spot_img
spot_img

ಸಾಮಾಜಿಕ ಜಾಲತಾಣಗಳಲ್ಲಿ ಕನ್ನಡ ಸಾಹಿತ್ಯ

Must Read

- Advertisement -

ನಾವೆಲ್ಲ ಕನ್ನಡಮ್ಮನ ಸತ್ಪುತ್ರರು ಎಂದು ಬೀಗುವುದಕ್ಕೆ ಒಂದೇ ಎರಡೇ ಹಲವಾರು ಕಾರಣಗಳುಂಟು. ಸುಮಾರು 2000 ವರ್ಷಕ್ಕಿಂತಲೂ ಹೆಚ್ಚಿನ ಇತಿಹಾಸ ಹೊಂದಿದ ನಮ್ಮ ಕನ್ನಡ ಭಾಷೆ ತುಂಬಾ ಪ್ರಾಚೀನವಾದುದು ಎನ್ನುವುದಕ್ಕೆ 2 ನೇ ಶತಮಾನದಲ್ಲಿ ರಚಿಸಿದ ಗ್ರೀಕ್ ಗ್ರಂಥವೊಂದರಲ್ಲಿ ಉಲ್ಲೇಖವಿದೆ. ಪ್ರಪಂಚದ ಸಾವಿರಾರು ಭಾಷೆಗಳ ಪಟ್ಟಿಯಲ್ಲಿ ನಮ್ಮ ಭಾಷೆ ಏಳನೇ ಸುಪ್ರಸಿದ್ಧ ಭಾಷೆ ಎಂದು ದಾಖಲಾಗಿದೆ.

ಇದಕ್ಕೆ ಕಿರೀಟವಿಟ್ಟಂತೆ ಶಾಸ್ತ್ರೀಯ ಭಾಷೆಯ ಗರಿ ಬೇರೆ. ಕನ್ನಡಿಗರು ಪ್ರತಿಭಾವಂತರು ಅದರಲ್ಲೂ ಸಾಹಿತ್ಯ ರಚನೆಯಲ್ಲಿ ನಿಸ್ಸೀಮರು. ಅದಕ್ಕೆ ಸಾಕ್ಷಿ ನಮ್ಮ ಗಟ್ಟಿ ಸಾಹಿತ್ಯಕ್ಕೆ ದೊರೆತ ಜ್ಞಾನ ಪೀಠ ಪ್ರಶಸ್ತಿಗಳು. ‘ಕುರಿತೋದದೆಯಂ ಕಾವ್ಯ ಪ್ರಯೋಗ ಪರಿಣಿತಿ ಮತಿಗಳ್’ಎಂಬ ನೃಪತುಂಗ ಮಾರ್ಗದಲ್ಲಿನ ಉಲ್ಲೇಖ ನಮ್ಮ ಅಮೋಘ ಕಾವ್ಯ ಶಕ್ತಿಗೆ ಹಿಡಿದ ಕೈಗನ್ನಡಿ. ಕನ್ನಡಿಗರ ಸಾಹಿತ್ಯಾಭಿಮಾನ ಎಂದಿಗೂ ಕುಂದಲು ಸಾಧ್ಯವಿಲ್ಲ. ಇಲ್ಲಿ ಆಳಿದ ಅರಸರು ಸಾಹಿತ್ಯದ ಆರಾಧಕರಾಗಿದ್ದರು.

ಕನ್ನಡ ಸಾಹಿತ್ಯವನ್ನು ಪೋಷಿಸಿ ಬೆಳೆಸಿದರು ಎಂಬುದಕ್ಕೆ ರನ್ನ ಪೊನ್ನ ಜನ್ನರಂಥ ಹೆಸರು ಸಾಕಲ್ಲವೇ? ಇಷ್ಟೆಲ್ಲ ವೈಭವಯುತ ಸಾಹಿತ್ಯದ ಗ್ರಂಥಗಳನ್ನು ತಲೆ ಮೇಲೆ ಹೊತ್ತು ಮಾರಿದ ಕಾದಂಬರಿಯ ಜನಕ ಗಳಗನಾಥರಂಥ ಸಾಹಿತ್ಯ ಪ್ರೇಮಿಗಳು ಕನ್ನಡತನದ ಹಿರಿಮೆಯನ್ನು ಎತ್ತಿ ತೋರಿಸಿದ್ದಾರೆ. ದಾನಕ್ಕೆ ಹೆಸರಾದ ಅತ್ತಿಮಬ್ಬೆ ಪುಸ್ತಕಗಳನ್ನು ದಾನ ಮಾಡಿದ್ದು ಇತಿಹಾಸದ ಪುಟ ಸೇರಿದೆ.

