ಮೂಡಲಗಿ: ಪತ್ರಿಕಾ ವಿತರಕರ ಪಾದ ಪೂಜೆಯನ್ನು ಮಾಡುವ ಮೂಲಕ ಮೂಡಲಗಿಯಲ್ಲಿ ಕಾರ್ಯನಿರತ ಪತ್ರಕರ್ತರ ಸಂಘ ಹಾಗೂ ಮಾಧ್ಯಮ ವಿವಿಧ ಸಂಂಘಟನೆಯವರು ಭಾನುವಾರ ಪತ್ರಿಕಾ ವಿತರಕರ ದಿನಾಚರಣೆಯನ್ನು ವಿನೂತನ ಮಾದರಿಯಾಗಿ ಆಚರಿಸಿದರು.
ಸಂಘದ ಅಧ್ಯಕ್ಷ ಕೃಷ್ಣಾ ಗಿರೆಣ್ಣವರ ಹಾಗೂ ಪತ್ರಿಕೆ ವಿತರಕ ಸಂಘದ ಅಧ್ಯಕ್ಷ ಶಿವಬಸು ಗಾಡವಿ ಅವರು ಪತ್ರಿಕಾ ವಿತರಕರ ಪಾದಗಳನ್ನು ನೀರಿನಿಂದ ತೊಳೆದು ಪೂಜೆಯನ್ನು ಸಲ್ಲಿಸಿ, ಅವರ ಪಾದಗಳಿಗೆ ಪುಷ್ಪಗಳನ್ನು ಅರ್ಪಿಸಿದರು. ನಂತರ ವಿತರಕರಿಗೆ ಸಿಹಿ ತಿನಿಸಿ ಶಾಲು, ಹೂಮಾಲೆ ಹಾಕಿ. ಪೆನ್, ನೋಟಬುಕ್‍ಗಳನ್ನು ಕಾಣಿಕೆಯಾಗಿ ನೀಡಿ ಸನ್ಮಾನಿಸಿ ಗೌರವಿಸಿದರು.
‘ನಮ್ಮ ಪಾದ ಪೂಜೆಯನ್ನು ಮಾಡಿದ್ದು ನಮ್ಮ ಹೃದಯ ತುಂಬಿ ಬಂದಿದೆ. ಪೇಪರ್ ಹಂಚುವವರಿಗೆ ಇಂಥಾ ದೊಡ್ಡ ಗೌರವ ಕೊಟ್ಟಿದ್ದು ಹೆಮ್ಮೆ ಅನಿಸುತ್ತದರ್ರೀ’ ಎಂದು ಪತ್ರಿಕೆ ಹಂಚುವ ಸಿದ್ದಪ್ಪ ಕಪ್ಪಲಗುದ್ದಿ ಪ್ರತಿಕ್ರಿಯಿಸಿದರು.
‘ಮಳೆ, ಚಳಿ, ಬಿಸಿಲು ಎನ್ನದೆ ನಸುಕಿನಲ್ಲಿ ಪತ್ರಿಕೆಯನ್ನು ಓದುಗರ ಕೈಗೆ ತಲುಪಿಸುವ ಪತ್ರಿಕಾ ವಿತರಕರ ಪಾತ್ರ ಪತ್ರಿಕೋದ್ಯಮದಲ್ಲಿ ಮಹತ್ವದಾಗಿದೆ. ಕಾರ್ಮಿಕರಿಗೆ ನೀಡುವಂತ ಸೌಲಭ್ಯಗಳನ್ನು ಸರ್ಕಾರ ಪತ್ರಿಕಾ ವಿತರಕರಿಗೂ ನೀಡಬೇಕು’ ಎಂದು ಪತ್ರಕರ್ತರ ಸಂಘದ ಅಧ್ಯಕ್ಷ ಕೃಷ್ಣಾ ಗಿರೆಣ್ಣವರ ಹಾಗೂ ಪ್ರಧಾನ ಕಾರ್ಯದರ್ಶಿ ಮಲ್ಲು ಬೋಳನ್ನವರ ಹೇಳಿದರು.
ಪತ್ರಿಕಾ ಬಳದ ಪದಾಧಿಕಾರಿಗಳು, ಸದಸ್ಯರು ಭಾಗವಹಿಸಿದ್ದರು.