spot_img
spot_img

ಉತ್ತಮ ಜೀವನಕೆ, ಜೀವನ ಕೌಶಲ್ಯಗಳು

Must Read

spot_img
- Advertisement -

ಇತರರ ಗುಣಾವಗುಣಗಳ ಬಗೆಗೆ ಪುಂಖಾನುಪುಂಖವಾಗಿ ಮಾತನಾಡುವ ನಾವು, ನಮ್ಮ ಗುಣ ವಿಶೇಷತೆಗಳ ಮತ್ತು ಅವಗುಣಗಳ ಕುರಿತು ಚಿಂತಿಸುವುದರ ಗೊಡವೆಗೆ ಹೋಗುವುದೇ ಇಲ್ಲ. ಹೋದರೂ ಅದನ್ನು ಗಂಭೀರವಾಗಿ ಪರಿಗಣಿಸುವುದೇ ಇಲ್ಲ. ಮೇಲಕ್ಕೇರಿದವರ ಹಾಗೆ ಆಗಬೇಕು ಎಂದು ಮೇಲಿಂದ ಮೇಲೆ ಅಂದುಕೊಳ್ಳುತ್ತೇವೆ. ಆದರೆ ಅದರ ಪ್ರತಿ ಗಟ್ಟಿಯಾಗಿ ನಿಂತಿಕೊಳ್ಳುವುದೇ ಇಲ್ಲ. ಹೀಗೇಕೇಗಾಗುತ್ತದೆ? ಉತ್ತಮ ಜೀವನಕ್ಕೆ ಬೇಕಾದ ಕೌಶಲ್ಯಗಳಾದರೂ ಯಾವವು? ಅವುಗಳನ್ನು ಪಡೆಯುವ ಬಗೆ ಹೇಗೆ? ಎಂಬ ಪ್ರಶ್ನೆ ತಲೆಯಲ್ಲಿ ಹಲವು ಬಾರಿ ಸುಳಿಯುತ್ತದೆ.

ಆದರೆ ಕೌಶಲ್ಯಗಳನ್ನು ರೂಡಿಸಿಕೊಳ್ಳಲು ಭಗೀರಥ ಪ್ರಯತ್ನ ಪಡಬೇಕಾಗುತ್ತದೆ ಎಂದು ತಿಳಿದು ಮತ್ತೆ ನಾಯಿ ಬಾಲದಂತೆ ಮನಸ್ಸು ಸುತ್ತಿಕೊಂಡುಬಿಡುತ್ತದೆ. ಏನೆಲ್ಲ ಒಳಿತು ನಮಗಾಗಲಿ ಎಂದು ಬಯಸುವ ನಾವು ಹೀಗೇಕೆ ನಡೆದುಕೊಳ್ಳುತ್ತೇವೆ? ಎಲ್ಲವೂ ಸುಲಭ ಎನ್ನುವ ನಮಗೆ ಯಾವುದು ಕಷ್ಟಕರವಾದದ್ದು? ಎಂಬ ಬಹುಮೂಲ್ಯ ಪ್ರಶ್ನೆ ಬಂದಾಗ ನನಗೆ ಗ್ರೀಕ್ ದೇಶದ ಪ್ರಸಿದ್ಧ ತತ್ವಜ್ಞಾನಿ ಥೇಲ್ಸ್ ನೀಡಿದ ‘ನಿನ್ನನ್ನು ನೀನು ಅರಿತುಕೊಳ್ಳುವುದು ಬಹು ಕ್ಲಿಷ್ಟಕರ.’ ಎಂಬ ಉತ್ತರ ನೆನಪಾಗುತ್ತದೆ. ನಮ್ಮ ನಡವಳಿಕೆಯನ್ನು ನಾವು ಅರ್ಥೈಸಿಕೊಳ್ಳಲು ನಮ್ಮ ಮಾತು, ಮಾಡುವ ಕೆಲಸ ಕಾರ್ಯಗಳೆಲ್ಲವನ್ನೂ ಗಮನಿಸಬೇಕು.. ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ಬಾಳಲು ನಮ್ಮನ್ನು ನಾವು ತಿಳಿದುಕೊಳ್ಳಲು ವ್ಯಕ್ತಿತ್ವವನ್ನು ಅಭಿವೃದ್ಧಿಪಡಿಸಿಕೊಳ್ಳಲು ಜೀವನ ಕೌಶಲ್ಯಗಳನ್ನು ಕರಗತ ಮಾಡಿಕೊಳ್ಳುವುದು ಅತ್ಯಗತ್ಯವಾಗಿದೆ.

