ಕಾನೂನು ಬಾಹಿರ ಸಾರಾಯಿ ಮಾರಾಟ ನಿಲ್ಲಿಸಲು ಮಹಿಳೆಯರಿಂದ ಜಿಲ್ಲಾಧಿಕಾರಿಗೆ ಮನವಿ

0
648

ಹೆಂಡತಿಯರ ತಾಳಿ ಗಿರವಿ ಇಟ್ಟು ಸಾರಾಯಿ ಕುಡಿಯುತ್ತಾರೆ ಈ ಗ್ರಾಮದಲ್ಲಿ…

ಬೀದರ: ಗಡಿ ಜಿಲ್ಲೆಯ ಬೀದರ್ ಮಹಾರಾಷ್ಟ್ರ ಗಡಿಗೆ ಹೊಂದಿಕೊಂಡಿರುವ ಹುಲಸೂರು ತಾಲ್ಲೂಕಿನಲ್ಲಿ ಕಾನೂನು ಬಾಹಿರವಾಗಿ ಸಾರಾಯಿ ಮಾರಾಟ ಜೋರಾಗಿದ್ದು ಇದರಿಂದ ತಮ್ಮ ಗಂಡ, ಮಕ್ಕಳು ದಾರಿ ಬಿಡುತ್ತಿದ್ದಾರೆ ಆದ್ದರಿಂದ ಇವುಗಳನ್ನು ಬಂದ್ ಮಾಡಿಸಬೇಕು ಎಂದು ತಾಲೂಕಿನ ಸೋಲದಾಬಕಾ ಗ್ರಾಮದ ಮಹಿಳೆಯರು ಜಿಲ್ಲಾಧಿಕಾರಿ ಮುಂದೆ ಕೈ ಮುಗಿದರು.

ಸೋಲದಾಬಕಾ ಗ್ರಾಮದಲ್ಲಿ ಬೇಕಾಬಿಟ್ಟಿಯಾಗಿ ಸಾರಾಯಿ ಮಾರಾಟ ಮಾಡುತ್ತಿದ್ದಾರೆ ಅವುಗಳಿಗೆ ಪರವಾನಿಗೆ ಕೂಡ ಇರುವುದಿಲ್ಲ. ಊರಿನಲ್ಲಿ ಸಾರಾಯಿ ಅಂಗಡಿಗಳು ಹೆಚ್ಚಾಗಿದ್ದು ತಮ್ಮ ಗಂಡಂದಿರು, ಮಕ್ಕಳು ಹಣ ಇಲ್ಲದಾಗಿ ತಾಳಿ, ಕಾಲುಂಗುರ ಕೂಡ ಮಾರಾಟ ಮಾಡಿ ಸಾರಾಯಿ ಕುಡಿಯುತ್ತಿದ್ದಾರೆ ಆದ್ದರಿಂದ ತಮ್ಮನ್ನು ಕಾಪಾಡಬೇಕು ಎಂದು ಮಹಿಳೆಯರು ನೋವು ತೋಡಿಕೊಂಡರು.

ಬೇರೆ ಕಡೆಯಿಂದ ಸಾರಾಯಿ ತಂದು ಗ್ರಾಮದಲ್ಲಿ ಮಾರಾಟ ಮಾಡುತಿದ್ದು ಈ ಬಗ್ಗೆ ಆಡಳಿತ ಗಮನ ಹರಿಸಬೇಕು. ಸಾರಾಯಿ ಮಾರಾಟ ಹೆಚ್ಚಾಗಿ ನಮ್ಮ ಜೀವನ ಹಾಳು ಮಾಡುತ್ತಿರುವುದಾಗಿ ಮಹಿಳೆಯರು ಜಿಲ್ಲಾಧಿಕಾರಿಗಳಿಗೆ ದೂರಿದರು.

ಮಹಿಳೆಯರ ಅಳಲು ಆಲಿಸಿದ ಜಿಲ್ಲಾಧಿಕಾರಿಗಳು ಪರವಾನಿಗೆ ಇಲ್ಲದ ಅಂಗಡಿಗಳ ವಿರುದ್ಧ ಕ್ರಮ ಕೈಗೊಳ್ಳಲು ಅಬಕಾರಿ ಇಲಾಖೆಗೆ ತಿಳಿಸುವುದಾಗಿ ಭರವಸೆ ನೀಡಿದರು.

ಸಾಮಾಜಿಕ ಸ್ವಾಸ್ಥ್ಯ ಹಾಳು ಮಾಡುತ್ತಿರುವ ಅನಧಿಕೃತ ಸಾರಾಯಿ ಅಂಗಡಿಗಳನ್ನು ಮುಚ್ಚಿಸಲು ಸರ್ಕಾರ, ಜಿಲ್ಲಾಡಳಿತ ದಿಟ್ಟ ಕ್ರಮ ಕೈಗೊಳ್ಳಬೇಕಾಗಿದೆ.


ವರದಿ: ನಂದಕುಮಾರ ಕರಂಜೆ, ಬೀದರ