ಮಗಳ ಬರ್ತ್‌ಡೇ ಆಚರಿಸಲು ಸುವರ್ಣ ಸೌಧ ಬಾಡಿಗೆಗೆ ಕೊಡುವಂತೆ ಸಭಾಪತಿಗೆ ಮನವಿ ಪತ್ರ ಬರೆದ ವಕೀಲ

Must Read

ಬೆಳಗಾವಿ: ಮಗಳ ಬರ್ತ್‌ಡೇ ಆಚರಣೆಗೆ ಸುವರ್ಣ ಸೌಧವನ್ನು ಬಾಡಿಗೆಗೆ ನೀಡುವಂತೆ ವಿಧಾನ ಪರಿಷತ್‌ ಸಭಾಪತಿಗೆ ವಕೀಲರೊಬ್ಬರು ಮನವಿ ಪತ್ರ ಸಲ್ಲಿಸಿರುವ ವಿಚಿತ್ರ ಘಟನೆ ನಡೆದಿದೆ.

ಬೆಳಗಾವಿ ಜಿಲ್ಲೆಯ ಗೋಕಾಕ ತಾಲೂಕಿನ ಬಡಿಗವಾಡ ಗ್ರಾಮದ ವಕೀಲ ಮಲ್ಲಿಕಾರ್ಜುನ ಚೌಕಾಶಿ ಹೆಸರಿನ ವ್ಯಕ್ತಿ ಸುವರ್ಣ ಸೌಧ ಬಾಡಿಗೆಗೆ ನೀಡುವಂತೆ ಸಭಾಪತಿಗೆ ಮನವಿ ಮಾಡಿದ್ದಾರೆ.

ಪತ್ರದಲ್ಲಿ ಏನಿದೆ?

ನನ್ನ ಏಕೈಕ ಪುತ್ರಿಯಾದ ಮಣಿಶ್ರೀಗೆ ಜನವರಿ 30ಕ್ಕೆ 5 ವರ್ಷ ಮುಗಿದು 6ನೇ ವರ್ಷ ತುಂಬಲಿದ್ದು, ಅವಳು 1ನೇ ತರಗತಿಯ ಪ್ರವೇಶ ಪಡೆಯಬೇಕಿದೆ. ಇದು ಅವಳ ಜೀವನದ ಅಮೂಲ್ಯ ಕ್ಷಣ.

ಹೀಗಾಗಿ ಅವಳ ಹುಟ್ಟುಹಬ್ಬವನ್ನು ಆಚರಿಸುವುದರೊಂದಿಗೆ ನಮ್ಮ ಭಾಗದಲ್ಲಿ ಚಿಕ್ಕ ಹೆಣ್ಣುಮಕ್ಕಳಿಗೆ ʼಹುಟ್ಟದಟ್ಟಿʼ ಮಾಡುವ ಪದ್ಧತಿಯಿದ್ದು, ಇದು ಕೂಡ ಜೀವನದಲ್ಲಿ ಒಮ್ಮೆ ಬರುವಂತಹದ್ದು.

ಆದ್ದರಿಂದ ವರ್ಷದಲ್ಲಿ 15 ದಿನ ಕಲರವದಿಂದ ಕೂಡಿ ಉಳಿದ ದಿನ ಭೂತ ಬಂಗ್ಲೆಯಂತಿರುವ ಕರ್ನಾಟಕ ಸುವರ್ಣ ವಿಧಾನಸೌಧ ಸಭಾಂಗಣವನ್ನು ಬಾಡಿಗೆ ನೀಡಬೇಕೆಂದು ವಿನಂತಿ.

ಈ ರೀತಿ ಕಾರ್ಯಕ್ರಮಗಳಿಗೆ ಬಾಡಿಗೆ ನೀಡುವುದರಿಂದ ಸರ್ಕಾರಕ್ಕೆ ಹೊರೆಯಾಗುತ್ತಿರುವ ಆರ್ಥಿಕ ನಿರ್ವಹಣಾ ವೆಚ್ಚವನ್ನು ಉಳಿಸಬಹುದು. ಸದ್ಯ ಅಧಿವೇಶನ ನಡೆಯುತ್ತಿದ್ದು, ಸದನದಲ್ಲಿ ಈ ವಿಷಯವನ್ನು ಚರ್ಚಿಸಿ ನಮಗೆ ಬಾಡಿಗೆ ನೀಡಬೇಕೆಂದು ಕಳಕಳಿಯ ವಿನಂತಿ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ಸದ್ಯ ಸುವರ್ಣ ಸೌಧದಲ್ಲಿ ಚಳಿಗಾಲದ ಅಧಿವೇಶನ ನಡೆಯುತ್ತಿದೆ. ಕರ್ನಾಟಕ-ಮಹಾರಾಷ್ಟ್ರ ಗಡಿ ವಿವಾದ ಸೇರಿದಂತೆ ಅನೇಕ ವಿಚಾರಗಳು ಚರ್ಚೆಯಾಗುತ್ತಿವೆ. ವಿವಿಧ ಅಭಿವೃದ್ಧಿ ವಿಷಯಗಳಿಗೆ ಸಂಬಂಧಿಸಿದಂತೆ ಆಡಳಿತ ಹಾಗೂ ವಿರೋಧ ಪಕ್ಷಗಳ ನಡುವೆ ವಾಕ್ಸಮರ ಕೂಡ ನಡೆಯುತ್ತಿದೆ.

ಇಂಥ ಸಂದರ್ಭದಲ್ಲಿ ವಕೀಲರೊಬ್ಬರು ವಿಧಾನ ಸೌಧ ಬಾಡಿಗೆಗೆ ಕೇಳಿದ್ದು ಆಡಳಿತ ಮತ್ತು ವಿರೋಧ ಪಕ್ಷಗಳಿಂದ ಯಾವ ರೀತಿಯ ಪ್ರತಿಕ್ರಿಯೆ ವ್ಯಕ್ತವಾಗುತ್ತದೆಯೆಂಬುದು ಕುತೂಹಲಕಾರಿಯಾಗಿದೆ.

1 COMMENT

Comments are closed.

Latest News

ಪ್ರಜಾಪ್ರಭುತ್ವದ ಮೌಲ್ಯಗಳಿಗೆ ಸಂವಿಧಾನವೇ ಆಧಾರ – ಈರಣ್ಣ ಕಡಾಡಿ

ಮೂಡಲಗಿ: ಬಲಿಷ್ಠ ಪ್ರಜಾಪ್ರಭುತ್ವ ಮೌಲ್ಯಗಳಿಗೆ ನಮ್ಮ ದೇಶದ ಶ್ರೇಷ್ಟ ಸಂವಿಧಾನವೇ ಆಧಾರ ಸ್ತಂಭವಾಗಿದೆ. ಪವಿತ್ರ ಸಂವಿಧಾನದ ಮೌಲ್ಯಗಳನ್ನು ಸದಾ ಪಾಲಿಸುವ ಜೊತೆಗೆ ದೇಶದ ಏಕತೆ, ವೈವಿಧ್ಯತೆ...

More Articles Like This

error: Content is protected !!
Join WhatsApp Group