ಜೀವನ ಕೌಶಲ್ಯ ಎಂದರೆ…?

ಸಾಮಾನ್ಯವಾಗಿ ನಿರ್ವಹಿಸುವ ಬದುಕಿಗಿಂತ, ಅತ್ಯುತ್ತಮ ಗುಣಮಟ್ಟದ ಜೀವನ ಪಡೆಯಲು ಅಗತ್ಯವಿರುವ ಕೌಶಲ್ಯಗಳೇ ಜೀವನ ಕೌಶಲ್ಯಗಳು ನಮ್ಮಲ್ಲಿ ಅಡಗಿರುವ ಸಂಪೂರ್ಣ ಸಾಮರ್ಥ್ಯ ಬಳಸಿ ಮಹಾತ್ವಾಕಾಂಕ್ಷೆಯನ್ನು ಈಡೇರಿಸಿಕೊಳ್ಳಲು ಸಹಕಾರಿಯಾದಂಥವು. ಬದುಕಿನ ಯಾವುದೇ ಆಯಾಮದಲ್ಲಿ ಉಪಯುಕ್ತವಾದ ಕೌಶಲ್ಯವನ್ನು ಜೀವನ ಕೌಶಲ್ಯವೆನ್ನಬಹುದು. ಅದು ಈಜು ಇರಬಹುದು ಸೈಕಲ್, ಬೈಕ್, ಕಾರ್ ಚಾಲನೆ ಇರಬಹುದು ಬದುಕಿನ ಸನ್ನಿವೇಶಗಳು, ಸಂಸ್ಕೃತಿ, ನಂಬಿಕೆಗಳು, ಪರಿಸರ ಹೀಗೆ ವಿಭಿನ್ನ ನೆಲೆಗೆ ಸಂಬಂಧಿತವಾಗಿವೆ.

- Advertisement -

ವಿವಿಧ ಕೌಶಲ್ಯಗಳು

ದೀರ್ಘವಾದ ಬದುಕಿನಲ್ಲಿ ಒಂದೊಂದು ವಯಸ್ಸಿಗೆ ಒಂದೊಂದು ಸಂದರ್ಭಕ್ಕೆ ಒಂದೊಂದು ಕೌಶಲ್ಯದ ಅಗತ್ಯತೆ ಇದ್ದೇ ಇರುತ್ತದೆ. ಶಾಲೆ ಕಾಲೇಜುಗಳಲ್ಲಿರುವಾಗ ಅಧ್ಯಯನ ಕೌಶಲ್ಯ , ಪರೀಕ್ಷೆಗಳನ್ನು ಎದುರಿಸುತ್ತಿರುವಾಗ ಇಲ್ಲವೇ ಕಠಿಣ ಸಮಸ್ಯೆಗಳು ಎದುರಾದಾಗ ಕೋಪ, ಒತ್ತಡ ನಿರ್ವಹಣೆ ಕೌಶಲ್ಯ , ಕೆಲಸ ಹುಡುಕುವಾಗ ಉದ್ಯೋಗ ಕೌಶಲ್ಯ, ವೈಯುಕ್ತಿಕ ಪ್ರಸ್ತುತಿ ಕೌಶಲ್ಯ, ಸಂಘಟನಾ ಕೌಶಲ್ಯ, ನಾಯಕತ್ವದ ಕೌಶಲ್ಯ, ಮಕ್ಕಳನ್ನು ಪೋಷಿಸುವಾಗ ಪೋಷಕರ ಕೌಶಲ್ಯಗಳು ಹೀಗೆ ವಿಭಿನ್ನ ಕೌಶಲ್ಯಗಳ ಪಟ್ಟಿ ಬೆಳೆಯುತ್ತಲೇ ಹೋಗುತ್ತದೆ.