- Advertisement -

ಸಾಹಿತ್ಯ ಪಂಡಿತರಿಗಷ್ಟೇ ಅಲ್ಲ ವಿದ್ವಾಂಸರ ಸೊತ್ತಲ್ಲ. ಕಬ್ಬಿಣದ ಕಡಲೆಯೂ ಅಲ್ಲ. ಸಾಮಾನ್ಯ ಜನರ ಜೀವ ನಾಡಿ ಎಂದು ಸಾಕ್ಷೀಕರಿಸಿ ತೋರಿಸಿದವರು ಜಗಜ್ಯೋತಿ ಅಣ್ಣ ಬಸವಣ್ಣನವರು. ವಚನ ಸಾಹಿತ್ಯದಂಥ ಸಾಹಿತ್ಯ ಜಗತ್ತಿನ ಉಳಿದ ಯಾವ ಭಾಷೆಯಲ್ಲೂ ಕಾಣ ಸಿಗುವುದಿಲ್ಲ. ಅಷ್ಟೇ ಅಲ್ಲ ಅರ್ಥಕ್ಕೆ ತಕ್ಕ ಹಾಗೆ ಅದನ್ನು ಅನುವಾದಿಸುವುದು ಅಷ್ಟು ಸುಲಭದ ವಿಷಯವೂ ಅಲ್ಲ. ಛಂದ, ಕಂದ, ಷಟ್ಪದಿ, ರಗಳೆ ಅಲಂಕಾರ ಹೊಂದಿದ ಸಾಹಿತ್ಯ ಕನ್ನಡಿಗರ ಸೃಜನಶೀಲತೆಗೆ ಪ್ರಯೋಗಶೀಲತೆಗೆ ಹಿಡಿದ ಕನ್ನಡಿ. ಇಷ್ಟೆಲ್ಲ ವೈಶಿಷ್ಟ್ಯಗಳ ಆಗರವಾಗಿರುವ ಸಾಹಿತ್ಯವನ್ನು ಅಸ್ವಾದಿಸುವ ರಚಿಸಿ ಮುನ್ನಡೆಸಿಕೊಂಡು ಹೋಗುವ ಸತ್ಸಂಪ್ರದಾಯ ಕಣ್ಮರೆಯಾಗುತ್ತಿದೆ ಎಂಬ ನೋವು ಕಾಡುತ್ತಿದೆ ಎನ್ನುವುದು ಹಿರಿಯ ಜೀವಿಗಳ ಅಳಲು. ಅಂಗೈಯಲ್ಲಿ ಮೊಬೈಲ್ ಎನ್ನುವ ಮಾಯಾವಿ ಬಂದು ಕುಳಿತ ಮೇಲೆ ಪುಸ್ತಕ ಸಂಸ್ಕೃತಿ ಮಾಯವಾಗುತ್ತಿದೆ ಎನ್ನುವ ಮಾತಿನ ಸದ್ದು ಎಲ್ಲೆಲ್ಲೂ ಹೆಚ್ಚುತ್ತಿದೆ.

ಇತ್ತೀಚಿನ ದಿನ ಮಾನದಲ್ಲಿ ಎಲ್ಲೆಲ್ಲೂ ಸಾಮಾಜಿಕ ಜಾಲತಾಣಗಳದ್ದೇ ಮಾತು. ಇವುಗಳಿಗೆ ಮಾರು ಹೋಗದವರು ತುಂಬಾ ವಿರಳ. ಸಾಮಾಜಿಕ ಜಾಲತಾಣಗಳಾದ ಮಾಯ್ ಸ್ಪೇಸ್, ಟ್ವಿಟರ್, ಫೇಸ್‍ಬುಕ್, ಯೂ ಟ್ಯೂಬ್ ವಾಟ್ಸಪ್‍ಗಳಲ್ಲಿ ನಿರತರಾಗದ ಜನ ಸಿಗುವುದು ನಿಜಕ್ಕೂ ಕಷ್ಟ. ದಿನ ನಿತ್ಯದ ಜೀವನದಲ್ಲಿ ತಮ್ಮ ಆಸಕ್ತಿ ಅಭಿರುಚಿಗಳಿಗೆ ಅನುಗುಣವಾಗಿ ಅಸಂಖ್ಯಾತ ಜನರು ಸಾಮಾಜಿಕ ಜಾಲ ತಾಣಗಳ ಬಳಕೆದಾರರಾಗಿದ್ದಾರೆ. ಇವುಗಳ ಬಳಕೆ ಸಂಚಲನವನ್ನು ಸೃಷ್ಟಿಸಿದೆ. ತಂತ್ರಜ್ಞಾನದ ಅಭಿವೃದ್ಧಿ ಸಾಮಾಜಿಕ ಜಾಲ ತಾಣಗಳಲ್ಲಿ ಸಂಶೋಧನಾ ಕಾರ್ಯಕ್ಕೂ ಮುನ್ನುಡಿ ಬರೆದಂತಾಗಿದೆ. ಸಾಮಾಜಿಕ ಜಾಲ ತಾಣಗಳಲ್ಲಿ ಸಾಮಾನ್ಯವಾಗಿ ಐದು ತೆರನಾದ ಸಾಹಿತ್ಯಕ್ಕೆ ಅರಸುವವರನ್ನು ಕಾಣುತ್ತೇವೆ. ಮಾರುಕಟ್ಟೆ ಮತ್ತು ಜಾಹೀರಾತು, ಜ್ಞಾನ ನಿರ್ವಹಣೆ, ಸಂಬಂಧಗಳ ನಿರ್ವಹಣೆ, ಸಾಮಾಜಿಕ ಬಂಡವಾಳ, ಇಲೆಕ್ಟ್ರಾನಿಕ್ ಮತ್ತು ಕಾಮರ್ಸ್.

