ಬಾಗಲಕೋಟೆ : ಜಿಲ್ಲೆಯ ಕಮತಗಿ ಪಟ್ಟಣದ ಪತ್ರಕರ್ತ ಪ್ರಕಾಶ ಗುಳೇದಗುಡ್ಡ ಅವರು ಕಳೆದ ಸೆಪ್ಟಂಬರ್ 5 ರಂದು ಹೃದಯಾಘಾತದಿಂದ ನಿಧನರಾಗಿದ್ದರು. ಮೃತರ ಕುಟುಂಬಕ್ಕೆ ಮುಖ್ಯಮಂತ್ರಿ ಪರಿಹಾರ ನಿಧಿಯಿಂದ 2 ಲಕ್ಷ ರೂ. ಪರಿಹಾರವನ್ನು ನೀಡಲಾಯಿತು.
ಬಾಗಲಕೋಟೆ ಮತಕ್ಷೇತ್ರದ ಶಾಸಕ ಎಚ್.ವೈ.ಮೇಟಿಯವರ ಮನವಿಯ ಮೇರೆಗೆ ಮುಖ್ಯಮಂತ್ರಿ ಸಿದ್ಧರಾಮಯ್ಯನವರು ಮೃತ ಪ್ರಕಾಶ ಗುಳೇದಗುಡ್ಡ ಕುಟುಂಬಕ್ಕೆ 2 ಲಕ್ಷ ರೂ. ಪರಿಹಾರವನ್ನು ಮುಖ್ಯಮಂತ್ರಿ ನಿಧಿಯಿಂದ ನೀಡಿದ್ದರು. ಜ.20ರಂದು ಬಾಗಲಕೋಟೆ ಜಿಲ್ಲಾಧಿಕಾರಿಗಳ ಖಾತೆಗೆ ಮುಖ್ಯಮಂತ್ರಿ ಪರಿಹಾರ ನಿಧಿ ಹಣ ಜಮೆ ಮಾಡಲಾಗಿತ್ತು. ಜಿಲ್ಲಾಧಿಕಾರಿ ಸಂಗಪ್ಪನವರು ಜ.23ರಂದು ತಮ್ಮ ಕಚೇರಿಗೆ ಪ್ರಕಾಶ ಗುಳೇದಗುಡ್ಡ ಪತ್ನಿ ಮಂಜುಳಾ ಪ್ರ.ಗುಳೇದಗುಡ್ಡ, ಪುತ್ರ ಶ್ರೀಶೈಲ, ಪುತ್ರಿ ಸ್ಪೂರ್ತಿ ಯವರನ್ನು ಕರೆಸಿ 2 ಲಕ್ಷ ರೂ. ಪರಿಹಾರದ ಚೆಕ್ ವಿತರಿಸಿದರು.
ಜಿಲ್ಲಾಧಿಕಾರಿ ಸಂಗಪ್ಪ ಹಾಗೂ ಜಿಲ್ಲಾ ಪಂಚಾಯ್ತಿ ಮುಖ್ಯಕಾರ್ಯನಿರ್ವಾಹಕ ಅಧಿಕಾರಿ ಶಶಿಧರ ಕುರೇರವರು ಚೆಕ್ ವಿತರಿಸಿ ಪ್ರಕಾಶ ಗುಳೇದಗುಡ್ಡ ಕುಟುಂಬಕ್ಕೆ ಧೈರ್ಯ ತುಂಬಿ, ಮಕ್ಕಳ ಶಿಕ್ಷಣಕ್ಕೆ ಏನಾದರೂ ಸೌಲಭ್ಯ ಬೇಕಾದರೆ ನೇರವಾಗಿ ಬಂದು ಸಂಪರ್ಕಿಸಿ ಎಂದು ಕುಟುಂಬಕ್ಕೆ ಧೈರ್ಯದ ಮಾತುಗಳನ್ನು ಹೇಳಿದರು.
ಜಿಲ್ಲಾ ವಾರ್ತಾಧಿಕಾರಿ ಕಸ್ತೂರಿ ಪಾಟೀಲ, ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಮಹೇಶ ಅಂಗಡಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜಗದೀಶ ಗಾಣಿಗೇರ, ಪತ್ರಕರ್ತ ಶ್ರೀಶೈಲ ಬಿರಾದಾರ, ಸಂಘದ ಉಪಾಧ್ಯಕ್ಷ ಸಂತೋಷ ಹೊದ್ಲೂರ, ಕಾರ್ಯಕಾರಿಣಿ ಸದಸ್ಯ ಅಭಯ ಮನಗೂಳಿ, ವಿರೇಶ ನಾಲತ್ತವಾಡ, ಪತ್ರಕರ್ತ ಸಂತೋಷ ಮುಧೋಳೆ, ಅನಿರುದ್ಧ ಗಲಗಲಿ ಇದ್ದರು.

