ಬೆಳಗಾವಿ – ಬೆಳಗಾವಿ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಪಕ್ಷದ ಆದೇಶ ಉಲ್ಲಂಘಿಸಿದ್ದಲ್ಲದೆ ಪಕ್ಷ ವಿರೋಧಿ ಚಟುವಟಿಕೆ ನಡೆಸಿದರೆಂಬ ಆರೋಪದ ಮೇಲೆ ಪಕ್ಷದ ಏಳು ಜನ ಕಾರ್ಯಕರ್ತರನ್ನು ಆರು ವರ್ಷಗಳ ಕಾಲ ಉಚ್ಛಾಟಿಸಿ ಆದೇಶ ಹೊರಡಿಸಲಾಗಿದೆ.
ಭಾರತೀಯ ಜನತಾ ಪಕ್ಷ ಮಹಾನಗರ, ಬೆಳಗಾವಿಯ ಪ್ರಕಟಣೆಯೊಂದರಲ್ಲಿ ಈ ವಿಷಯವನ್ನು ಪ್ರಕಟಿಸಲಾಗಿದೆ.
ಸದ್ಯ ಮಹಾನಗರದಲ್ಲಿ ಚುನಾವಣೆ ನಡೆಯುತ್ತಿದ್ದು ಪಕ್ಷದ ಎಲ್ಲಾ ಕಾರ್ಯಕರ್ತರು ಸಕ್ರಿಯವಾಗಿ ಚುನಾವಣೆಗಾಗಿ ಕೆಲಸ ಮಾಡುತ್ತಿದ್ದಾರೆ ಆದರೆ ಈ ಏಳು ಜನರು ಬಿಜೆಪಿ ಪಕ್ಷದ ಅಧಿಕೃತ ಅಭ್ಯರ್ಥಿಯ ವಿರುದ್ಧ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸಿ ಪಕ್ಷಕ್ಕೆ ಮುಜುಗರ ಉಂಟು ಮಾಡಿದ್ದಲ್ಲದೆ ಪಕ್ಷದ ನಿಯಮ ಹಾಗೂ ಶಿಸ್ತು ಉಲ್ಲಂಘಿಸಿ ಪಕ್ಷವಿರೋಧಿ ಚಟುವಟಿಕೆಯಲ್ಲಿ ತೊಡಗಿದ್ದರಿಂದ ರಾಜ್ಯಾಧ್ಯಕ್ಷ ನಳಿನ್ ಕುಮಾರ ಕಟೀಲು ಅವರ ಆದೇಶದಂತೆ ಎಲ್ಲರನ್ನೂ ಆರು ವರ್ಷಗಳ ಕಾಲ ಪಕ್ಷದಿಂದ ಉಚ್ಛಾಟಿಸಲಾಗಿದೆ ಎನ್ನಲಾಗಿದೆ.
ದೀಪಕ ಜಮಖಂಡಿ, ಶಿವಾನಂದ ಮುಗಳಿಹಾಳ, ಗಣೇಶ ನಂದಗಡಕರ, ಗಣೇಶ ಸವ್ವಾಶೇರಿ ( ನಾಗವೇಣಿ ), ಆರತಿ ಪಾಟೋಳೆ, ಶಿವಾನಂದ ಮುರಗೋಡ ಹಾಗೂ ಜ್ಯೋತಿ ಭಾವಿಕಟ್ಟಿ ಇವರೇ ಪಕ್ಷದಿಂದ ಉಚ್ಛಾಟಿಸಲ್ಪಟ್ಟವರು ಎಂದು ಪ್ರಕಟಣೆ ತಿಳಿಸಿದೆ.