2012 ರ ಅಧ್ಯಯನದ ಪ್ರಕಾರ ಫೇಸ್ ಬುಕ್ 710 ಮಿಲಿಯನ್ ಬಳಕೆದಾರರನ್ನು ಹೊಂದಿದೆ. ಅಂದರೆ ಈ ಬಳಕೆದಾರರ ಸಂಖ್ಯೆ ಜಗತ್ತಿನ 3 ನೇ ದೊಡ್ಡ ರಾಷ್ಟ್ರದಷ್ಟಿದೆ. ಪ್ರಪಂಚದ ಅತೀ ಹೆಚ್ಚು ಜನಸಂಖ್ಯೆಯುಳ್ಳ ಚೀನಾ ಹಾಗೂ ಭಾರತದ ಶೇ 50 ರಷ್ಟು ಜನಸಂಖ್ಯೆ ಸಾಮಾಜಿಕ ಜಾಲತಾಣಗಳಲ್ಲಿ ತಮ್ಮನ್ನು ಗುರುತಿಸಿಕೊಂಡಿದೆ. ಸಾಮಾಜಿಕ ಜಾಲತಾಣಗಳು ಅದೆಷ್ಟು ಪ್ರಭಾವಕಾರಿಯಾಗಿವೆ ಎಂದರೆ ಅವು ಪರ್ಯಾಯ ಸಂವಹನ ಮಾಧ್ಯಮಗಳಾಗಿ ಕಾರ್ಯ ನಿರ್ವಹಿಸುತ್ತಿವೆ. ಸಾಂಪ್ರದಾಯಿಕ ಪದ್ದತಿಗಳನ್ನು ಹಿಂದಿಕ್ಕಿ ನಾಗಾಲೋಟದ ಗತಿಯಲ್ಲಿ ಜನರನ್ನು ತಲುಪುತ್ತಿವೆ.

- Advertisement -

‘ಸಾಹಿತ್ಯದ ಗಂಧವಿಲ್ಲದ ಜೀವನ ನರಕವಿದ್ದಂತೆ.’ಎಂಬ ಆಂಗ್ಲ ಕವಿಯ ನುಡಿಯು ಜೀವನದಲ್ಲಿ ಸಾಹಿತ್ಯದ ಮಹತ್ತರ ಪಾತ್ರವನ್ನು ಸಾರಿ ಹೇಳುತ್ತದೆ.ಬದುಕೇ ಬರಹದ ಬುತ್ತಿ ಎನ್ನುವ ಮಾತಿನಂತೆ ಬಾಳಿನಲ್ಲಿ ಕಂಡುಂಡ ಎಲ್ಲ ಅನುಭವಗಳಿಗೂ ಅಕ್ಷರ ರೂಪ ಕೊಟ್ಟು ಅದಕ್ಕೊಪ್ಪುವ ಚಿತ್ರಗಳನ್ನು ಬಳಸಿ ವಿವಿಧ ಜರ್ನಲ್‍ಗಳಿಗೆ ಉಪಯೋಗಿಸಿದ ಅತ್ಯುತ್ತಮ ಲೇಖನ ಮಾಲೆಗಳು ಸಾಮಾಜಿಕ ಜಾಲತಾಣಗಳಲ್ಲಿ ಲಭ್ಯ.

