ಮೂಡಲಗಿ: ಸಹಕಾರಿ ನಗರ ಎಂದೇ ಖ್ಯಾತಿಯ ಮೂಡಲಗಿ ಪಟ್ಟಣದ ಶ್ರೀ ಶಿವಬೋಧರಂಗ ಅರ್ಬನ್ ಕೋ-ಆಪ್ ಕ್ರೆಡಿಟ್ ಸೊಸಾಯಟಿಯು 18 ಶಾಖೆಗಳನ್ನು ಹೊಂದಿ ಕಳೆದ ಮಾರ್ಚ ಅಂತ್ಯಕ್ಕೆ 5.10 ಕೋಟಿ ರೂ ಲಾಭ ಗಳಿಸಿ, ಶೇರುದಾರರಿಗೆ ಶೇ.16 ಲಾಭಾಂಶ ವಿತರಿಸಿ ಪ್ರಗತಿ ಪಥದತ್ತ ದಾಪುಗಾಲು ಹಾಕುತ್ತಿದೆ ಎಂದು ಸೊಸಾಯಟಿಯ ಉಪಾಧ್ಯಕ್ಷ ಪುಲಕೇಶ ಸೋನವಾಲಕರ ಹೇಳಿದರು.
ಅವರು ಪಟ್ಟಣದ ಈರಣ್ಣ ದೇವಸ್ಥಾನದ ಕೆ.ಎಚ್.ಸೋನವಾಲಕರ ಕಲ್ಯಾಣ ಮಂಟಪದಲ್ಲಿ ಜರುಗಿದ ಮೂಡಲಗಿ ಶ್ರೀ ಶಿವಬೋಧಂಗ ಅರ್ಬನ್ ಕೋ ಆಪ್ ಕ್ರೆಡಿಟ್ ಸೊಸಾಯಿಟಿಯ 28 ನೇ ವಾರ್ಷಿಕ ಸರ್ವ ಸಾಧಾರಣ ಸಭೆಯಲ್ಲಿ ಮಾತನಾಡಿ, ಸೊಸಾಯಿಟಿಯು ಹೆಮ್ಮರವಾಗಿ ಬೆಳೆಯಲು ಆಡಳಿತ ಮಂಡಳಿಯ ನಿಸ್ವಾರ್ಥ ಸೇವೆ, ಸಿಬ್ಬಂದಿ ವರ್ಗದವರ ಪ್ರಾಮಾಣಿಕ ದುಡಿಮೆ ಹಾಗೂ ತ್ವರಿತ ಸೇವೆ ಮತ್ತು ಶೇರುದಾರರ ಮತ್ತು ಸಾಲಗಾರರ ಸಹಕಾರ ಮುಖ್ಯ ಎಂದರು. ಸನ್ 1995ರಲ್ಲಿ 300 ಸದಸ್ಯರೊಂದಿಗೆ ಪ್ರಾರಂಭಗೊಂಡ ಸೊಸಾಯಿಟಿಯು ಇಂದು 14704 ಸದಸ್ಯರನ್ನೊಳಗೊಂಡು 5.25 ಕೋಟಿ ರೂ. ಶೇರು ಬಂಡವಾಳ ಹೊಂದಿದೆ. ಸಾರ್ವಜನಿಕ ವಲಯದಿಂದ 266 ಕೋಟಿ ರೂ. ಠೇವು ಸಂಗ್ರಹಿಸಿ, 166 ಕೋಟಿ ರೂ. ಶೇರುದಾರರಿಗೆ ವಿವಿಧ ರೀತಿಯ ಸಾಲದ ಸೌಲಭ್ಯಗಳನ್ನು ನೀಡಿದೆ. ಠೇವಣಿದಾರರ ಭದ್ರತೆಗಾಗಿ 85 ಕೋಟಿ ರೂ ಇತರೆ ಬ್ಯಾಂಕುಗಳಲ್ಲಿ ಠೇವಣಿ ಮಾಡಲಾಗಿದೆ. 316 ಕೋಟಿ ರೂ. ದುಡಿಯುವ ಬಂಡವಾಳ ಹೊಂದಿ 1138 ಕೋಟಿ ರೂ. ವಾರ್ಷಿಕ ವಹಿವಾಟು ಮಾಡಿರುವದು ಹೆಮ್ಮೆಯ ಸಂಗತಿ ಎಂದ ಅವರು ಎಲ್ಲ ಶಾಖೆಗಳು ಪ್ರಗತಿಪಥದತ್ತ ನಡೆದಿವೆ. ರಾಮದುರ್ಗ ಶಾಖೆಯು ಸ್ವಂತ ಕಟ್ಟಡ ಹೊಂದಿದೆ ಎಂದರು.
