ಸಿಂದಗಿ: ರಾಂಪೂರ (ಪ.ಅ) ಗ್ರಾಮ ಪಂಚಾಯತಿಯ ಅಭಿವೃದ್ಧಿ ಅಧಿಕಾರಿ ಜ್ಯೋತಿ ಶಿಗ್ಗಾಂವಿ ಮತ್ತು ಗ್ರಾ.ಪಂ ನ ಅಧ್ಯಕ್ಷ ನಿಂಗಣ್ಣ ಬಿಸನಾಳ ಮತ್ತು ಜೆ.ಇ ಶಂಕರ ಪೂಜಾರಿ ಇವರುಗಳು ಸೇರಿಕೊಂಡು ಗ್ರಾಮ ಪಂಚಾಯತಿಯ ಸದಸ್ಯರ ಗಮನಕ್ಕೆ ತರದೇ ಸಾಮಾನ್ಯ ಸಭೆ ನಡೆಸಿ ಗ್ರಾಮ ಪಂಚಾಯತಿಯಲ್ಲಿನ ಹಗರಣಗಳನ್ನು ಮುಚ್ಚಿಹಾಕುವ ಹುನ್ನಾರ ನಡೆಸಿದ್ದಾರೆ ಎಂದು ಗ್ರಾಮ ಪಂಚಾಯತ ಸದಸ್ಯೆ ಬಿಸ್ಮಿಲ್ಲಾ ಮುಲ್ಲಾ ರವರು ಆರೋಪಿಸಿದ್ದಾರೆ.
ತಾಲೂಕಿನ ರಾಂಪೂರ (ಪ.ಅ) ಗ್ರಾಮ ಪಂಚಾಯತಿಯಲ್ಲಿನ ದುರಾಡಳಿತದ ವಿರುದ್ಧ ಪತ್ರಿಕಾ ಹೇಳಿಕೆ ನೀಡುತ್ತಾ ಮಾತನಾಡಿದ ಅವರು, ಸದರಿ ನಮ್ಮ ಗ್ರಾಮ ಪಂಚಾಯತಿಗೆ ಈ ಹಿಂದೆ ಫೆ. 28 ರಂದು ಸಾಮಾನ್ಯ ಸಭೆ ನಡೆಸಲು ತೀರ್ಮಾನಿಸಿ ಎಲ್ಲ ಸದಸ್ಯರಿಗೂ ನೋಟಿಸ್ ಕೂಡಾ ಜಾರಿ ಮಾಡಿದ್ದರು. ಆದರೇ ಏಕಾ ಏಕಿ ಯಾರ ಗಮನಕ್ಕೂ ತರದೇ ಫೆ. 28 ರಂದು ನಡೆಯಬೇಕಿದ್ದ ಸಾಮಾನ್ಯ ಸಭೆಯನ್ನು ರದ್ದುಗೊಳಿಸಿ ಸಭೆಯನ್ನು ಮುಂದುಡಲಾಗಿತ್ತು. ಆದರೆ ಮಾ. 02 ರಂದು ಗ್ರಾಮ ಪಂಚಾಯತಿಯ ಸದಸ್ಯರ ಗಮನಕ್ಕೆ ತರದೇ ಬೇಕಾ ಬಿಟ್ಟಿಯಾಗಿ ತಮ್ಮ ಹಿಂಬಾಲಕರನ್ನು ಸೇರಿಸಿಕೊಂಡು ಸಾಮಾನ್ಯ ಸಭೆ ನಡೆಸಿದ್ದಾರೆ. ಇದರಿಂದಾಗಿ ಗ್ರಾಮ ಪಂಚಾಯತ ಸದಸ್ಯರ ಹಕ್ಕುಚುತಿಯಾದಂತಾಗಿದೆ. ಇದನ್ನು ಸಾರ್ವಜನಿಕರು ಮತ್ತು ಸದಸ್ಯರ ಪ್ರತಿನಿಧಿಗಳು ಪ್ರಶ್ನಿಸಿದರೆ ಅಭಿವೃದ್ಧಿ ಅಧಿಕಾರಿಯಾದ ಜ್ಯೋತಿ ಶಿಗ್ಗಾಂವಿ ರವರು ಇದು ಸಾರ್ವಜನಿಕರ ಸಭೆಯಲ್ಲ ಎಂದು ಉಡಾಫೆ ಉತ್ತರ ನೀಡಿ ತಮ್ಮ ಹಗರಣಗಳಿಗೆ ಬೆಂಬಲ ನೀಡುವ ಸದಸ್ಯರ ಪ್ರತಿನಿಧಿಗಳನ್ನು ಸಭೆಯಲ್ಲಿ ಇರಲು ಅನುಮತಿ ನೀಡಿ ಭ್ರಷ್ಟಾಚಾರವನ್ನು ಪ್ರಶ್ನಿಸಿದ ಸಾಮಾಜಿಕ ಹೋರಾಟಗಾರರನ್ನು ಮತ್ತು ಗ್ರಾಮಸ್ಥರನ್ನು ಸಭೆಯಿಂದ ಹೊರದೂಡಲಾಗಿದೆ ಎಂದು ಗಂಭೀರ ಆರೋಪ ಮಾಡಿದ್ದಾರೆ. ಇದರೊಂದಿಗೆ ರಾಂಪೂರ ಗ್ರಾಮ ಪಂಚಾಯತಿಯಲ್ಲಿ ಪಿ.ಡಿ.ಓ, ಅಧ್ಯಕ್ಷರು ಸೇರಿಕೊಂಡು ತುಗಲಕ್ ದರ್ಭಾರ ನಡೆಸುತ್ತಿದ್ದಾರೆ ಎಂದು ಆರೋಪಿಸಿದರು.
ಬಳಿಕ ಮಾತನಾಡಿದ ಗ್ರಾಮ ಪಂಚಾಯತ ಸದಸ್ಯ ಮೈಬೂಬ ಜಮಾದಾರ ಪಂಚಾಯತಿಯಲ್ಲಿ 3 ವರ್ಷದಿಂದಲೂ ಕೋಟಿಗಟ್ಟಲೇ ಹಗರಣ ನಡೆಯುತ್ತಿದೆ. ಸರ್ಕಾರದಿಂದ ಬಂದ ಅನುಧಾನದ ಲೆಕ್ಕ ಪತ್ರ ಹಾಗೂ ಬ್ಯಾಂಕ್ ಸ್ಟೇಟ್ ಮೆಂಟ್ ಗಳನ್ನು ಪರೀಶಿಲಿಸಿದರೆ ಸಾಕು ಇವರ ಸಂಪೂರ್ಣ ಹಗರಣ ಹೊರ ಬಿಳುತ್ತದೆ. ತರಾತುರಿಯಲ್ಲಿ ಗ್ರಾಮ ಪಂಚಾಯತ ಸದಸ್ಯರ ಗಮನಕ್ಕೆ ತರದೇ ಸಾಮಾನ್ಯ ಸಭೆ ನಡೆಸಿ ಸರಕಾರದಿಂದ ಬಂದಿ ಅನುಧಾನವನ್ನು ನುಂಗಿ ಹಾಕಲು ಹೊಂಚು ಹಾಕಿದ್ದಾರೆ. ಕೂಡಲೇ ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮತ್ತು ತಾಲೂಕ ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿಗಳು ಸ್ವಲ್ಪ ಈಕಡೆ ಗಮನ ಹರಿಸಿ ಇವರು ನಡೆಸಿದ ಅನಧಿಕೃತ ಸಾಮಾನ್ಯ ಸಭೆಯನ್ನು ರದ್ದು ಪಡಿಸಿ ಪಂಚಾಯತಿ ವ್ಯಾಪ್ತಿಯ ಎಲ್ಲ ಸಾರ್ವಜನಿಕರ ಎದುರು ಸಭೆ ನಡೆಸಿ ಇಲ್ಲಿನ ಸಮಸ್ಯೆಗಳನ್ನು ಇತ್ಯರ್ಥಪಡಿಸಬೇಕು.
ಇನ್ನೂ ಈ ರೀತಿಯಾಗಿ ಅನಧಿಕೃತವಾಗಿ ಸಾಮಾನ್ಯ ಸಭೆ ನಡೆಸಿದ ಪಿ.ಡಿ.ಓ ಮತ್ತು ಜೆ.ಇ ಇವರನ್ನು ಅಮಾನತ್ತಿನಲ್ಲಿಡಬೇಕೆಂದು ಗ್ರಾಮದ ಸಾರ್ವಜನಿಕರು, ಹಾಗೂ ಕೆಲ ಸದಸ್ಯರು ಮತ್ತು ಪ್ರತಿನಿಧಿಗಳು ಆಗ್ರಹಿಸಿದರು.