ಬನವಾಸಿ: ಕಳೆದ ವರ್ಷ ದೇಶವನ್ನೇ ಅಲ್ಲೋಲ ಕಲ್ಲೋಲ ಮಾಡಿದ ಕಿಲ್ಲರ್ ಕೊರೋನಾ ಸ್ಪಲ್ಪ ಮಟ್ಟಿಗೆ ಮಾಯವಾಗಿ ಜನ ಸಾಮಾನ್ಯರು ಜೀವನ ಕಟ್ಟಿಕೊಳ್ಳಲು ಹೆಣಗಾಡುತ್ತಿರುವಾಗಲೇ ಮತ್ತೇ ಎರಡನೇ ಅಲೆಯಿಂದ ಬನವಾಸಿ ಜನತೆ ಸಂಕಷ್ಟ ಎದುರಿಸುವಂತಾಗಿದೆ.
ಬನವಾಸಿ ಹಾಗೂ ಸುತ್ತಮುತ್ತಲಿನ ಗ್ರಾಮಗಳಲ್ಲಿ ದಿನದಿಂದ ದಿನಕ್ಕೆ ಕೊರೋನಾ ವೈರಸ್ ಉಲ್ಬಣಗೊಳ್ಳುತ್ತಿದ್ದು, ಅಧಿಕಾರಿಗಳಿಗೆ ದೊಡ್ಡ ಸವಾಲಾಗಿ ಪರಿಣಮಿಸಿದೆ, ಕಳೆದ ಬಾರಿ ಕೇವಲ 5 ಪ್ರಕರಣಗಳು ಕಂಡು ಬಂದು ಸುರಕ್ಷಿತವಾಗಿದ್ದ ಬನವಾಸಿ ಈ ಬಾರಿ ಶತಕದ ಗಡಿ ದಾಟುವ ಆತಂಕ ಎದುರಾಗಿದೆ.
ಇಲ್ಲಿಯವರೆಗೆ ಆರೋಗ್ಯ ಇಲಾಖೆಯಿಂದ ಅಧಿಕೃತವಾಗಿ 75ಕ್ಕೂ ಅಧಿಕ ಜನರಿಗೆ ಕೊರೋನ ಸೋಂಕು ದೃಢಪಟ್ಟಿದ್ದು ಚಿಕಿತ್ಸೆ ಪಡೆಯುತ್ತಿದ್ದಾರೆ. ಇನ್ನೂ ಖಾಸಗಿ ಆಸ್ಪತ್ರೆಗಳಲ್ಲಿ ಸಾಕಷ್ಟು ಜನ ಚಿಕಿತ್ಸೆಯನ್ನು ಪಡೆಯುತ್ತಿದ್ದು, ಅದರ ಮಾಹಿತಿ ಸಿಗುತ್ತಿಲ್ಲ ಇದು ಜನರಲ್ಲಿ ಮತ್ತಷ್ಟು ಆತಂಕಕ್ಕೆ ಎಡೆಮಾಡಿಕೊಟ್ಟಿದೆ.
ಈಗಾಗಲೇ ಆರೋಗ್ಯ ಇಲಾಖೆ, ಗ್ರಾಮ ಪಂಚಾಯಿತಿ, ಕಂದಾಯ ಇಲಾಖೆ, ಪೋಲಿಸ್ ಇಲಾಖೆಯೂ ಕಟ್ಟುನಿಟ್ಟಿನ ಕ್ರಮದ ಜೊತೆ ಜಾಗೃತಿ ಮೂಡಿಸುತ್ತಿದ್ದರೂ ಜನರು ಮಾತ್ರ ಎಚ್ಚೆತ್ತುಕೊಳ್ಳುತ್ತಿಲ್ಲ. ಜನರು ಅನಗತ್ಯವಾಗಿ ತಿರುಗಾಡುವುದು, ಮಾಸ್ಕ್ ಧರಿಸದೇ, ಸಾಮಾಜಿಕ ಅಂತರ ಕಾಪಾಡಿಕೊಳ್ಳದೇ ಇರುವುದು ಅಧಿಕಾರಿಗಳಿಗೆ ತಲೆನೋವಾಗಿ ಪರಿಣಮಿಸಿದೆ. ಜನರು ಇನ್ನೂ ಎಚ್ಚೆತ್ತುಕೊಳ್ಳದೇ ಇದ್ದರೆ ದೊಡ್ಡ ಗಂಡಾಂತರ ಎದುರಾಗಲಿದೆ.
ಈಗಾಗಲೇ ಪಶು ಆಸ್ಪತ್ರೆ ರಸ್ತೆ, ಹೂವಿನಕೊಪ್ಪಲಕೇರಿ ಪ್ರದೇಶವನ್ನು ಸಿಲ್‍ಡೌನ್ ಮಾಡಲಾಗಿದೆ. ಅಲ್ಲದೇ ಬನವಾಸಿಯ ಜನತಾ ಕಾಲೋನಿ, ಅಜ್ಜರಣಿ ರಸ್ತೆ, ಕಡಗೋಡು, ಅಜ್ಜರಣಿ, ಗುಡ್ನಾಪೂರ, ಭಾಶಿ ಗ್ರಾಮಗಳಲ್ಲಿ ಕೊರೋನ ಸೋಂಕು ದೃಡಪಟ್ಟಿದ್ದು ಇನ್ನಾದರೂ ಸಾರ್ವಜನಿಕರು ಎಚ್ಚರವಹಿಸಬೇಕಾಗಿದೆ.
ಬನವಾಸಿ ಹಾಗೂ ಸುತ್ತಮುತ್ತಲಿನ ಗ್ರಾಮಗಳಲ್ಲಿ ಕೊರೋನ ಸೋಂಕಿತರ ಸಂಖ್ಯೆ ಹೆಚ್ಚುತ್ತಿದೆ. ಜನ ಅನಗತ್ಯವಾಗಿ ತಿರುಗಾಡದೇ ಅಗತ್ಯವಿದ್ದಲ್ಲಿ ಮಾತ್ರ ಹೊರ ಬರಬೇಕು. ಹೊರಗಡೆ ಬರುವಾಗ ಕಡ್ಡಾಯವಾಗಿ ಮಾಸ್ಕ್ ಧರಿಸಿಕೊಂಡು ಬನ್ನಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಶೀತ, ಜ್ವರ, ಕೆಮ್ಮು, ಗಂಟಲು ನೋವು, ಸುಸ್ತು ಕಂಡುಬಂದಲ್ಲಿ ಭಯ ಪಡದೇ ಕೊರೋನ ಟೆಸ್ಟ್ ಮಾಡಿಸಿಕೊಳ್ಳಿ, ಜನರು ಭಯ ಪಡುವ ಅಗತ್ಯವಿಲ್ಲ ಟೆಸ್ಟ್ ಮಾಡಿಸಿದ ನಂತರ ಪಾಸಿಟಿವ್ ಎಂದು ಕಂಡುಬಂದಲ್ಲಿ ನಿಮ್ಮ ಮನೆಯಲ್ಲಿಯೇ ನಿಮಗೆ ಚಿಕಿತ್ಸೆ ನೀಡಲಾಗುವುದು. ಊಹಾಪೋಹಗಳಿಗೆ ಕಿವಿಗೊಡದೇ ಆರೋಗ್ಯವನ್ನು ಕಾಪಾಡಿಕೊಳ್ಳಿ
-ಜಯಶ್ರೀ ಹೆಗಡೆ
ವೈದ್ಯಾಧಿಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರ ಬನವಾಸಿ.
ವರದಿ: ಸುಧೀರ್ ನಾಯರ್, ಬನವಾಸಿ