ಇಂಥ ಪ್ರಬಂಧಗಳು ಕವಿತೆಗಳು ಕಥೆಗಳು ಸಾಮಾಜಿಕ ಸಾಂಸ್ಕೃತಿಕ ನಡವಳಿಕೆಯ ಮೇಲೆ ಅಗಾಧ ಪ್ರಭಾವವನ್ನು ಬೀರುತ್ತಿದೆ ಎನ್ನುವುದರಲ್ಲಿ ಎರಡು ಮಾತಿಲ್ಲ. 2008 ರಿಂದ 2010 ರಲ್ಲಿ ನಿಕೋಲಸ್ ಬೆಲರ್ಡಸ್ ಟ್ವಿಟರ್ ಮೂಲಕ ಮೊಟ್ಟ ಮೊದಲನೆಯ ಬಾರಿಗೆ ಕಾದಂಬರಿಯನ್ನು ಪ್ರಕಟಿಸಿ ಇತಿಹಾಸವನ್ನು ನಿರ್ಮಿಸಿದ. ಸಮಕಾಲೀನ ಖ್ಯಾತ ಕವಿಗಳು ಲೇಖಕರು ಸಾಹಿತಿಗಳು ತಮ್ಮ ಓದುಗ ಅಭಿಮಾನಿಗಳೊಂದಿಗೆ ಬ್ಲಾಗ್‍ನಲ್ಲಿ ಮತ್ತು ಟ್ವಿಟರ್‍ಗಳಲ್ಲಿ ಪ್ರತಿಸ್ಪಂದಿಸುತ್ತಿದ್ದಾರೆ.

‘ಬಿಲ್ಲುಗಾರರ ವಿರೋಧವನ್ನಾದರೂ ಕಟ್ಟಿಕೋ ಆದರೆ ಬರಹಗಾರರ ವಿರೋಧವನ್ನು ಕಟ್ಟಿಕೊಳ್ಳದಿರು.’ ಎಂಬ ತಿರುವಳ್ಳವರ್ ನುಡಿಯಂತೆ ಬರಹಗಾರರ ವಿರೋಧವನ್ನು ಕಟ್ಟಿಕೊಂಡರೆ ಸಾಮಾಜಿಕ ಜಾಲ ತಾಣಗಳಲ್ಲಿ ಮಾನ ಹರಾಜಾಗುವುದು ಖಚಿತ. ಪಾಶ್ಚಾತ್ಯ ದೇಶಗಳಲ್ಲಿ ಮಕ್ಕಳು ಪಿ ಬುಕ್ಸ್(ಪ್ರಿಂಟೆಡ್) ಗಳಿಗಿಂತ ಇ ಬುಕ್ಸ್ (ಇಲೆಕ್ಟ್ರಾನಿಕ್) ಗಳನ್ನೇ ಹೆಚ್ಚು ಓದುತ್ತಾರೆ ಎಂಬುದು ಸಮೀಕ್ಷೆಯಿಂದ ಸಾಬೀತಾಗಿದೆ.

ನಮ್ಮಲ್ಲಿ ಇನ್ನೂ ಪಿ ಬುಕ್ಸ್ ಗಳ ಬಳಕೆ ಉಳಿದಿರುವುದು ನಮ್ಮ ಸುದೈವ ಎಂದು ಕೊಳ್ಳುತ್ತಿದ್ದೇವೆ. ಬದಲಾವಣೆಗೆ ನಾವು ಸಿದ್ಧರಾಗಬೇಕು ಮತ್ತು ಹೊಂದಿಕೊಳ್ಳಬೇಕು.’ಪುಸ್ತಕಗಳು ಎಂದು ಮರೆಯಾಗುವುದಿಲ್ಲವೆಂದು ನಾನು ನಂಬಿದ್ದೇನೆ.’ ಎಂದು ಆಂಗ್ಲ ಭಾಷೆಯ ಸುಪ್ರಸಿದ್ಧ ಕವಿ ಲೇಖಕ ಜಾರ್ಜ್ ಬೋರ್ಜಿಸ್ ಬಲವಾಗಿ ಹೇಳಿದ್ದಾರೆ.

ಬೋರ್ಜಿಸ್ ಮಾತಿಗೆ ಪುಷ್ಟಿ ನೀಡುವಂತೆ ಆಧುನಿಕ ತಂತ್ರಜ್ಞಾನದ ಬೆಳವಣಿಗೆಯಲ್ಲೂ ಮುದ್ರಿತ ಕೃತಿಗಳ ಗ್ರಂಥಗಳ ಸಂಖ್ಯೆ ಕಡಿಮೆಯಾಗುತ್ತಿಲ್ಲ.ಬೋರ್ಜಿಸ್ ಪ್ರಕಾರ ಫೋನ್ ನಮ್ಮ ಧ್ವನಿ ಪೆಟ್ಟಿಗೆಯ ಮುಂದುವರಿದ ಭಾಗ. ಆದರೆ ಈಗ ಮೊಬೈಲ್ ನಮ್ಮ ಸೃಜನಶೀಲತೆಯ ಮುಂದುವರೆದ ಭಾಗವಾಗಿ ಕಾರ್ಯ ನಿರ್ವಹಿಸುತ್ತಿದೆ. ಲಿಟರೇಚರ್ ಈಗ ಟ್ವಿಟರೇಚರ್ ಆಗಿ ಬದಲಾಗಿದೆ ಎಂದು ಮಹಾನ್ ವ್ಯಕ್ತಿಯೊಬ್ಬರು ಟ್ವೀಟ್ ಮಾಡಿದ್ದನ್ನು ಇಲ್ಲಿ ನೆನೆಯಬಹುದು.

