ಪ ರಸಗಡ ನಾಟಕೋತ್ಸವ ಎರಡನೆಯ ನಾಟಕ ‘ಹಾಲು ಬಟ್ಟಲದೊಳಗಿನ ಪಾಲು’
ಗ್ರಾಮೀಣ ಅನಾಥ ಹೆಣ್ಣು ಮಗಳು ದುಡಿಮೆಗೆ ಬರುವ ಕತೆ. ಅಲ್ಲಿ ರಸ್ತೆಯ ಡಾಂಬರು ಹಾಕುವ ಹುಸೇನ್ ನಡುವಿನ ಪ್ರೇಮ ಜೊತೆಗೆ ವೈವಾಹಿಕ ಜೀವನದ ನಡುವಿನ ಉಳ್ಳವರು ಹಾಗೂ ಇಲ್ಲದವರ ಜೀವನ ಸಂಘರ್ಷ.ಕಥಾವಸ್ತುವನ್ನು ಈ ನಾಟಕ ಒಳಗೊಂಡಿದೆ.
ಜಾತಿ.ಧರ್ಮದ ನಡುವಿನ ತಿಕ್ಕಾಟದ ನಡುವೆ ಹುಸೇನನ ನಿಧನ. ನಂತರ ರಂಗಮ್ಮ ಪುಟ್ಟ ಹೊಟೇಲ್ ನಡೆಸುವ ಮೂಲಕ ಹೊಟೇಲ್ ಗೆ ಬರುವ ಗ್ರಾಹಕರ ನೋವಿಗೆ ಸ್ಪಂದಿಸುವ ರೀತಿ. ಹೆಣ್ಣು ಬರೀ ಕಾಮದ ವಸ್ತುವಲ್ಲ ಆಕೆಯ ಭಾವನೆಗಳಿಗೆ ಬೆಲೆಯಿದೆ ಎಂಬ ಬದುಕಿನ ದುರ್ಗಮ ದಾರಿಗಳ ಪಯಣದ ಗಳಿಗೆಗಳನ್ನು ಕಥೆಗಾರ ಕಥನವಾಗಿಸಿದ್ದು ಮನಸ್ಸಿಗೆ ತಟ್ಟುವ ಘಟನೆಗಳು ಇಲ್ಲಿ ಜರುಗುವ ಮೂಲಕ ಹಾಲು ಬಟ್ಟಲದೊಳಗಿನ ಪಾಲು ಮನ ಕಲುಕುತ್ತದೆ.,
ಹುಸಿ ಭಾವುಕತೆ, ಜನಪ್ರಿಯ ಗ್ರಹೀತಗಳಿಗೆ ಒಳಗಾಗದೆ ಬದುಕಿನ ಘೋರ ವಾಸ್ತವವನ್ನು ಎದುರಾಗಿಸುವಲ್ಲಿ ಈ ಕಥೆ ಪರಿಣಾಮಕಾರಿಯಾಗಿದೆ.ಅದರಲ್ಲೂ ಝಕೀರ ನದಾಫ್ ಅವರ ನಿರ್ದೇಶನ.ಕಥೆಗೆ ಪೂರಕವಾಗಿ ಬರುವ ಹಿನ್ನೆಲೆ ಸಂಗೀತ.ಹಾಗೂ ಪ್ರತಿಯೊಂದು ಪಾತ್ರಗಳು ಮನಸ್ಸು ಕಲಕುವ ಸನ್ನಿವೇಶದಲ್ಲಿ ಪರಿಣಾಮ ಬೀರುತ್ತವೆ.
ರಂಗಮ್ಮ ನ ಬಡತನದ ಬದುಕಿನ ಚಿತ್ರಣ ಹೊಟೇಲ್ ಗೆ ಬಂದು ಹೋಗುವವರ ಜೊತೆಗೆ ಅವಳ ಭಾವನಾತ್ಮಕ ನಂಟು. ಗಂಡ ಹುಸೇನ್ ತೀರಿ ಹೋದರೂ ತನ್ನ ಮನುಷ್ಯನ ಅಂತಃಕರಣವನ್ನು ತನ್ನ ಪಾವಿತ್ರ್ಯತೆ ಜೊತೆಗೆ ಸಾಗುವ ಅವಳ ಜೀವನದ ರೀತಿ ಯನ್ನು ತಾನು ಸಾಕಿದ ನಾಯಿಗೆ ಹಸುಗೂಸನ್ನು ಕಳೆದು ಕೊಂಡ ರಂಗಮ್ಮ ತನ್ನ ಎದೆ ಹಾಲನ್ನು ಬಟ್ಟಲದೊಳಗಿಟ್ಟು ನಾಯಿಗೆ ಕುಡಿಸುವ ಮೂಲಕ ನಾಯಿಯನ್ನು ಜೋಪಾನ ಮಾಡುವ ದೃಶ್ಯ ಭಾವನಾತ್ಮಕ ವಾಗಿ ಮೂಡಿ ಬಂದಿದೆ. ನಾಟಕದಲ್ಲಿ ಮಾತೃ ಹೃದಯದ ಭಾವವನ್ನು ಹೃದಯಸ್ಪರ್ಶಿ ಯಾಗಿ ಚಿತ್ರಿಸಿರುವ ರೀತಿ ಅದ್ಭುತ.