ಹೇಗೆ ಕಲಿಯುವುದು?

ನಾಳೆಯ ಸವಾಲುಗಳಿಗೆ ಹೆದರದಂತೆ ಹಿಮ್ಮೆಟ್ಟದಂತೆ ಇಂದೇ ಉತ್ತರ ಹುಡುಕುವ ಕಲೆ ಕೌಶಲ್ಯಗಳನ್ನು ಕಲಿತುಕೊಳ್ಳುವ ಜಾಣತನ ಮೈಗೂಡಿಸಿಕೊಳ್ಳಬೇಕಿದೆ. ಜೀವನ ಕೌಶಲ್ಯಗಳ ನಿರ್ಣಾಯಕ ಪಟ್ಟಿ ಇಲ್ಲ. ಆದರೆ ಪ್ರಪಂಚದ ಚರಿತ್ರೆಯಲ್ಲಿ ದಾಖಲಾದ ಕೆಲ ಪ್ರಮುಖ ಕೌಶಲ್ಯಗಳೆಂದರೆ ನಮ್ಮನ್ನು ನಾವು ಚೇತನಗೊಳಿಸಿಕೊಳ್ಳುವಿಕೆ, ನಿರಂತರ ಕಾರ್ಯಶೀಲತೆ, ಸಮಯ ನಿರ್ವಹಣೆ, ಸ್ವಯಂ ನಿಯಂತ್ರಣ, ನಾಯಕತ್ವದ ಗುಣಗಳು, ಸಂಹವನ ಕೌಶಲ್ಯ. ಇವುಗಳನ್ನು ಹೀಗೇ ಕಲಿತುಕೊಳ್ಳಬೇಕು ಅಥವಾ ಹೀಗೇ ಕಲಿಸಬೇಕು ಎನ್ನುವುದು ಇನ್ನೂ ಸ್ಪಷ್ಟವಾಗಿಲ್ಲ. ಆದರೆ ಮಾರುಕಟ್ಟೆಯಲ್ಲಿ ಅಸಂಖ್ಯ ಮಾರ್ಗದರ್ಶಿ ಸೂತ್ರಗಳು ನಮಗೆ ಲಭ್ಯ. ಹೆಜ್ಜೆ ಹೆಜ್ಜೆಗೂ ನೆರವಾಗುವ ಕೈ ಪಿಡಿಗಳು ನಿರ್ಮಾಣ ಸೂಚಿಗಳೂ ದೊರೆಯುವವು. ಅವುಗಳ ಸಹಾಯದಿಂದ ಜೀವನ ಕೌಶಲ್ಯಗಳನ್ನು ನಮ್ಮದಾಗಿಸಿಕೊಳ್ಳಬಹುದು. ಎಷ್ಟೆಲ್ಲ ಹೊಸ ಹೊಸ ಕೌಶಲ್ಯಗಳನ್ನು ಕಲಿತರೂ ಜೀವನ ಎಸೆಯುವ ಸವಾಲುಗಳಿಗೆ ಪ್ರಪಂಚದ ಬಗ್ಗೆ ತಿಳುವಳಿಕೆ ಹೆಚ್ಚಿಸಿಕೊಳ್ಳುವುದು ಅನಿವಾರ್ಯ. ಇವುಗಳನ್ನು ನೇರವಾಗಿ ಕಲಿಸುವುದು ಕಠಿಣ ಸಾಧ್ಯ. ಆದರೆ ಅನುಭವ ಮತ್ತು ಅಭ್ಯಾಸದ ಮೂಲಕ ಪರೋಕ್ಷವಾಗಿ ಕಲಿಯಬಹುದು. ವಿವೇಕಾನಂದರ ನುಡಿಯಂತೆ ‘ಅನುಭವವೇ ಗುರು.’ ದಿನ ನಿತ್ಯದ ಜೀವನದಲ್ಲಿ ಮುಖ್ಯ ಪಾತ್ರ ವಹಿಸುವ ಕೆಲ ಪ್ರಮುಖ ಕೌಶಲ್ಯಗಳನ್ನು ಇಲ್ಲಿ ತಿಳಿಯೋಣ.