ಫೇಸ್ ಬುಕ್ ಯೂ ಟ್ಯೂಬ್ ಗಳಲ್ಲಿ ಹರಿದಾಡುವ ಸಾಹಿತ್ಯ ದಿನ ನಿತ್ಯದ ಜೀವನಾನುಭವಗಳ ಹಂಚಿಕೆಯಾಗಿರುತ್ತದೆ. ಸಾಮಾಜಿಕ ಜಾಲತಾಣಗಳ ಬಹು ದೊಡ್ಡ ಲಾಭವೆಂದರೆ ಇಲ್ಲಿ ಯಾರೂ ಕೂಡ ತಮ್ಮ ಆಸಕ್ತಿ ಅಭಿರುಚಿಗಳನ್ನು ಅಕ್ಷರದಲ್ಲಿ ಹೆಣೆದು ಇತರರೊಂದಿಗೆ ಹಂಚಿಕೊಳ್ಳಬಹುದು. ಹೀಗಾಗಿ ಈಗ ಯಾರು ಬೇಕಾದರೂ ಪುಸ್ತಕಗಳನ್ನು ಬರೆಯಬಹುದು ಎನ್ನುವಂತಾಗಿದೆ. ‘ಸಾಹಿತ್ಯದ ಬಗ್ಗೆ ಹೆಚ್ಚಿಗೆ ತಿಳಿದಷ್ಟು ನಮ್ಮ ಬಗ್ಗೆ ನಾವು ಹೆಚ್ಚು ತಿಳಿಯಲು ಸಾಧ್ಯ. ಎನ್ನುವ ಪ್ರಾಜ್ಞರ ಮಾತೊಂದಿದೆ.

ಆ ಮಾತಿನಂತೆ ಸಮಕಾಲೀನ ಕವಿಗಳು ಲೇಖಕರು ವಿಮರ್ಶಕರು ತಮ್ಮ ಸಾಹಿತ್ಯವನ್ನು ಸಾಮಾಜಿಕ ಜಾಲ ತಾಣಗಳಿಲ್ಲಿ ಬ್ಲಾಗರ್‍ಗಳ ಮೂಲಕ ಕನ್ನಡ ಪ್ರತಿ ಲಿಪಿ ಮೂಲಕ ಓದುಗರಿಗೆ ನೀಡುವುದಲ್ಲದೇ ಇತರ ಸಾಹಿತಿಗಳ ಕೃತಿಗಳನ್ನು ಓದುತ್ತಿದ್ದಾರೆ. ಫೇಸ್ ಬುಕ್ ವಾಲ್‍ಗಳ ಮೇಲೆ ಕಾಣಿಸುವ ಅನೇಕ ಬರಹಗಳು ಹೈಕುಗಳು, ಕವಿತೆಗಳು, ಹನಿಗವನಗಳು, ಕಾರ್ಟೂನ್‍ಗಳು ನಗೆ ಚಟಾಕೆಗಳು ಹಾಸ್ಯ ಪ್ರಬಂಧಗಳು ಆಧುನಿಕ ಬದುಕಿನ ಒತ್ತಡ ಮತ್ತು ಜಂಜಾಟದ ಅಕ್ಷರ ಚಿತ್ರಗಳನ್ನು ಪ್ರದರ್ಶಿಸುತ್ತವೆ. ಇಂಥ ಸಾಹಿತ್ಯ ಓದುಗರನ್ನು ಕೈ ಬೀಸಿ ಕರೆಯುತ್ತದೆ. ಪ್ರಾಜ್ಞ ಓದುಗರು ವಾಚಿಸಿ ತಮ್ಮ ಅನಿಸಿಕೆಗಳನ್ನು ಪೋಸ್ಟ್ ಮಾಡುತ್ತಾರೆ ಕೆಲವೊಮ್ಮೆ ಉತ್ತರ ರೂಪದಲ್ಲಿ ಬರಹಗಳನ್ನು ಬರೆದು ಪೋಸ್ಟ್ ಮಾಡುತ್ತಾರೆ.

