ಸಿಂದಗಿ; ಶಿಕ್ಷಕರ ಕೊರತೆಯಿಂದಾಗಿ ಮಕ್ಕಳು ಬಯಲಿನಲ್ಲಿ ವ್ಯಾಸಂಗ ಮಾಡುತ್ತಿರುವ ಪ್ರಸಂಗ ತಾಲ್ಲೂಕಿನ ಓತಿಹಾಳ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದಿದ್ದು ಶಿಕ್ಷಕರ ಕೊರತೆ ನೀಗಿಸುವಂತೆ ಆಗ್ರಹಿಸಿ ಎಸ್ ಡಿ ಎಮ್ ಸಿ ಸದಸ್ಯರು ಹಾಗೂ ಗ್ರಾಮಸ್ಥರಿಂದ ಶಾಲೆಗೆ ಬೀಗ ಜಡಿದು ಪ್ರತಿಭಟನೆ ನಡೆಸಿದರು.
ಎಸ್‍ಡಿಎಂಸಿ ಅಧ್ಯಕ್ಷ ಶಿವಾನಂದ ಸಾಲಿಮಠ ಮಾತನಾಡಿ, ಖಾಸಗಿ ಶಾಲೆಗಳಿಗೆ ಸವಾಲೊಡ್ಡುವ ರೀತಿಯಲ್ಲಿ ಎಲ್ಲ ಸರಕಾರಿ ಪ್ರಾಥಮಿಕ ಶಾಲೆಗಳಿಗೆ ಮೂಲಭೂತ ಸೌಲಭ್ಯಗಳನ್ನು ನೀಡಿ ಉತ್ತಮ ಶಿಕ್ಷಣ ನೀಡಲಾಗುತ್ತಿದೆ ಎಂದು ಶಿಕ್ಷಣ ಸಚಿವರು ಪ್ರತಿಯೊಂದು ಸಭೆಗಳಲ್ಲಿ ಭಾಷಣ ಬಿಗಿಯುತ್ತಿದ್ದಾರೆ ಆದರೆ ಓತಿಹಾಳ ಗ್ರಾಮದ ಸರಕಾರಿ ಪ್ರಾಥಮಿಕ ಶಾಲೆಗೆ ಅನ್ವಯಿಸುವುದಿಲ್ಲವೇ ಶಿಕ್ಷಕರ ಕೊರತೆಯನ್ನು ನೀಗಿಸಿ ಎಂದು ಹಲವಾರು ಬಾರಿ ಶಿಕ್ಷಣ ಇಲಾಖೆಗೆ ನೇರವಾಗಿ ಭೇಟಿಯಾಗಿ ತಿಳಿಸಿದಾಗ್ಯೂ ಬಿಇಓ ಮಾತ್ರ ಖಾಸಗಿ ಶಿಕ್ಷಣ ಸಂಸ್ಥೆಯೊಂದಿಗೆ ಮಿಲಾಪಿಯಾಗಿ ಶಿಕ್ಷಕರ ಕೊರತೆ ನೀಗಿಸುವಲ್ಲಿ ಹಿಂದೇಟು ಹಾಕುತ್ತಿದ್ದಾರೆ ಇದರಿಂದ ಮಕ್ಕಳು ಈ ಕೊರತೆಯನ್ನು ನೋಡಿ ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ಮೊರೆ ಹೋಗುವುದು ಅನಿವಾರ್ಯವಾಗಬೇಕು ಎನ್ನುವ ರೀತಿಯಲ್ಲಿ ನಡೆದುಕೊಳ್ಳುತ್ತಿದ್ದಾರೆ ಎಂದು ಇಲಾಖೆಯ ಮೇಲೆ ಹರಿಹಾಯ್ದರು.
ಶಾಲೆಗೆ ಭೇಟಿ ನೀಡಿದ ಶಿಕ್ಷಣ ಸಂಯೋಜಕ ವ್ಹಿ.ಬಿ.ಬಡೇಘರ ಅವರು ಮಾತನಾಡಿ, ಸರಕಾರದ ವರ್ಗಾವರ್ಗೀ ಪ್ರಕ್ರೀಯೆ ನಡೆದಿದ್ದು ಆದಷ್ಟು ಬೇಗ ಶಿಕ್ಷಕರ ಕೊರತೆ ನಿಗುತ್ತದೆ ಅಲ್ಲದೆ ತಾತ್ಕಾಲಿಕವಾಗಿ ಒಬ್ಬ ಶಿಕ್ಷಕರನ್ನು ಬಿಇಓ ಅವರು ನಿಯೋಜನೆ ಮಾಡುವುದಾಗಿ ಹೇಳಿದ್ದಾರೆ ಮತ್ತು ಅತಿಥಿ ಶಿಕ್ಷಕರ ನೇಮಕಾತಿ ಮಾಡಿಕೊಳ್ಳಲು ಎಸ್.ಡಿಎಂಸಿ ಹಾಗೂ ಮುಖ್ಯೋಪಾಧ್ಯಾಯರು ಜಾಹೀರು ನೀಡಿ ಸ್ಥಳೀಯ ವಿದ್ಯಾವಂತರಿಗೆ ನೇಮಕಾತಿ ಮಾಡಿಕೊಳ್ಳಬಹುದು ಅದರ ನಿರ್ದೇಶನ ನೀಡಲಾಗಿದೆ ಒಬ್ಬರು ಅತಿಥಿ ಶಿಕ್ಷಕರು ಬಂದಿದ್ದು ಇನ್ನೂ ಕೆಲ ದಿನಗಳಲ್ಲಿ ಸಂಪೂರ್ಣ ಕೊರತೆ ನೀಗುತ್ತದೆ ಶಾಲೆಯ ಬೀಗ ತೆಗೆದು ಸಹಕರಿಸಿ ಎಂದು ಪ್ರತಿಭಟನೆ ತೆರವುಗೊಳಿಸಿದರು.