ಸಂಹವನ ಕಲೆ

ತುಂಬಾ ಸಂಕೀರ್ಣವಾಗಿರುವ ಸಂವಹನ ಕೌಶಲ್ಯ ಜೀವನದ ಅತ್ಯಂತ ಪ್ರಮುಖ ಕೌಶಲ್ಯಗಳಲ್ಲೊಂದು. ಇದರ ಕಲಿಕೆಗೆ ಬಹು ಕಾಲ ಹಿಡಿಯುವುದು. ‘ಮೌನಿನೋ ಕಲಹಂ ನಾಸ್ತಿ.’ ಎಂಬ ಸಂಸ್ಕೃತಿ ಉಕ್ತಿ, ‘ಮೌನ ಅನಂತದಷ್ಟು ಆಳವಾದದ್ದು, ಮಾತು ಕಾಲದಷ್ಟು ಕ್ಷಣಿಕ.’ ಎಂಬ ಥಾಮಸ್ ಕಾರ್ಲೈಲ್‍ರ ನುಡಿ. ‘ಎಷ್ಟು ತಿಳಿದಿದೆಯೋ ಅದಕ್ಕಿಂತ ಕಡಿಮೆ ಮಾತಿರಲಿ’ ಎನ್ನುವ ಷೇಕ್ಸಪಿಯರ್‍ನ ನುಡಿ ಸತ್ಯವಾಗಿದ್ದರೂ ಸಂಹವನದ ಮಹಿಮೆಯನ್ನು ಅಲ್ಲಗಳೆಯುವಂತಿಲ್ಲ. ನಿಧಾನವಾಗಿ ಪಕ್ವಗೊಳ್ಳುವ ಕೌಶಲ್ಯವಿದು. ವಿಸ್ಟನ್ ಚರ್ಚಿಲ್ , ಡೆಮೊನಸ್ತನಿಸ್ ಈ ಕೌಶಲ್ಯದ ಮೂಲಕ ಜಗವ ಗೆದ್ದವರು. ಇದಕ್ಕೆ ಸಾಕಷ್ಟು ಅಧ್ಯಯನ, ಜನ ಸಂಪರ್ಕ, ಭಾವೋದ್ವೇಗಗಳ ನಿಯಂತ್ರಣ, ವಿವೇಕ ವಿವೇಚನೆ ಬೇಕು. ಮುಂದಿನವರ ಮಾತುಗಳನ್ನು ಪರಿಣಾಮಕಾರಿಯಾಗಿ ಆಲಿಸುವ ಕಲೆಯು ಇಲ್ಲ ಸಲ್ಲದ ವಾದಗಳನ್ನು ಇಲ್ಲವಾಗಿಸುತ್ತದೆ. ಎಂಥ ಗಂಭೀರ ಸಮಸ್ಯೆಯನ್ನು ಪರಿಹರಿಸುವ ಶಕ್ತಿ ಸಂಹವನಕ್ಕಿದೆ. ಕೌಶಲ್ಯ ಕಲಿಯದಿದ್ದರೆ ಅಪಾಯವನ್ನು ತಂದೊಡ್ಡುವ ಅಪಾಯವೂ ಹೆಚ್ಚಾಗಿಯೇ ಇದೆ. ದಯೆ ಮತ್ತು ಕ್ಷಮೆಗಳು ನಿಮ್ಮ ಸಾಧನಗಳಾಗಿದ್ದರೆ ಸಂವಹನ ಕೌಶಲ್ಯ ಕಲಿಕೆ ಸುಲಭ.