‘ಲೋಕೋ ಭಿನ್ನ ರುಚಿಃ.’ಎಂಬಂತೆ ವಿಭಿನ್ನ ಆಶಯಗಳನ್ನಿಟ್ಟುಕೊಂಡು ಹುಟ್ಟುವ ವಾಟ್ಸಪ್ ಗುಂಪುಗಳಲ್ಲಿ ಸಾಹಿತ್ಯವನ್ನೇ ಪ್ರಧಾನವಾಗಿಟ್ಟುಕೊಂಡು ಗುಂಪುಗಳು ಬಹು ಸಂಖ್ಯೆಯಲ್ಲಿ ಸಿಗುತ್ತವೆ. ಇಂಥ ಗುಂಪಿಗಳಲ್ಲಿ ತಾವು ಬರೆದ ಸಾಹಿತ್ಯ ಪ್ರಕಾರಗಳನ್ನು ಹಂಚಿಕೊಳ್ಳುವುದಲ್ಲದೇ ಇತರರ ಬರಹಗಳನ್ನು ಓದಿ ಮೆಚ್ಚುವ ವಿಮರ್ಶಿಸುವ ವಿವೇಕವನ್ನು ಮೆರೆಯುತ್ತಿದ್ದಾರೆ. ಹೀಗೆ ಬರಹಗಾರರಿಗೆ ಬರಹಗಾರರೇ ಸ್ಪೂರ್ತಿಯಾಗುತ್ತಿದ್ದಾರೆ. ಓದುಗರಿಗೂ ಪ್ರೇರಕ ಶಕ್ತಿಯಾಗುತ್ತಿದ್ದಾರೆ.

ಅಂತರ್ಜಾಲ ಸಾಹಿತಿಗಳಾಗಿ ಬ್ಲಾಗರ್‍ಗಳಾಗಿ ಗುರುತಿಸಿಕೊಂಡು ಓದುಗರ ಮನದಲ್ಲಿ ಮನೆ ಮಾಡಿದ ಅನೇಕ ಮಹನೀಯರು ಕನ್ನಡ ಸಾಹಿತ್ಯದ ಘಮವನ್ನು ಪ್ರಪಂಚದಾದ್ಯಂತ ಹರಡುತ್ತಿದ್ದಾರೆ. ಕನ್ನಡ ಸಾಹಿತ್ಯದ ಓದನ್ನೇ ಉದ್ದೇಶವನ್ನಾಗಿಸಿಕೊಂಡು ಹುಟ್ಟಿದ ಗುಂಪುಗಳು ಸಾಹಿತ್ಯದ ಒದಿಗೆ ಹೆಚ್ಚಿನ ಪ್ರಾಶಸ್ತ್ಯ ನೀಡುತ್ತಾರೆ. ಓದುಗರನ್ನು ಮತ್ತಷ್ಟು ಮಗದಷ್ಟು ಇನ್ನಷ್ಟು ಓದಲು ಪ್ರೇರೇಪಿಸುವ ಹಿನ್ನೆಲೆಯಲ್ಲಿ ಬಹು ಆಯ್ಕೆ ಮಾದರಿಯ ರಸ ಪ್ರಶ್ನೆ ಸ್ಪರ್ಧೆಗಳನ್ನು ಏರ್ಪಡಿಸಲಾಗುತ್ತದೆ.

ಸ್ಪರ್ಧೆಗಳಲ್ಲಿ ವಿಜಯಿಗಳಾದವರಿಗೆ ಸಾಧಕ ಸಾಹಿತಿಗಳನ್ನು ಕರೆಯಿಸಿ ಕವಿ ಗೋಷ್ಠಿ ಇಲ್ಲವೇ ವಿಚಾರ ಗೋಷ್ಠಿಗಳನ್ನು ಏರ್ಪಡಿಸಿ ಪ್ರಶಸ್ತಿಗಳನ್ನು ನೀಡಿ ಗೌರವಿಸಲಾಗುವುದು ಮತ್ತು ಕನ್ನಡ ಸಾಹಿತ್ಯದ ಓದನ್ನು ಪ್ರೋತ್ಸಾಹಿಸಲಾಗುವುದು. ಕೆಲವು ಗುಂಪುಗಳಲ್ಲಿ ಇನ್ನೂ ಒಂದು ಹೆಜ್ಜೆ ಮುಂದಕ್ಕೆ ಹೋಗಿ ವಿವಿಧ ವಿಷಯಗಳ ಕುರಿತು ಅಂಕಣ ಬರಹಗಳಿಗೆ ಆದ್ಯತೆ ನೀಡಲಾಗುತ್ತಿದೆ. ಯುವ ಬರಹಗಾರರು ಬರೆದ ಅಂಕಣಗಳನ್ನು ನುರಿತ ಅನುಭವಿ ಲೇಖಕರು ಓರೆ ಕೋರೆಗಳನ್ನು ತಿದ್ದಿ ತೀಡುತ್ತಾರೆ.

