ಬೆಳಗಾವಿ ತಾಲ್ಲೂಕಿನ ಕಡೋಲಿ ಗ್ರಾಮದ ಸರಕಾರಿ ಪ್ರಾಥಮಿಕ ಶಾಲೆಯಲ್ಲಿ ಸಂಭ್ರಮ ಮತ್ತು ಸಡಗರದ “66ನೇ ಕರ್ನಾಟಕ ರಾಜ್ಯೋತ್ಸವ”ವನ್ನು ಆಚರಿಸಲಾಯಿತು.
ಕಾರ್ಯಕ್ರಮದಲ್ಲಿ ಮೊದಲಿಗೆ ನಮ್ಮನ್ನು ಅಗಲಿದ ಯುವ ನಟ ಪುನೀತ್ ರಾಜಕುಮಾರ ಆತ್ಮಕ್ಕೆ ಮೌನ ಆಚರಣೆ ಮಾಡುವುದರ ಮೂಲಕ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಕಾರ್ಯಕ್ರಮದಲ್ಲಿ ಎಸ್ಡಿಎಂಸಿ ಅಧ್ಯಕ್ಷ ರಾಮಚಂದ್ರ ಹಿತ್ತಲಮನಿ ಭುವನೇಶ್ವರಿದೇವಿಯ ಫೋಟೋ ಪೂಜೆ ನೆರವೇರಿಸಿ ಇತ್ತೀಚಿನ ದಿನಗಳಲ್ಲಿ ನಮ್ಮ ಊರಲ್ಲಿ ಕನ್ನಡ ವಾತಾವರಣ ಹೆಚ್ಚುತ್ತಿದೆ. ಭಾಷಾ ವೈಷಮ್ಯ ಮರೆತು ಎಲ್ಲರೂ ಒಂದಾಗಿ ನಾಡಿಗಾಗಿ,ನುಡಿಗಾಗಿ ಬದುಕಬೇಕಿದೆ ಎಂದರು.
ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕ ನುಡಿಗಳನ್ನಾಡಿದ ಶಿಕ್ಷಕಿ ಮತ್ತು ಶಿಕ್ಷಕರ ಸಂಘ ಹಾಗೂ ನೌಕರರ ಸಂಘದ ಸದಸ್ಯೆ ಮಹಾದೇವಿ ಹೊಟ್ಟಿನವರ ಮಾತನಾಡಿ, ನಮ್ಮ ನಮ್ಮಲ್ಲೇ ಭಾಷೆಗಳ ಕುರಿತಾದ ಬೇಧಭಾವ ಬೇಡ, ಸಾವಿರಾರು ವರ್ಷದ ಇತಿಹಾಸವಿರುವ ಕನ್ನಡ ಭಾಷೆಯ ಮೇಲೆ ನಮಗೆ ಅಭಿಮಾನವಿರಲಿ ಎಂದರು.
ಶಿಕ್ಷಕ ಶಿವಾನಂದ ತಲ್ಲೂರ ಮಾತನಾಡಿ ಗಡಿಭಾಗದ ಕನ್ನಡ ಶಾಲೆಗಳು ಇನ್ನಷ್ಟು ಗಟ್ಟಿಗೊಳ್ಳಬೇಕಾಗಿದೆ. ಕನ್ನಡ ಭಾಷೆಯನ್ನು ನಾವು ಮೊದಲಿಗೆ ಪ್ರೀತಿಸಿ ಪೂಜಿಸಿ ಆರಾಧಿಸ ಬೇಕಿದೆ. ಭಾಷೆಗಳ ಭೇದಭಾವ ಮರೆತು ಬದುಕಿದರೆ ಮಾತ್ರ ಶೈಕ್ಷಣಿಕವಾಗಿ ಪ್ರಗತಿ ಸಾಧ್ಯ. ಶಿಕ್ಷಕರಾದ ನಾವುಗಳು ಮಕ್ಕಳಲ್ಲಿ ಭಾಷೆ ಕುರಿತಾದ ಒಳ್ಳೆಯ ಭಾವನೆಗಳನ್ನು ಮೂಡಿಸಬೇಕೇ ಹೊರತು ಭಾಷಾ ತಾರತಮ್ಯದ ತಪ್ಪುಕಲ್ಪನೆ ಕೊಡಬಾರದು ಎಂದರು.
ಕಾರ್ಯಕ್ರಮದಲ್ಲಿ ಭಾರತ ಸ್ವಾತಂತ್ರ್ಯದ 75ನೇ ಅಮೃತಮಹೋತ್ಸವ ವರ್ಷದ ನಿಮಿತ್ತ 75 ಕನ್ನಡ ಧ್ವಜಗಳನ್ನು ಹಿಡಿಯುವುದರ ಮೂಲಕ ಮಕ್ಕಳು ಕನ್ನಡ ನಾಡು-ನುಡಿ ಗೀತೆಗಳಿಗೆ ಹೆಜ್ಜೆ ಹಾಕಿದರು. ಕಾರ್ಯಕ್ರಮದಲ್ಲಿ ಎಸ್. ಡಿ.ಎಂ.ಸಿ ಲಕ್ಷ್ಮಿ ಗುಡಿಮನಿ ಪರಶುರಾಮ ನರೋಟಿ ಬಾಬು ಕೋರೆ , ಗಜಾನನ ಕಾಗಣಿಕರ,ರಂಜಿತ ಪಾಟೀಲ. ಸಿದ್ದು ಕಾಂಬ್ಳೆ,ಮುಚ್ಚಂಡಿ,ಸರಸ್ವತಿ ಹಣಮಂತ್ನವರ ಸೇರಿದಂತೆ ಸದಸ್ಯರು,ಗ್ರಾಮ ಪಂಚಾಯಿತಿಯ ಸದಸ್ಯರು, ಊರಿನ ಯುವಕ ಸಂಘದ ಸದಸ್ಯರು, ಮಹಿಳಾ ಸಂಘದವರು, ಊರ ಹಿರಿಯರು, ಶಿಕ್ಷಕ ಸಿಬ್ಬಂದಿ, ಮಕ್ಕಳ ಪೋಷಕರು ಸೇರಿದಂತೆ ಶಾಲಾ ಮಕ್ಕಳು ಅತ್ಯಂತ ಹುರುಪಿನಿಂದ ಕನ್ನಡ ಧ್ವಜ ಹಿಡಿಯುವುದರ ಮೂಲಕ ಹೆಮ್ಮೆಯಿಂದ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ಕಾರ್ಯಕ್ರಮದ ಆರಂಭದಲ್ಲಿ ಶಿಕ್ಷಕಿ ಶ್ರೀದೇವಿ ಮರಕುಂಬಿ ಸ್ವಾಗತಿಸಿದರು, ಮುಖ್ಯಾಧ್ಯಾಪಕಿ ಕೆ. ಎಫ್. ಭಾವಿಹಾಳ ವಂದಿಸಿದರು. ಶಿಕ್ಷಕ ಶಿವಾನಂದ ತಲ್ಲೂರ ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ನಿರ್ವಹಿಸುವುದರ ಮೂಲಕ ನಿರೂಪಿಸಿದರು.