್ನು ಪಡೆಯಲು ಅನುವು ಮಾಡಿಕೊಡುತ್ತಿದೆ ಎಂದರು.
ದೇಶದಲ್ಲಿ 2025 ರ ಮಾರ್ಚ್ 3 ರ ವೇಳೆಗೆ ಇ-ಶ್ರಮ ಪೋರ್ಟಲ್ ನಲ್ಲಿ ಕೃಷಿ 15,99,36,962, ಗೃಹ ಕಾರ್ಮಿಕರು 2,89,04,451, ಕರಕುಶಲ ವಸ್ತುಗಳು ಮತ್ತು ಕಾರ್ಪೆಟ್‌ಗಳು 23,19,790, ಮರಗೆಲಸ 2,03,583, ಚರ್ಮ ಕೈಗಾರಿಕೆ ಕೆಲಸಗಳು 60,69,527, ಜವಳಿ ಮತ್ತು ಕೈಮಗ್ಗ 2,04,164, ತಂಬಾಕು ಉದ್ಯಮ 26,89,300, ಉಡುಪು 2,00,36,504, ಗಣಿಗಾರಿಕೆ 4,49,069, ಬಂಡವಾಳ ಸರಕುಗಳು ಮತ್ತು ಉತ್ಪಾದನೆ 64,21,937, ಆಟೋಮೊಬೈಲ್ ಮತ್ತು ಸಾರಿಗೆ 82,06,116 ವೃತ್ತಿವಾರು ಅಸಂಘಟಿತ ಕಾರ್ಮಿಕರು ನೋಂದಾಯಿಸಿದ್ದಾರೆ ಎಂದರು.
ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯವು ಜನವರಿ 7, 2025 ರಂದು ಭಾಷಿಣಿ ವೇದಿಕೆಯನ್ನು ಬಳಸಿಕೊಂಡು ಇ-ಶ್ರಮ್ ಪೋರ್ಟಲ್‌ನಲ್ಲಿ ಈಗ ಕಾರ್ಮಿಕರಿಗೆ 22 ಭಾರತೀಯ ಭಾಷೆಗಳಲ್ಲಿ ಇ-ಶ್ರಮ್ ಪೋರ್ಟಲ್‌ನೊಂದಿಗೆ ಸಂವಹನ ನಡೆಸಲು ಅನುವು ಮಾಡಿಕೊಡುತ್ತದೆ, ಫೆಬ್ರವರಿ 24, 2025 ರಂದು ಇ-ಶ್ರಮ್ ಮೊಬೈಲ್ ಅಪ್ಲಿಕೇಶನ್ ಅನ್ನು ಪ್ರಾರಂಭಿಸಿದೆ. ಇ-ಶ್ರಮದಲ್ಲಿ ನೋಂದಾಯಿಸಿಕೊಳ್ಳಲು ಕಾರ್ಮಿಕರಲ್ಲಿ ಜಾಗೃತಿ ಮೂಡಿಸಲು ಸಾಮಾಜಿಕ ಮಾಧ್ಯಮ ವೇದಿಕೆಗಳನ್ನು ಸಹ ಬಳಸಲಾಗುತ್ತಿದೆ ಎಂದು ಸಚಿವರು ಉತ್ತರಿಸಿದ್ದಾರೆ ಎಂದು ಸಂಸದ ಈರಣ್ಣ ಕಡಾಡಿ ತಿಳಿಸಿದ್ದಾರೆ.