ಮೂಡಲಗಿ: ಬೆಳಗಾವಿ ಜಿಲ್ಲೆಯ ಮೂಡಲಗಿ ತಾಲೂಕಿನ ಯಾದವಾಡ ಗ್ರಾಮದ ಬ್ರಿಗೇಡಿಯರ್ ಸುಧೀಂದ್ರ ಇಟ್ನಾಳ ಅವರು ಜೂ.30ರಂದು ತಮ್ಮ ಸೇನಾ ಸೇವೆಯನ್ನು ಯಶಸ್ವಿಯಾಗಿ ನಿರ್ವಹಿಸಿ ದೆಹಲಿಯಲ್ಲಿ ನಿವೃತ್ತಿ ಹೊಂದಿದ್ದಾರೆ.
ಡಿಸೆಂಬರ್1987 ರಲ್ಲಿ ಇಂಡಿಯನ್ ಮಿಲಿಟರಿ ಅಕಾಡೆಮಿ ದೆಹರಾಡೂನ್ ನಲ್ಲಿ ತರಬೇತಿ ಪಡೆದು ಭಾರತೀಯ ಭೂಸೇನೆಯಲ್ಲಿ ವಿವಿಧ ಹುದ್ದೆಗಳಲ್ಲಿ ವೈವಿಧ್ಯಮಯ ಜವಾಬ್ದಾರಿಯುತ 33 ವರುಷಗಳ ಸೇವೆಯನ್ನು ದೇಶಕ್ಕಾಗಿ ಯಶಸ್ವಿಯಾಗಿ ಪೂರೈಸಿದ್ದಾರೆ.
ವೃತ್ತಿಜೀವನದ ಅಡಚಣೆ ಕುಂದುಕೊರತೆಗಳನ್ನು ಧೈರ್ಯದಿಂದ ಎದುರಿಸಿ ಶಾಂತಚಿತ್ತದಿಂದ ಸಮಸ್ಯೆಗಳನ್ನು ಪರಿಹರಿಸಿ ಯಶಸ್ವಿಯಾಗಿ ದೇಶ ಸೇವೆಮಾಡಿದ್ದಾರೆ. ಜೊತೆಗೆ ಸಾಮಾಜಿಕ, ಶೈಕ್ಷಣಿಕ ಕ್ಷೇತ್ರದಲ್ಲೂ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಪರಿಸರ ಅಭಿವೃದ್ಧಿಗಾಗಿ ಸಾವಿರಾರು ಗಿಡನೆಟ್ಟು
“ಕಾನಪುರ ರತ್ನ” ಪ್ರಶಸ್ತಿ ಪಡೆದಿದ್ದಾರೆ.
ಸೈನಿಕರ ಮತ್ತು ಅವರ ಪರಿವಾರದ ಕಲ್ಯಾಣಕ್ಕಾಗಿ ಅನೇಕ ಯೋಜನೆಗಳನ್ನು ಅಳವಡಿಸಿ ಅವರ ಶುಭ ಚಿಂತಕರಾಗಿ ಕಾರ್ಯ ನಿರ್ವಹಿಸಿದ್ದಾರೆ.ನಿಷ್ಠೆಯಿಂದ ಪ್ರಾಮಾಣಿಕ ಸೇವೆಸಲ್ಲಿಸಿದ ಸರಳ ಜೀವಿ ಆದರ್ಶ ಅಧಿಕಾರಿ ಎಂದು ಹೆಸರು ಪಡೆದ ಬ್ರಿಗೇಡಿಯರ್ ಸುಧೀಂದ್ರ ಯುವ ಪೀಳಿಗೆಯ ಮಾರ್ಗದರ್ಶಕರಾಗಿದ್ದಾರೆ.
ಶಿಸ್ತು ನಿಯಮ ಬದ್ಧತೆ, ಆದರ್ಶದಿಂದ ನಿಸ್ವಾರ್ಥ ಸೇವೆಗೈದ ಇವರು ತಮ್ಮ ಊರು ಯಾದವಾಡ, ಮತ್ತು ತಮ್ಮ ಪರಿವಾರಕ್ಕೆ ಗೌರವ ತಂದಿದ್ದಾರೆ. ಇವರ ಮಗ ಶ್ರೇಯಸ್ ಭೂಸೇನೆಯ ಕ್ಯಾಪ್ಟನ್ ಹುದ್ದೆಯಲ್ಲಿ, ಮಗಳು ಅನಮೋಲ್ ನೌಕಾಸೇನೆಯ ಅಧಿಕಾರಿಯಾಗಿ ತಂದೆಯ ದಾರಿಯಲ್ಲಿಯೇ ಮುನ್ನಡೆದಿದ್ದಾರೆ. ಬ್ರಿಗೇಡಿಯರ್ ಸುಧೀಂದ್ರ ಅವರ ನಿವೃತ್ತಿ ಜೀವನ ಸುಖಮಯವಾಗಲಿ ಎಂದು ಅವರ ಅಪಾರ ಹಿತೈಷಿಗಳು ಹಾಗೂ ಯಾದವಾಡ ಅರ್ಬನ್ ಬ್ಯಾಂಕ್ ಅಧ್ಯಕ್ಷ ಈಶ್ವರ ಕತ್ತಿ ಶುಭ ಹಾರೈಸಿದ್ದಾರೆ.