ಬೀದರ: ಬೊಲೆರೊ ವಾಹನದಲ್ಲಿ ವಿಶೇಷವಾಗಿ ಮಾಡಲಾಗಿದ್ದ ಸೀಕ್ರೇಟ್ ಚೇಂಬರ್ ನಲ್ಲಿ ಸಾಗಾಟ ಮಾಡಲಾಗುತ್ತಿದ್ದ ಗಾಂಜಾವನ್ನು ಬೀದರ ಪೊಲೀಸರು ಪತ್ತೆ ಮಾಡಿದ್ದಾರೆ.
ತೆಲಂಗಾಣದಿಂದ ಮಹಾರಾಷ್ಟ್ರ ರಾಜ್ಯಕ್ಕೆ ಸಾಗಿಸಲಾಗುತ್ತಿತ್ತು ಎಂದು ಮಾಹಿತಿ ಸಿಕ್ಕಿದ್ದು ಔರಾದ್ ತಾಲೂಕಿನ ಏಕಂಬಾ ಚೆಕ್ ಪೋಸ್ಟ್ ಬಳಿ ತಪಾಸಣೆ ವೇಳೆ ಮುಂಬೈಗೆ ಸಾಗಿಸುತ್ತಿದ್ದ 1ಕೋಟಿ, 30 ಲಕ್ಷದ ಗಾಂಜಾ ಸೀಜ್ ಮಾಡಿದ್ದಾರೆ.
ಗಾಂಜಾ ಸಾಗಿಸುತ್ತಿದ್ದ ಇಬ್ಬರನ್ನು ವಶಕ್ಕೆ ಪಡೆದಿರುವ ಪೊಲೀಸರು ವಿಚಾರಣೆಗೆ ಒಳಪಡಿಸಿದ್ದಾರೆ. ಬೊಲೆರೊ ವಾಹನದಲ್ಲಿ ಸೀಕ್ರೇಟ್ ಚೇಂಬರ್ ಮಾಡಿಕೊಂಡಿದ್ದ ಖದೀಮರನ್ನು ಹೆಡೆಮುರಿ ಕಟ್ಟಿದ ಪೊಲೀಸರ ಕ್ರಮಕ್ಕೆ ಎಲ್ಲೆಡೆ ಪ್ರಶಂಸೆ ವ್ಯಕ್ತವಾಗಿದೆ.
ಇನ್ನೊಂದು ಪ್ರಕರಣದಲ್ಲಿ ಬಸ್ ನಲ್ಲಿ ಗಾಂಜಾ ಸಾಗಿಸುತ್ತಿದ್ದ ವೇಳೆ ದಾಳಿ ನಡೆಸಲಾಗಿದೆ. ಬೀದರ್ ನಿಂದ ಹುಮನಾಬಾದ್ ಗೆ ಬಸ್ ನಲ್ಲಿ ಗಾಂಜಾ ಸಾಗಿಸುತ್ತಿದ್ದ ತೆಲಂಗಾಣ ಮೂಲದ ವ್ಯಕ್ತಿಯಿಂದ 10 ಲಕ್ಷ ರೂ. ಮೌಲ್ಯದ 20 ಕೆ.ಜಿ ಗಾಂಜಾ ಜಪ್ತಿ ಮಾಡಿ, ವ್ಯಕ್ತಿಯನ್ನು ಅರೆಸ್ಟ್ ಮಾಡಿದ್ದಾರೆ.
ಇದರಿಂದ ಬೀದರ್ ಜಿಲ್ಲೆಯಲ್ಲಿ ಮೂರು ತಿಂಗಳಲ್ಲಿ 11 ಪ್ರಕರಣ ದಾಖಲು ಮಾಡಲಾಗಿದೆ. ಅಕ್ರಮವಾಗಿ ಸಾಗಿಸುತ್ತಿದ್ದ 800 ಕೆಜಿ ಗಾಂಜಾ ವಶಕ್ಕೆ ಪಡೆಯಲಾಗಿದೆ ಎಂದು ಅನುಪಮ ಅಗರವಾಲ್ ಡಿಐಜಿ ಈಶಾನ್ಯ ವಲಯ ಕಲಬುರಗಿ ಪೊಲೀಸ್ ವರಿಷ್ಠಾಧಿಕಾರಿ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ವರದಿ: ನಂದಕುಮಾರ ಕರಂಜೆ, ಬೀದರ