- Advertisement -

ನಾಯಕತ್ವ ಗುಣ

ನಾಯಕತ್ವ ಗುಣಗಳನ್ನು ಅಭ್ಯಾಸ ಮಾಡಿಕೊಳ್ಳುವುದು ನಮಗಷ್ಟೇ ಉಪಯುಕ್ತವಾದುದು ಅಲ್ಲ, ಸಮಾಜಕ್ಕೂ ಸಹಕಾರಿ. ನಾಯಕತ್ವ ನೀಡುವ ಶಕ್ತಿಯನ್ನು ಯಾವ ಹಣ ಸಂಪತ್ತು ನೀಡುವುದಿಲ್ಲ ಗೊತ್ತೇ? ವಿನಯತೆ ನಮ್ರತೆ ವಿಧೇಯತೆಗಳು ಎಲ್ಲರಿಗಿಂತ ಕಿರಿಯ, ನಾನಿನ್ನೂ ಕಲಿಯುವುದು ಸಾಕಷ್ಟಿದೆ ಎಂಬ ಮನೋಭಾವ. ಬೇರೆಯವರಲ್ಲಿ ಅಕ್ಕರೆ ಪ್ರೀತಿ ವಿಶ್ವಾಸ ಕಾಳಜಿ.

ನಮ್ಮ ಜ್ಞಾನದ ಜೊತೆಗೆ ಇತರರ ಅಭಿಪ್ರಾಯಗಳಿಗೂ ಮನ್ನಣೆ ನೀಡುವುದು ಎಲ್ಲರೊಂದಿಗೆ ನಿಂತು ನಾವೂ ಕಾರ್ಯ ನಿರ್ವಹಿಸುವುದರಿಂದ ನಾಯಕರಾಗಬಲ್ಲೆವೇ ಹೊರತು ಬೇರೆಯವರಿಗೆ ಆಜ್ಞಾಪಿಸುವುದರಿಂದಲ್ಲ. ನಾಯಕತ್ವ ಗುಣದ ಅಧ್ಯಯನದಲ್ಲಿ ದಿನದ ಇಪ್ಪತ್ನಾಲ್ಕು  ತಾಸೂ ನಿಗದಿಗೊಳ್ಳಲಿ. ಆಂತರಿಕ ನಾಯಕತ್ವವು ಬಾಹ್ಯ ನಾಯಕತ್ವಕ್ಕಿಂತ ಮೊದಲು ಬರುತ್ತದೆ. ‘ನಾಯಕರು ವಿಭಿನ್ನ ಕೆಲಸಗಳನ್ನೇನೂ ಮಾಡುವುದಿಲ್ಲ. ಅವರು ಕೆಲಸ ಮಾಡುವ ರೀತಿ ಭಿನ್ನವಾಗಿರುತ್ತದಷ್ಟೇ.’ 

ಒತ್ತಡ ನಿರ್ವಹಣೆ

ಅತಿಯಾಗಿ ಚಿಂತಿಸುವ ಸ್ವಭಾವವನ್ನು ಬದಲಿಸುತ್ತದೆ  ಮಾನಸಿಕವಾಗಿ ಭೌತಿಕವಾಗಿ ಮೊದಲಿಗಿಂತ ಹೆಚ್ಚು ಬಲಶಾಲಿಯಾಗಿಸಿ ಬದುಕನ್ನು ಸರಳಗೊಳಿಸುತ್ತದೆ. ನಿಜವಾದ ಗೆಲುವಿನ ರಹಸ್ಯ ಅಡಗಿರುವುದೇ ಒತ್ತಡ ನಿರ್ವಹಣೆಯಲ್ಲಿ. ಒತ್ತಡ ನಿರ್ವಹಣೆಯಲ್ಲಿ ಯಶ ಗಳಿಸಿದ ವ್ಯಕ್ತಿ ಮಾಗಿದ ಹಣ್ಣಿದ್ದಂತೆ. ಮುಗ್ಧ ಮಗುವಿನಂತೆ ನಗು ಮನಸ್ಸು ನಮ್ಮದಾಗಿದ್ದರೆ ಒತ್ತಡ ನಿರ್ವಹಣೆ ತುಂಬಾ ಸುಲಭ. ಮೊದ ಮೊದಲು ಗೊಂದಲವೆನಿಸಿದ್ದು ನಡೆಯುತ್ತ ನಡೆಯುತ್ತ ಮುಂದಕ್ಕೆ ಸಾಗಿದಂತೆ ಎಲ್ಲವೂ ಸರಳವಾಗುತ್ತದೆ ಎಂಬುದನ್ನು ಅರಿಯಬೇಕು. ಮನ ಬುದ್ಧಿಗಳನ್ನು ವಿವೇಕವು ಆಳಿದಾಗ ಆ ದಿನವನ್ನು ಶಾಂತಿಯು ಆಳುತ್ತದೆ. ಒತ್ತಡ ರಹಿತ ಬದುಕು ಪವಾಡಗಳನ್ನು ತೋರಿಸುತ್ತದೆ.