ಯುವ ಸಾಹಿತಿಗಳಲ್ಲಿ ವಿಶ್ವಾಸವನ್ನು ಹೆಚ್ಚಿಸುತ್ತಾರೆ. ಭರವಸೆಯ ಅಂಕಣಕಾರರನ್ನು ಹುಟ್ಟು ಹಾಕುತ್ತಾರೆ. ಕಾವ್ಯ ಪ್ರೇಮಿಗಳು ಕವಿ ಬಳಗವನ್ನು ಕಟ್ಟಿಕೊಂಡು ಸುಂದರ ಅರ್ಥ ಪೂರ್ಣ ಕವನಗಳ ಗುಡ್ಡೆ ಹಾಕುವಲ್ಲಿ ನಿರತರಾಗಿದ್ದಾರೆ.ಕಾವ್ಯಾಸಕ್ತರು ಅದನ್ನು ವಾಚಿಸಿ ಕವಿಯ ಆಶಯವನ್ನು ಹೃದಯಾರೆ ಮೆಚ್ಚಿ ಹರಸುತ್ತಾರೆ.ಕಾವ್ಯ ತೀವ್ರತೆಯನ್ನು ಕಳೆದುಕೊಂಡು ಬರಿ ವಾಚ್ಯವೆನಿಸುತ್ತಿದ್ದರೆ ಕವಿಯನ್ನು ಎಚ್ಚರಿಸುವ ಕಾರ್ಯವೂ ಕವಿ ಮಿತ್ರರಿಂದ ನಡೆಯುತ್ತದೆ.

ಕಾವ್ಯ ಗರಡಿಯಲ್ಲಿ ಕವನಗಳ ತಾಲೀಮು ನಡೆಸಲು ಕಾವ್ಯ ಬರಹದ ಸ್ಪರ್ಧೆಯನ್ನು ಚಿತ್ರ ಕವನ, ಅಣುಕುವಾಡುಗಳ ಸ್ಪರ್ಧೆಯನ್ನು ಏರ್ಪಡಿಸಲಾಗುತ್ತದೆ. ಆಯ್ಕೆಯಾದ ಗಟ್ಟಿ ಕಾವ್ಯಗಳನ್ನು ಒಗ್ಗೂಡಿಸಿ ಕವನ ಸಂಕಲನಗಳನ್ನು ಲೋಕಾರ್ಪಣೆಗಳಿಸಿ ಓದುಗರ ಕೈಗಿತ್ತ ಉದಾಹರಣೆಗಳು ಇಲ್ಲವೆಂದಿಲ್ಲ.

ಫೇಸ್ ಬುಕ್ ನಲ್ಲಿ ಏಳು ದಿನ ಏಳು ಪುಸ್ತಕ ಎಂಬ ಅಭಿಯಾನ ಸಂಚಲನ ಮೂಡಿಸಿದ್ದು ಈಗ ಹಳೆಯ ಸುದ್ದಿ. ಬೀಗಬೇಡ ಎಂಬ ಅಭಿಯಾನವೂ ಮಾನವನ ನಶ್ವರತೆಯನ್ನು ಒತ್ತಿ ಹೇಳಿತು. ಗುಂಪಿನ ಸದಸ್ಯರ ಸಮಾಗಮ ಸಂಭ್ರಮಗಳಲ್ಲಿ ಪ್ರಾದೇಶಿಕ ವಿಭಿನ್ನತೆಯನ್ನು ಅಳಿಸಿ ಹಾಕಿ ಒಗ್ಗೂಡುವಿಕೆ ಮತ್ತು ಸಂಯೋಜನೆ ಅಚ್ಚರಿ ಮೂಡಿಸುತ್ತದೆ.

ಸಾಹಿತ್ಯವನ್ನು ಇನ್ನಷ್ಟು ಗಟ್ಟಿಗೊಳಿಸುವ ಮತ್ತು ಗಟ್ಟಿ ಸಾಹಿತ್ಯವನ್ನು ಜೀವಂತವಿರಿಸುವ ಮುನ್ನಡೆಸುವ, ಓದುಗರ ಸಂಖ್ಯೆಯನ್ನು ಹೆಚ್ಚಿಸುವ ಕಾರ್ಯಕ್ಕೆ ಈ ಸಾಮಾಜಿಕ ಜಾಲತಾಣಗಳು ಕೈ ಹಾಕಿವೆ. ಅಗ್ಗದ ಸಾಹಿತ್ಯಕ್ಕೆ ಮಾರು ಹೋಗದಂತೆ ಸದಭಿರುಚಿ ಸಾಹಿತ್ಯದಲ್ಲಿ ನೆಲೆಯೂರುವಂತೆ ಎಚ್ಚರಿಸುವ ಕಾರ್ಯ ಮಾಡುತ್ತಿವೆ.

ಗುಂಪಿನ ಸಮಾಗಮದಲ್ಲಿ ಸಾಮಿಪ್ಯ ಒಡನಾಟದ ಭಾಗ್ಯ ಒಬ್ಬರನ್ನೊಬ್ಬರು ಅರಿವ ಭಾಗ್ಯ ಕಲ್ಪಿಸಲಾಗುತ್ತಿದೆ. ಆನ್ ಲೈನ್ ಪತ್ರಿಕೆಗಳಂತೂ ಪರಿಚಯವೇ ಇಲ್ಲದ ಸಾಹಿತಿಗಳನ್ನು ಅವರ ಕೃತಿಗಳ ಮೂಲಕ ವಿಶ್ವದಾದ್ಯಂತ ಹರಡಿರುವ ಕನ್ನಡಿಗರಿಗೆ ಗುರುತಿಸುವ ಕೈಂಕರ್ಯದಲ್ಲಿ ತೊಡಗಿಕೊಂಡಿವೆ ಪ್ರಕೃತಿ ಶಿಕ್ಷಣ ನಾಡು ನುಡಿ ಸಾಮಾಜಿಕ ಕಳಕಳಿಯ ಕನ್ನಡ ಸಾಹಿತ್ಯವನ್ನು ಆಳವಾಗಿ ಅರಿಯಲು ನೆರವಾಗುತ್ತಿದೆ.

ನಾಡಿನ ನಾನಾ ಭಾಗಗಳಲ್ಲಿನ ವೈವಿಧ್ಯಮಯ ಜೀವನ ತಿಳಿದುಕೊಳ್ಳಲು ಅವಕಾಶ ಒದಗಿಸುತ್ತಿವೆ.. ಹೀಗೆ ಸಾಮಾಜಿಕ ಜಾಲತಾಣಗಳು .ವಿಶ್ವ ಮಟ್ಟದ ಸಾಹಿತ್ಯದಲ್ಲಿ ತಾನೇನೂ ಕಡಿಮೆ ಇಲ್ಲವೆನ್ನುವಂತೆ ಮುನ್ನುಗ್ಗಲು ಸಹಕಾರಿಯಾಗಿವೆ..

ಕನ್ನಡ ಸಾಹಿತ್ಯದ ಮನಸ್ಸುಗಳನ್ನು ಚದುರದಂತೆ ಒಗ್ಗೂಡಿಸುವ ಕಾರ್ಯದಲ್ಲಿ ನಿರತವಾಗಿವೆ ನಾವು ಅಂದುಕೊಂಡಂತೆ ಸಾಹಿತ್ಯ ಸಾಮಾಜಿಕ ಜಾಲತಾಣಗಳ ಅಬ್ಬರದಲ್ಲಿ ಮರೆಯಾಗುತ್ತಿಲ್ಲ ಬದಲಾಗಿ, ಬದಲಾವಣೆಯ ಜೊತೆಗೆ ಬದಲಾದ ರೂಪದಲ್ಲಿ ತನ್ನ ಅಸ್ತಿತ್ವ ಕಾಯ್ದುಕೊಳ್ಳುತ್ತ ದಾಪುಗಾಲಿಡುತ್ತಿದೆ.


ಜಯಶ್ರೀ ಅಬ್ಬಿಗೇರಿ
ಬೆಳಗಾವಿ

- Advertisement -
- Advertisement -

Latest News

ಎಮ್ಮೆತಮ್ಮನ ಕಗ್ಗದ ತಾತ್ಪರ್ಯ 

  ಧನಕನಕ‌ ನವರತ್ನ ನಿನ್ನೊಡವೆಯಲ್ಲಬಿಡು ನಿನ್ನೊಡವೆಯೆಂಬುವುದು ಜ್ಞಾನರತ್ನ ಈ ರತ್ನ ಧರಿಸಿದೊಡೆ ಲೋಕದಲಿ‌ ನಿನಗಿಂತ ಸಿರಿವಂತರಾರಿಲ್ಲ - ಎಮ್ಮೆತಮ್ಮ ||೧೩೧|| ಶಬ್ಧಾರ್ಥ ಧನಕನಕ = ಹಣ ಬಂಗಾರ. ನವರತ್ನ = ಒಂಬತ್ತು ಹರಳು ತಾತ್ಪರ್ಯ ಗಳಿಸಿರುವ ಹಣ‌...
- Advertisement -

More Articles Like This

- Advertisement -
close
error: Content is protected !!
Join WhatsApp Group