ಮೂಡಲಗಿ: ಪ್ರಧಾನ ಮಂತ್ರಿ ಸೂರ್ಯಘರ್ ಮುಫ್ತ್ ಬಿಜ್ಲಿ ಯೋಜನೆಯಡಿ ಬೆಳಗಾವಿ ಜಿಲ್ಲೆಯ ಒಟ್ಟು 25,778 ಅರ್ಜಿಗಳು ಸಲ್ಲಿಕೆಯಾಗಿದ್ದು, ಇಲ್ಲಿಯವರೆಗೆ ಈ ಯೋಜನೆಡಿಯಲ್ಲಿ 681 ಮನೆಗಳ ಮೇಲೆ ಸೋಲಾರ್ ಅಳವಡಿಕೆ ಮಾಡಲಾಗಿದೆ ಎಂದು ಕೇಂದ್ರ ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವ ಪ್ರಹ್ಲಾದ ಜೋಶಿ ಅವರು ಲಿಖಿತ ಉತ್ತರದಲ್ಲಿ ಮಾಹಿತಿ ನೀಡಿದ್ದಾರೆ ಎಂದು ರಾಜ್ಯಸಭಾ ಸಂಸದ ಈರಣ್ಣ ಕಡಾಡಿ ಹೇಳಿದರು.
ನವದೆಹಲಿಯಲ್ಲಿ ನಡೆಯುತ್ತಿರುವ ಸಂಸತ್ತಿನ ಚಳಿಗಾಲ ಅಧಿವೇಶನದಲ್ಲಿ ಬೆಳಗಾವಿ ಜಿಲ್ಲೆಯಲ್ಲಿ ಪಿಎಂ ಸೂರ್ಯ ಘರ್ ವಿದ್ಯುತ್ ಯೋಜನೆಯಡಿ ಸಾಧಿಸಿದ ಪ್ರಗತಿ ಹಾಗೂ ಈ ಯೋಜನೆಯಲ್ಲಿ ಸ್ವೀಕರಿಸಿದ ಮತ್ತು ಅನುಮೋದಿಸಲಾದ ಅರ್ಜಿಗಳ ಸಂಖ್ಯೆ ಕುರಿತು ಕೇಳಿದ ಪ್ರಶ್ನೆಗೆ ಲಿಖಿತ ಉತ್ತರ ನೀಡಿದ ಸಚಿವರು ಕರ್ನಾಟಕ ರಾಜ್ಯದಲ್ಲಿ 14,151 ಮನೆಗಳಲ್ಲಿ ಸೋಲಾರ್ ಅಳವಡಿಸಲಾಗಿದ್ದು 22,313 ಕುಟುಂಬಗಳಿಗೆ ಪ್ರಯೋಜನವಾಗಿದೆ. ದೇಶಾದ್ಯಂತ ಒಟ್ಟು 18,72,499 ಮನೆಗಳ ಮೇಲೆ ಸೋಲಾರ್ ಅಳವಡಿಕೆ ಮಾಡಲಾಗಿದೆ ಇದರಿಂದ 23,47,694 ಕುಟುಂಬಗಳಿಗೆ ಪ್ರಯೋಜನವಾಗಿದೆ. ಕರ್ನಾಟಕ ರಾಜ್ಯದಲ್ಲಿ ಒಟ್ಟು 25,675.39 ಮೆಗಾವ್ಯಾಟ್ ಸಾಮರ್ಥ್ಯದ ನವೀಕರಿಸಬಹುದಾದ ಇಂಧನ ಸ್ಥಾವರಗಳನ್ನು ಸ್ಥಾಪಿಸಲಾಗಿದೆ, ಇದು ದೇಶಾದ್ಯಂತ ಸ್ಥಾಪಿಸಲಾದ ಒಟ್ಟು 2,50,643.45 ಮೆಗಾವ್ಯಾಟ್ ಸಾಮರ್ಥ್ಯದ ನವೀಕರಿಸಬಹುದಾದ ಇಂಧನ ಸ್ಥಾವರಗಳಲ್ಲಿ ಸುಮಾರು 10.24% ರಷ್ಟಿದೆ. 2026-27 ರ ವೇಳೆಗೆ ಪಿ.ಎಂ.ಎಸ್.ಜಿ-ಎಂ.ಬಿ.ವಾಯ್ ಯೋಜನೆಯಡಿ ದೇಶಾದ್ಯಂತ ಒಂದು ಕೋಟಿ ಮನೆಗಳಿಗೆ ಸೋಲಾರ್ ಅಳವಡಿಕೆ ಗುರಿಯನ್ನು ಹಾಕಿಕೊಳ್ಳಲಾಗಿದೆ ಎಂದರು.
ಸೌರ ಉದ್ಯಾನವನಗಳು ಮತ್ತು ಅಲ್ಟ್ರಾ-ಮೆಗಾ ಸೌರಶಕ್ತಿ ಯೋಜನೆಗಳ ಅಭಿವೃದ್ಧಿ ಯೋಜನೆಯಲ್ಲಿ, 2000 ಮೆಗಾವ್ಯಾಟ್ ಸಾಮರ್ಥ್ಯದ ಪಾವಗಡ ಸೌರ ಉದ್ಯಾನವನ ಮತ್ತು ಅದರ ವಿದ್ಯುತ್ ಸ್ಥಳಾಂತರಿಸುವ ಮೂಲಸೌಕರ್ಯದ ಅಭಿವೃದ್ಧಿಗಾಗಿ ಒಟ್ಟು ರೂ 351.94 ಕೋಟಿಗಳನ್ನು ಕೇಂದ್ರ ಹಣಕಾಸು ನೆರವು ಬಿಡುಗಡೆ ಮಾಡಲಾಗಿದೆ ಎಂದು ಸಚಿವರು ಲಿಖಿತ ಉತ್ತರದಲ್ಲಿ ಮಾಹಿತಿ ನೀಡಿದ್ದಾರೆ ಎಂದು ಸಂಸದ ಈರಣ್ಣ ಕಡಾಡಿ ತಿಳಿಸಿದ್ದಾರೆ.