ಪ್ರತಿಯೊಬ್ಬರ ಬದುಕು ಬೇರೆ ಬೇರೆಯಾಗಿದ್ದರೂ ಕಥಾದ್ರವ್ಯವಾಗಬಲ್ಲ ಗಾಢ ಅನುಭವಗಳು ಬಹಳಷ್ಟು ಸಲ ಅನನ್ಯವಾಗೇನೂ ಇರುವುದಿಲ್ಲ. ಅನನ್ಯತೆ ಬರುವುದು ನಾವು ಈಗಾಗಲೇ ಕಂಡು ಕೇಳಿರುವ ಅನುಭವಗಳಿಗೂ ಇರಬಹುದಾದ ಇನ್ನಷ್ಟು ಮಗ್ಗುಲುಗಳನ್ನು ಹೊಸ ನುಡಿಗಟ್ಟುಗಳಲ್ಲಿ ಹೊಸ ಪ್ರತಿಮೆಗಳಲ್ಲಿ ಹಿಡಿದಿಟ್ಟು ಸಾವಧಾನವಾಗಿ ಕತೆ ಹೇಳುವ ಬಗೆಯಲ್ಲಿ.
ಚಳ್ಳೂರರ ಸಂಕಲನದಲ್ಲಿರುವ ಈ ಕತೆಯನ್ನು ಝಕೀರ ರಂಗ ಪ್ರಯೋಗಕ್ಕೆ ಆಯ್ದುಕೊಂಡು ಮನಕಲಕುವ ದೃಶ್ಯಗಳನ್ನು ಜೋಡಿಸಿ ನಿರ್ದೇಶನದಲ್ಲಿ ತಾವೊಬ್ಬ ಸದಭಿರುಚಿಯ ನಿರ್ದೇಶಕ ಎನ್ನುವ ದನ್ನು ಸಾಬೀತು ಪಡಿಸಿರುವರು.ಅವರ ನಿರ್ದೇಶನದಲ್ಲಿ ಇಂಥ ಕುಶಲ ಕಸುಬುದಾರಿಕೆ ಕಾಣುತ್ತದೆ. ಈ ಕತೆಯಲ್ಲಿ ಭಾಷೆಯ ಹದ ಮತ್ತು ಕತೆಗೆ ತಕ್ಕುದಾದ ಬಂಧಗಳನ್ನು ನಿರ್ದೇಶಕ ಝಕೀರ ನದಾಫ ನವಿರಾಗಿ ನಿರೂಪಿಸಿರುವರು.
ರಂಗಮ್ಮ ತನ್ನ ‘ಕನಸಿನ ವಾಸನೆ’ಯಲ್ಲಿ ಮಿರ್ಚಿ ಮಂಡಾಳ ಮಾರುತ್ತ ಯಾರ ಹಂಗಲ್ಲೂ ಬೀಳದೆ ಯಾರ ಗೋಜಿಗೂ ಹೋಗದೆ “ಜಾಲಿ ಮರದಂತೆ” ಬದುಕುತ್ತಿರುವ ಸಂದರ್ಭದಲ್ಲಿ ; ಅವಳ ಮಿರ್ಚಿಯ ಪರಿಮಳ ಅವಳಂತೆ ನಿಗೂಢವಾಗಿಯೇ ಉಳಿದಿರುವುದು. ಅದರ ರಹಸ್ಯ ಇರುವುದು ಅವಳಲ್ಲಿ ಮಡುಗಟ್ಟಿದ ಅಪಾರ ದುಃಖವೇ ಏನೋ ಎಂಬಂತೆ ತನ್ನ ಕಾಯಕದಲ್ಲಿ ನಿರತಳಾಗಿದ್ದವಳ ಮೇಲೆ ನಡೆದ ಕಿರುಕುಳದಿಂದಾಗಿ ಕಟ್ಟೆಯೊಡೆದು ನೀರು ಹರಿಯತೊಡಗಿದ ನಂತರದ ದಿನಗಳಲ್ಲಿ ಅವಳ ಮಿರ್ಚಿಗೆ ಮೊದಲಿನ ರುಚಿಯಿಲ್ಲ. ಅವಳ ಮೈಮೇಲೆ ಕೈಹಾಕಿ ಅವಳಿಂದ ಹೊಡೆಸಿಕೊಂಡ ವಿಕೃತ ಬುದ್ಧಿಯ ಲಚುಮ — ಇನ್ನೂ ಯೌವನ ಮೀರಿರದ — ಗಂಡನನ್ನು ಬೇಗ ಕಳೆದುಕೊಂಡ — ಅವಳು ಹುಟ್ಟಿದ ಮಗು ಎರಡೇ ದಿನಗಳಲ್ಲಿ ತೀರಿಹೋದ — ರಂಗಮ್ಮನ ಅದುಮಿಟ್ಟ ತಾಯ್ತನದ ಬಯಕೆ ಮೊದಲಾದ ಭಾವಗಳನ್ನು ಈ ನಾಟಕ ನಿರೂಪಿಸುವ ರೀತಿ ಅನನ್ಯ.ಇಂಥಹ ಸಂದರ್ಭದಲ್ಲಿ
ಶ್ರೀಮಂತ ವ್ಯಕ್ತಿ ಚಂದ್ರಪ್ಪ (ಶಿವಾನಂದ ತಾರೀಹಾಳ)
ನ ಕಾಮುಕತೆ.ಯುವಕನ ಮೋಹ ಅವು ಹೆಬ್ಬಾವಾಗಿ ಅವಳ ಕಾಲಿಗೆ ಸುತ್ತಿಕೊಳ್ಳುತ್ತವೆ. ಇತ್ತ ತನ್ನ ಅತಿ ಕಾಮುಕತೆಯ ದೆಸೆಯಿಂದ ಕೊನೆಗೊಮ್ಮೆ ಮಣ್ಣುಮುಕ್ಕಿದ ಲಚುಮನ ತಪ್ಪನರಿವು ಕಡೆಗೆ ರಂಗಮ್ಮನ ಕಾಲಿಗೆ ಬಿದ್ದು ಅವಳು ಇಟ್ಟ ಹಾಲಿನ ಬಟ್ಟಲನ್ನು ಎತ್ತಿ ಕುಡಿದಾಗಲೇ ಆ ವಾಸನೆ ಹೋಗುವುದು. ಬಟ್ಟಲಿನಲ್ಲಿ ಹರಿಯುವ ಅವಳ ಎದೆಯ ಹಾಲು ಅವಳಿಗೆ ವೇದನೆ ಒದಗಿಸಿದರೆ, ಅದೇ ಹಾಲು ಇವನ ಪಾಪಗಳನ್ನು ತೊಳೆದು ಮುಗ್ಧತೆ ತಂದುಕೊಡುವುದು. ಇಬ್ಬರಿಗೂ ಆದ ಕೆಟ್ಟ ಅನುಭವಗಳಿಗೊಂದು ಮುಕ್ತಾಯ ಸಿಕ್ಕುವುದು.ಕತೆಯ ಅಂತ್ಯ.
ಕತೆಯಲ್ಲಿ ರಂಗಮ್ಮನ ಪಾತ್ರದ ಚಿತ್ರಣ ಗಟ್ಟಿಯಾಗಿದೆ, ಲಚುಮನ ಪಾತ್ರ . ಅವನಲ್ಲಿನ ಮಾರ್ಪಾಟು, ಅವನ ಬದಲಾದ ನಡೆವಳಿಕೆಗಳು ಪ್ರೇಕ್ಷಕರ ಮೇಲೆ ಪರಿಣಾಮ ಬೀರುತ್ತದೆ.ಇಲ್ಲಿ ವಾಸ್ತವವಾದದ ಸಮರ್ಪಕ ಒಳಗೊಳ್ಳುವಿಕೆಯಿಂದ ಕಟ್ಟಿದ ಒಳ್ಳೆಯ ಕಥನವಿದೆ, ಈ ಎರಡು ವ್ಯತಿರಿಕ್ತ ಪಾತ್ರಗಳನ್ನು ಎದುರು ಬದುರಾಗಿ ನಿಲ್ಲಿಸುವ ಝಕೀರ ಅವರ ನಿರ್ದೇಶನ ಪ್ರಯತ್ನ ಇಲ್ಲಿ ನೈಜ ಜೀವನದ ಚಿತ್ರಣ ಇಂದಿಗೂ ಕಾಮವಾಸನೆ ಹಿಡಿದು ಜೀವನ ನಡೆಸುವ ಕಟುಕರ ನಡುವೆ ಬದಲಾವಣೆ ಜಗದ ನಿಯಮ ಎಂಬುದನ್ನು ಪಶ್ಚಾತ್ತಾಪಪಟ್ಟು ಕ್ಷಮೆ ಕೇಳುವ ರೀತಿ ಕೊನೆಗೊಂದು ಕಥೆಯನ್ನು ಅಂತ್ಯ ಗೊಳಿಸುವ ರೀತಿ ಹಾಲು ಬಟ್ಟಲದೊಳಗಿನ ಪಾಲು ವಿನಲ್ಲಿ ನಿರೂಪಿತವಾಗಿದೆ. ನಾಟಕದ ಕೊನೆಯ ದೃಶ್ಯಗಳ ಸಂಯೋಜನೆ ನಿಜಕ್ಕೂ ಭಾವನೆಗಳನ್ನು ನವಿರಾಗಿ ನಿರೂಪಿಸಿವೆ ಎಂದರೆ ಅತಿಶಯೋಕ್ತಿ ಅಲ್ಲ. ಇಂತಹ ಕಥೆಗಳನ್ನು ನಾಟಕದ ಮೂಲಕ ಕಟ್ಟಿಕೊಡುವ ರೀತಿ ಭಾವನಾತ್ಮಕ ನಿರ್ದೇಶಕನಿಗೆ ಮಾತ್ರ ಸಾಧ್ಯ ಎಂದು ನಿರೂಪಿಸಿದ ಝಕೀರ ಅವರ ಈ ಪ್ರಯತ್ನ ಕ್ಕೆ ಹ್ಯಾಟ್ಸಪ್ ಹೇಳಲೇಬೇಕು.ಈ ನಾಟಕದಲ್ಲಿ ಅಭಿನಯಿಸಿದ ವಿವಿಧ ಕಲಾವಿದರ ಸಂಕ್ಷಿಪ್ತ ಪರಿಚಯ
ರಂಗಮ್ಮ – ಸೀಮಾ ವನಕಿ. ಚಂದ್ರಪ್ಪ- ಶಿವಾನಂದ ತಾರಿಹಾಳ.
ಮಾಬು – ಗೋಪಾಲ ಫಾಸಲಕರ.
ಸಂಗಪ್ಪ – ಕಲಂದರ ಬೀಳಗಿ.
ರುದ್ರಪ್ಪ – ಶ್ರೀನಿವಾಸ ಗದಗ
ಚಂದ್ರ – ನಿವೇದಿತಾ ಗೋರಬಾಳ.
ತಮ್ಮಯ್ಯ- ಗಣೇಶ್ ಬಜೇರಿ.
ಕುಡುಕ – ಚಂದ್ರು ಪಠಾಣಿ. ಹುಸೇನಿ – ಸಿದ್ದು ಕಟಿಗೆನ್ನವರ.
ಲಕ್ಕ್ಯಾ – ನಾರಾಯಣ ಗೋಂದಳಿ.
ಮೇಳದಲ್ಲಿ ಹಾಡು ದೃಶ್ಯಕ್ಕೆ ಪೂರಕವಾಗಿ ಮೂಡಿ ಬಂದವು. ಈ ಕಲಾವಿದರು ಅಭಿಷೇಕ್ ಗೋರಬಾಳ ,ಮಂಜುನಾಥ ಬೆಳವಡಿ. ಲೋಹಿತ ಪೂಜಾರ,ಮೊದಲಾದವರು ಭಾಗವಹಿಸಿ ಹಾಡುಗಳನ್ನು ಹಾಡುವ ಮೂಲಕ ನಾಟಕಕ್ಕೆ ಹೊಸ ಚೇತನ ತುಂಬಿದರು. ಸಂಗೀತ ಸಂಯೋಜನೆ ಕಾಶಪ್ಪ ಜಂಬುದ್ವೀಪ.ಮಾಡಿದ್ದು ಹಿನ್ನೆಲೆ ಸಂಗೀತ ಕೂಡ ಮನಸೂರೆಗೊಂಡಿತು. ನಾನು ನೋಡಿದ ಇತ್ತೀಚಿನ ವರ್ಷಗಳಲ್ಲಿ ಒಂದು ಕಲಾತ್ಮಕ ನಾಟಕವಿದು
ವೈ ಬಿ ಕಡಕೋಳ
ಶಿಕ್ಷಕ ಸಾಹಿತಿಗಳು
ಮಾರುತಿ ಬಡಾವಣೆ. ಸಿಂದೋಗಿ ಕ್ರಾಸ್ ಮುನವಳ್ಳಿ 591117
ಸವದತ್ತಿ ತಾಲೂಕು ಬೆಳಗಾವಿ ಜಿಲ್ಲೆ