ವೈಫಲ್ಯ ನಿರ್ವಹಣೆ

‘ಸಣ್ಣ ಪುಟ್ಟದ್ದಕ್ಕೆಲ್ಲ ವ್ಯಥೆ ಪಡೋರೆ ಸಣ್ಣ ಮನಸ್ಸಿನೋರು.’ ಎನ್ನುತ್ತಾರೆ ಬೆಂಜಮಿನ್ ಡಿಸ್ರಾಯಿಲ್ ಗೆಲುವಿನ ಶಿಖರವೇರಿದ ಹಲವಾರು ಸಾಧಕರು ನೂರಾರು ಸಲ ಸೋಲಿನ ಕಹಿಯನ್ನು ಕಂಡುಂಡವರೇ. ಸೋಲನ್ನು ಗೆಲುವಾಗಿ ಪರಿವರ್ತಿಸಿದವರೇ ಸಾಧಕರಾಗಿ ನಮ್ಮ ಕಣ್ಮುಂದೆ ನಿಲ್ಲುತ್ತಾರೆ. ಸೋಲಿನ ಭಯ ಬೇಡ. ಗೆಲುವಿನ ಹಾದಿಯಲ್ಲಿ ವೈಫಲ್ಯ ಒಂದು ಮೆಟ್ಟಿಲೆಂಬ ವಿಶ್ವಾಸ ಮನಸ್ಸಿನಲ್ಲಿ ನಾಟಿಕೊಂಡರೆ ಜಯಲಕ್ಷ್ಮೀ ಒಲಿಯುವಳು ಜೊತೆಗೆ ಉತ್ತಮ ಜೀವನ ಕೂಡ.


ಜಯಶ್ರೀ.ಜೆ. ಅಬ್ಬಿಗೇರಿ, ಬೆಳಗಾವಿ  9449234142

- Advertisement -
- Advertisement -

Latest News

೧೫ ನೇ ಅಂತರ ತೋಟಗಾರಿಕೆ ಮಹಾವಿದ್ಯಾಲಯಗಳ ಅಥ್ಲೆಟಿಕ್ಸ ಕ್ರೀಡಾಕೂಟ 

ದಾನವೀರ ಶ್ರೀ ಶಿರಸಂಗಿ ಲಿಂಗರಾಜ ದೇಸಾಯಿ, ಆಹಾರ ಅಭಿಯಂತ್ರಿಕ ತೋಟಗಾರಿಕೆ ಮಹಾವಿದ್ಯಾಲಯ, ದೇವಿಹೊಸುರ, ಹಾವೇರಿಯಲ್ಲಿ ನಡೆದ ೧೫ ನೇ ಅಂತರ ತೋಟಗಾರಿಕೆ ಮಹಾವಿದ್ಯಾಲಯಗಳ ಅಥ್ಲೇಟಿಕ್ಸ ಕ್ರೀಡಾ...
- Advertisement -

More Articles Like This

- Advertisement -
close
error: Content is protected !!
Join WhatsApp Group