ಮುಖ್ಯೋಪಾದ್ಯಾಯ ವೈ.ಎಸ್.ಬೂದಿಹಾಳ ಮಾತನಾಡಿ, ಈ ಶಾಲೆಗೆ ಒಟ್ಟು 300 ವಿದ್ಯಾರ್ಥಿಗಳ ದಾಖಲಾತಿಯಿದ್ದು ಇದರ ಅನುಗುಣವಾಗಿ ಮುಖ್ಯೋಪಾದ್ಯಾಯ ಹಾಗೂ ದೈಹಿಕ ಶಿಕ್ಷಕ ಹೊರತು ಪಡಿಸಿ 10 ಸಹ ಶಿಕ್ಷಕರು ಬೇಕು ಆದರೆ 5 ಜನ ಶಿಕ್ಷಕರು ಇದ್ದಾರೆ ಇದರಿಂದ ಮಕ್ಕಳಿಗೆ 6 ವಿಷಯಗಳ ಬೋಧನೆ ದೊರಕುತ್ತಿಲ್ಲ ಅದಕ್ಕೆ ಎಸ್‍ಡಿಎಂಸಿ ಪದಾಧಿಕಾರಿಗಳಿಗೆ ತಿಳಿಸಲಾಗಿದ್ದು ಅವರು ಅನೇಕ ಬಾರಿ ಇಲಾಖೆಗೆ ಮನವಿ ಸಲ್ಲಿಸಿದ್ದಾರೆ ಎಂದು ತಿಳಿಸಿದರು.
ಕ್ಷೇತ್ರ ಶಿಕ್ಷಣಾಧಿಕಾರಿ ಆರ್.ಎಸ್. ನಿರಲಗಿ ಅವರು ದೂರವಾಣಿ ಮೂಲಕ ಮಾತನಾಡಿ, ಶಿಕ್ಷಕರ ಸಮಸ್ಯೆ ಒಂದು ಊರಿನ ಸಮಸ್ಯೆಯಲ್ಲ ಇಡೀ ತಾಲೂಕಿನ ಸಮಸ್ಯೆಯಾಗಿದೆ ಆದರೆ ಇವಾಗ್ಗೆ ವರ್ಗಾವಣೆ ಪ್ರಕ್ರಿಯೆ ಪ್ರಾರಂಭವಾಗಿದ್ದು ಇದರಿಂದ ಈ ಕೊರತೆ ನಿಗುತ್ತದೆ ಎನ್ನುವ ಭರವಸೆಯಿದೆ ಅಲ್ಲದೆ ವಿದ್ಯಾರ್ಥಿಗಳ ಹಾಜರಾತಿಗೆ ಅನುಗುಣವಾಗಿ ಶಿಕ್ಷಕರನ್ನು ಬೇರೆ ಶಾಲೆಯಿಂದ ವರ್ಗಾವರ್ಗಿ ಮಾಡುವ ಹಾಗೂ ಹೆಚ್ಚುವರಿ ಶಿಕ್ಷಕರನ್ನು ನಿಯೋಜನೆ ಮಾಡುವ ಅಧಿಕಾರ ಬಿಇಓಗೆ ಇಲ್ಲ ನಾವು ನೊಂದಣಿ ನೋಡುವುದಿಲ್ಲ ಹಾಜರಾತಿಗನುಗುಣವಾಗಿ ವರದಿ ಸಲ್ಲಿಸುತ್ತೇವೆ ಅದು ಆನ್‍ಲೈನ್ ಮೂಲಕ ಸರಕಾರವೇ ಕ್ರಮ ತೆಗೆದುಕೊಳ್ಳುತ್ತದೆ ಎಂದು ಉತ್ತರಿಸಿದರು.
ಈ ಸಂದರ್ಭದಲ್ಲಿ ನೂರಾರು ಗ್ರಾಮಸ್ಥರು ಇದ್ದರು.