ಬೆಳಗಾವಿ ಶಾಖಾ ಸಲಹಾ ಸಮಿತಿಯ ಸದಸ್ಯ ಪಾಂಡುರಂಗ ವ್ಹಿ.ಮಾಸ್ತಿ, ರಬಕವಿ ಶಾಖೆಯ ಶಾಖಾ ಸಲಹಾ ಸಮಿತಿಯ ಸದಸ್ಯ ಶಿವಾನಂದ ಎಮ್. ದಾಶಾಳ ಸೊಸಾಯಿಟಿಯ ಪ್ರಗತಿ ಕುರಿತು ಮಾತನಾಡಿದರು.
ಪ್ರಧಾನ ವ್ಯವಸ್ಥಾಪಕರಾದ ಸುರೇಶ ನಾಶಿ ಅಢಾವೆ ಪತ್ರಿಕೆ, ಹಣಮಂತ ಕುಂಬಾರ ಲಾಭ-ಹಾನಿ ಪತ್ರಿಕೆ, ಕೆ.ಜಿ.ಕುದರಿ ಅಂದಾಜು ಲಾಭ ಹಾನಿ ಪತ್ರಿಕೆ, ಎಚ್.ವಾಯ್ ಬಾಡದ ಲಾಭ-ವಿಂಗಡನೆ ಪತ್ರಿಕೆ ಓದಿ ಅನುಮೋದನೆ ಪಡೆದುಕೊಂಡರು.
ಸೊಸಾಯಿಟಿಯ ಅಧ್ಯಕ್ಷ ಆರ್.ಕೆ.ಕುರಬಗಟ್ಟಿ ಅಧ್ಯಕ್ಷತೆ ವಹಿಸಿದ್ದರು.
ನಿರ್ದೇಶಕರಾದ ರವೀಂದ್ರ ಸೋನವಾಲ್ಕರ, ಅಶೋಕ ಹೊಸೂರ, ಸುಭಾಸ ಸೋನವಾಲ್ಕರ, ಬಸವರಾಜ ಗುಲಗಾಜಂಬಗಿ, ಡಾ|| ಎಸ್.ಎಸ್.ದಂಡಪ್ಪನವರ, ವಿದ್ಯಾವತಿ ಸೋನವಾಲಕರ, ಶಾರದಾ ಗುಲಗಾಜಂಬಗಿ, ಗಂಗವ್ವಾ ಸಣ್ಣಪ್ಪನವರ, ಮಂಜುಳಾ ಬಳಿಗಾರ, ಶಿವಬಸು ಬೂದಿಹಾಳ, ಹಣಮಂತ ಸಣ್ಣಕ್ಕಿ, ಗಣ್ಯರಾದ ಶಂಕರ ಸೋನವಾಲಕರ, ರಾಮಚಂದ್ರಪ್ಪ. ಸೋನವಾಲಕರ ಹಾಗೂ ಎಲ್ಲ ಶಾಖೆಗಳ ಅಧ್ಯಕ್ಷರು, ಸದಸ್ಯರು ಉಪಸ್ಥಿತರಿದ್ದರು.
ಸೊಸಾಯಟಿಯ ನಿರ್ದೆಶಕ ಡಾ. ಶಂಕರ ಎಸ್ ದಂಡಪ್ಪನವರ ಸ್ವಾಗತಿಸಿದರು. ವೆಂಕಟೇಶ ಬಾಲರಡ್ಡಿ ನಿರೂಪಿಸಿದರು.
ಪುಲಕೇಶ ಆರ್ ಸೋನವಾಲ್ಕರ ವಂದಿಸಿದರು.