ಬೀದರ್: ಪ್ರೀತ್ಸೆ ಪ್ರೀತ್ಸೆ ಎಂದು ಹಿಂದೆ ಬಿದ್ದಿದ್ದ ಮೆಡಿಕಲ್ ವಿದ್ಯಾರ್ಥಿ ಮದುವೆಗೆ ನಿರಾಕರಿಸಿದ್ದಕ್ಕೆ ಕತ್ತು ಹಿಸುಕಿ ಹುಡುಗಿಯನ್ನು ಕೊಲೆ ಮಾಡಿದ ಆಘಾತಕಾರಿ ಘಟನೆ ಬೀದರ್ ತಾಲೂಕಿನ ಸೋಲಪೂರ್ ಗ್ರಾಮದ ಕೆರೆಯ ಬಳಿ ನಡೆದಿದೆ.
18 ವರ್ಷದ ಶೀವಲೀಲಾ ಕೊಲೆಯಾದ ದುರ್ದೈವಿ ಹುಡುಗಿಯಾಗಿದ್ದು ಬ್ರೀಮ್ಸ್ ನಲ್ಲಿ ಪ್ಯಾರಾ ಮೆಡಿಕಲ್ ಓದುತ್ತಿದ್ದಳು. ತಾಲೂಕಿನ ಜಾಂಬೋಳ ಗ್ರಾಮದ ಶ್ರೀನಿವಾಸ ಎಂಬ ಆರೋಪಿ ಕಾಲೇಜಿನಿಂದ ಬೈಕ್ ಮೇಲೆ ಅವಳನ್ನು ಕೆರೆಯ ಬಳಿ ಕರೆದುಕೊಂಡು ಹೋಗಿ ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ.
ಕೊಲೆ ಮಾಡಿ ಪರಾರಿಯಾಗಿದ್ದ ಆರೋಪಿಯನ್ನು ಬಂಧಿಸಿ ಪೊಲೀಸರು ನ್ಯಾಯಾಂಗ ಬಂಧನಕ್ಕೆ ನೀಡಿದ್ದಾರೆ. ಮೂಲತಃ ಬೀದರ್ ತಾಲೂಕಿನ ಮಲ್ಲಿಕ್ ಮಿರ್ಜಾಪೂರ್ ಗ್ರಾಮದ ಹುಡುಗಿಯಾಗಿದ್ದು ಬೀದರ್ ನಗರದ ಮಂಗಲ್ ಪೇಟೆಯಲ್ಲಿ ತಾಯಿ ಜೊತೆ ವಾಸವಾಗಿದ್ದಳು. ಈ ಕುರಿತು ಬೀದರ್ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೊಲೀಸರು ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ.
ವರದಿ: ನಂದಕುಮಾರ ಕರಂಜೆ, ಬೀದರ