ಎಲ್ಲ ಪರೀಕ್ಷಾ ಸಿದ್ಧತೆ ಪೂರ್ಣ ; ಯಾವುದೇ ಭಯವಿಲ್ಲದೆ ಪರೀಕ್ಷೆ ಬರೆಯಿರಿ – ಬಿಇಓ ಮನ್ನಿಕೇರಿ
ಮೂಡಲಗಿ- ಮಾರ್ಚ್ ೨೧ ರಂದು ನಡೆಯಲಿರುವ ಎಸ್ಎಸ್ಎಲ್ ಸಿ ವಿದ್ಯಾರ್ಥಿಗಳ ಪರೀಕ್ಷೆಗಾಗಿ ಮೂಡಲಗಿ ವಲಯದ ಎಲ್ಲಾ ೨೧ ಪರೀಕ್ಷಾ ಕೇಂದ್ರಗಳಲ್ಲಿ ಎಲ್ಲ ರೀತಿಯ ಸಿದ್ಧತೆ ಕೈಗೊಳ್ಳಲಾಗಿದ್ದು ವಿದ್ಯಾರ್ಥಿಗಳು ಯಾವುದೇ ಆತಂಕ ಭಯವಿಲ್ಲದೆ ನಿರಾಳತೆಯಿಂದ ಪರೀಕ್ಷೆ ಬರೆಯಬಹುದು ಎಂದು ಮೂಡಲಗಿ ಕ್ಷೇತ್ರ ಶಿಕ್ಷಣಾಧಿಕಾರಿ ಅಜಿತ ಮನ್ನಿಕೇರಿ ಹೇಳಿದರು.
ನಗರದ ಬಿಇಓ ಕಚೇರಿಯಲ್ಲಿ ಎಸ್ಎಸ್ಎಲ್ ಸಿ ಪರೀಕ್ಷಾ ಸಿದ್ಧತೆಗಳ ಕುರಿತು ಪತ್ರಕರ್ತರಿಗೆ ಮಾಹಿತಿ ನೀಡುತ್ತ ಮಾತನಾಡಿದ ಅವರು, ನಮ್ಮ ವಲಯದಲ್ಲಿ ಒಟ್ಟು ೭೦೫೦ ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದು ಅವರಲ್ಲಿ ಬಾಲಕರು ೩೬೯೨, ಬಾಲಕಿಯರ ಸಂಖ್ಯೆ ೩೩೧೮ ಒಟ್ಟು ೨೧ ಪರೀಕ್ಷಾ ಕೇಂದ್ರಗಳಲ್ಲಿ ಬರೆಯಲಿದ್ದಾರೆ ಎಂದರು.
ಎಲ್ಲಾ ಕೇಂದ್ರಗಳಲ್ಲಿ ಈಗಾಗಲೇ ಮೂಲಭೂತ ಸೌಲಭ್ಯಗಳ ಲಭ್ಯತೆಯನ್ನು ದೃಢೀಕರಿಸಿಕೊಳ್ಳಲಾಗಿದೆ ನಕಲು ರಹಿತ ಪಾರದರ್ಶಕ ಪರೀಕ್ಷೆ ನಿರ್ವಹಣೆಗಾಗಿ ಸಿಬ್ಬಂದಿಗಳಿಗೆ ಪೂರ್ವಭಾವಿ ಸಭೆ ಜರುಗಿಸಿದೆ. ಎಲ್ಲಾ ಕೇಂದ್ರಗಳಲ್ಲಿ ಸಿಸಿ ಟಿವಿಗಳನ್ನು ಅಳವಡಿಸಿ ವೆಬ್ ಕಾಸ್ಟಿಂಗ್ ಮಾಡಲು ವ್ಯವಸ್ಥೆ ಮಾಡಿದೆ. ಇಲ್ಲಿ ನಡೆಯುವ ಪರೀಕ್ಷೆಯ ದೃಶ್ಯಾವಳಿಗಳನ್ನು ಜಿಲ್ಲಾ ಮಟ್ಟ ಹಾಗೂ ತಾಲೂಕು ಮಟ್ಟದಲ್ಲಿ ವೀಕ್ಷಕರು ಗಮನಿಸುತ್ತಾರೆ ಎಂದರು.
