ಬೀದರ – ಜಿಲ್ಲೆಯ ಹುಮನಾಬಾದ ತಾಲೂಕಿನ ನಲ್ಲಿ ಬಾರಿ ಅನಾಹುತವೊಂದು ತಪ್ಪಿದೆ. ಕಂಟೇನರ್ ಲಾರಿಯ ಟೈರ್ ಬ್ಲಾಸ್ಟ್ ಆದ ಕಾರಣ ಲಾರಿಯು ಬೀದರ್- ಕಲ್ಬುರ್ಗಿ ಬಸ್ ಗೆ ಡಿಕ್ಕಿ ಹೊಡೆದಿದೆ.
ಅಪಘಾತದ ಪರಿಣಾಮ 8 ಕ್ಕೂ ಅಧಿಕ ಜನರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು ಮುಂದಾಗಬಹುದಾಗಿದ್ದ ಭಾರೀ ಅನಾಹುತ ತಪ್ಪಿದೆ. ಈ ಘಟನೆ ಜಿಲ್ಲೆಯ ಹುಮನಾಬಾದ್ ತಾಲ್ಲೂಕು ವಸಂತಪುರ ಬಳಿ ಶುಕ್ರವಾರ ರಾತ್ರಿ ಸಂಭವಿಸಿದೆ.
ಸಂಜೆ 6ಗಂಟೆ ಸುಮಾರಿಗೆ ಬೀದರನಿಂದ ಬಿಟ್ಟ ಬಸ್ ಬಸಂತಪುರ ಸಮೀಪ ತಲುಪುತಿದ್ದ ಹಾಗೆ ಎದುರಿನಿಂದ ಬರುತ್ತಿದ್ದ ಕಂಟೆನರ್ ಲಾರಿಯ ಮುಂದಿನ ಟೈರ್ ಸ್ಫೋಟಗೊಂಡು ಎದುರಿಗೆ ಬರುತ್ತಿದ್ದ ಬಸ್ಸಿಗೆ ರಭಸವಾಗಿ ಡಿಕ್ಕಿಹೊಡೆದ ಪರಿಣಾಮ ಘಟನೆ ಸಂಭವಿಸಿದೆ.
ಸ್ಥಳೀಯ ಶಾಸಕರ ರಾಜಶೇಖರ ಪಾಟೀಲ ಭೇಟಿ:
ಘಟನೆ ಸಂಭವಿಸಿದಾಗ ಕಲ್ಬುರ್ಗಿಯಿಂದ ಹುಮನಾಬಾದ್ ಕಡೆಗೆ ಬರುತ್ತಿದ್ದ ಶಾಸಕ ರಾಜಶೇಖರ ಪಾಟೀಲ ತಕ್ಷಣ ಆಂಬುಲೆನ್ಸ್ ಸ್ಥಳಕ್ಕೆ ತರಿಸಿ, ಗಾಯಾಳುಗಳನ್ನು ಸರ್ಕಾರಿ ಆಸ್ಪತ್ರೆಗೆ ಕಳಿಸುವ ವ್ಯವಸ್ಥೆ ಮಾಡಿದರು.
ಇದೇ ವೇಳೆ ಸ್ಥಳಕ್ಕೆ ಭೇಟಿ ನೀಡಿದ ಸಿಪಿಐ ಮಲ್ಲಿಕಾರ್ಜುನ ಯಾತನೂರ ಹಾಗೂ ಸಿಬ್ಬಂದಿ ರಸ್ತೆತುಂಬಾ ಚೆಲ್ಲಾಪಿಲ್ಲಿಯಾಗಿ ಬಿದ್ದ ಗಾಜಿನ ತುಂಡುಗಳನ್ನು ರಸ್ತೆ ಪಕ್ಕಕ್ಕೆ ಎಸೆಯುವ ಮೂಲಕ ಮುಂದೆ ಆಗುವ ಅನಾಹುತ ತಪ್ಪಿಸಲು ನೆರವಾದರು.
ಗಾಯಾಳುಗಳ ಪೈಕಿ ಕೆಲವರು ಬೀದರನಿಂದ ಕಲ್ಬುರ್ಗಿಗೆ ತೆರಳುತಿದ್ದರೆ ಇನ್ನೂ ಕೆಲವರು ಗಡವಂತಿ ಮತ್ತಿತರ ಊರುಗಳಿಗೆ ತೆರಳುತಿದ್ದರು ಎನ್ನಲಾಗಿದೆ. 8ಜನ ಪ್ರಯಾಣಿಕರಿಗೆ ಸಣ್ಣಪುಟ್ಟ ಗಾಯಗಳಾಗಿದ್ದಾಗಿ ಸಿಪಿಐ ಯಾತನೂರ ತಿಳಿಸಿದರು.
ವರದಿ: ನಂದಕುಮಾರ ಕರಂಜೆ
ಟೈಮ್ಸ್ ಆಫ್ ಕರ್ನಾಟಕ,ಬೀದರ