ಬಿಸಿಲು ಬಹಳ ಇರುವುದರಿಂದ ಮಕ್ಕಳಿಗೆ ತೊಂದರೆಯಾಗದಂತೆ ಓಆರ್ ಎಸ್ ಪೊಟ್ಟಣಗಳನ್ನು, ಅಗತ್ಯ ಔಷಧಿಗಳನ್ನು ಮತ್ತು ಹೆಣ್ಣು ಮಕ್ಕಳಿಗೆ ಸ್ಯಾನಿಟರಿ ಪ್ಯಾಡ್ ಗಳನ್ನು ಪೂರೈಸಲು ಆರೋಗ್ಯ ಇಲಾಖೆಗೆ ಕೋರಲಾಗಿದೆ. ಎಲ್ಲಾ ಕೇಂದ್ರಗಳಲ್ಲಿ ಅಗತ್ಯ ಪೊಲೀಸ್ ಬಂದೋಬಸ್ತ್ ಗಾಗಿ ಪೊಲೀಸ್ ಇಲಾಖೆಗೆ ಮನವಿ ಮಾಡಲಾಗಿದೆ, ಗ್ರಾಮಗಳಿಂದ ಬರುವ ವಿದ್ಯಾರ್ಥಿಗಳಿಗೆ ಬಸ್ ವ್ಯವಸ್ಥೆ ಮಾಡಲು ಸಾರಿಗೆ ಇಲಾಖೆ ಮುಖ್ಯಸ್ಥರಿಗೆ ಮನವಿ ಮಾಡಲಾಗಿದೆ, ಮಕ್ಕಳಿಗೆ, ಸಿಬ್ಬಂದಿಯವರಿಗೆ ಶುದ್ಧ ಕುಡಿಯುವ ನೀರು ಪೂರೈಸಲು ಗ್ರಾಮ ಪಂಚಾಯಿತಿ, ಪಟ್ಟಣ ಪಂಚಾಯಿತಿಗಳ ಮುಖ್ಯಾಧಿಕಾರಿಗಳಿಗೆ ಕೋರಲಾಗಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿಗಳು ತಿಳಿಸಿದರು.
ಇನ್ನು ಇಲಾಖೆಯಿಂದ ವಿದ್ಯಾರ್ಥಿಗಳ ವಿದ್ಯಾಭ್ಯಾಸ ಕ್ಕಾಗಿ ೪೬ ಪ್ರೌಢ ಶಾಲೆಗಳಲ್ಲಿ ಮುಂಜಾನೆ ವಿಶೇಷ ವರ್ಗಗಳ ಆಯೋಜನೆ, ವಿಷಯ ಉಜಳನೆ ಕಾರ್ಯಕ್ರಮ, ಸಂಜೆ ಕಿರು ಪರೀಕ್ಷೆಗಳ ಆಯೋಜನೆ, ಗಂಡು ಮಕ್ಕಳಿಗೆ ಸುರಕ್ಷತೆಯೊಂದಿಗೆ ಶಾಲೆಯಲ್ಲಿಯೇ ವಸತಿ ವ್ಯವಸ್ಥೆ ಪರೀಕ್ಷಾ ವಿರಾಮದ ದಿನಗಳಲ್ಲಿ ವಿದ್ಯಾರ್ಥಿಗಳಿಗೆ ಶಿಕ್ಷಕರಿಂದ ವಿಷಯ ಉಜಳನೆ ಕಾರ್ಯಕ್ರಮ, ತಾಲೂಕಾಡಳಿತದ ನೆರವಿನಿಂದ ಮಕ್ಕಳಿಗೆ ದೂರವಾಣಿ ಕರೆ ಅಭಿಯಾನ ಹಾಗೂ ವಿದ್ಯಾರ್ಥಿಗಳ ಮನೆ ಮನೆ ಭೇಟಿಯಂಥ ವಿವಿಧ ಶೈಕ್ಷಣಿಕ ಕಾರ್ಯಕ್ರಮಗಳನ್ನು ಆಯೋಜಿಸಿ ಮೂಡಲಗಿ ವಲಯದಲ್ಲಿ ಉತ್ತಮ ಫಲಿತಾಂಶ ತಂದೇ ತರುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗುತ್ತಿದೆ. ಅಲ್ಲದೆ ಪರೀಕ್ಷಾ ಕೇಂದ್ರಗಳ ಸುತ್ತ ಯಾವುದೇ ಅಹಿತಕರ ಘಟನೆ ನಡೆಯದಂತೆ ಜಿಲ್ಲಾಧಿಕಾರಿಗಳ ಆದೇಶದ ಮೇರೆಗೆ ಕಲಂ ೧೪೪ ರ ಪ್ರಕಾರ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ ಎಂದು ಅಜಿತ ಮನ್ನಿಕೇರಿ ಮಾಹಿತಿ ನೀಡಿದರು